27 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರಕ್ಕೆ

By Web DeskFirst Published Jul 13, 2019, 11:50 AM IST
Highlights

2006ರಿಂದ 2016ರ ಒಂದು ದಶಕದ ಅವಧಿಯಲ್ಲಿ ಭಾರತ, ಬಾಂಗ್ಲಾದೇಶ, ಕಾಂಗೋ, ಇಥಿಯೋಪಿಯಾ, ಹೈಟಿ, ನೈಜೀರಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ- ಈ 10 ದೇಶಗಳು ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವಲ್ಲಿ ಗಣನೀಯ ಪ್ರಗತಿ ದಾಖಲಿಸಿವೆ ಎಂದು ವಿಶ್ವಸಂಸ್ಥೆ ಹೇಳಿದೆ. 

ವಿಶ್ವಸಂಸ್ಥೆ [ಜು.13]: 2006ರಿಂದ 2016ರ ಅವಧಿಯಲ್ಲಿ 27.1 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿದೆ.

2019ರ ಬಹು ಆಯಾಮದ ಬಡತನ ಸೂಚ್ಯಂಕ ಗುರುವಾರ ವಿಶ್ವಸಂಸ್ಥೆಯಲ್ಲಿ ಬಿಡುಗಡೆ ಆಗಿದೆ. ಕಡಿಮೆ ಆದಾಯದ 31, ಮಧ್ಯಮ ಆದಾಯದ 68 ಹಾಗೂ ಅಧಿಕ ಆದಾಯದ 2 ದೇಶಗಳು ಸೇರಿದಂತೆ ಒಟ್ಟು 101 ದೇಶಗಳ ಜನರ ಬಡತನ ಸ್ಥಿತಿಯನ್ನು ಅಧ್ಯಯನ ನಡೆಸಿ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ, ಆಕ್ಸ್‌ಫರ್ಡ್‌ ಪಾವರ್ಟಿ ಮತ್ತು ಹ್ಯೂಮನ್‌ ಡೆವೆಲಪ್‌ಮೆಂಟ್‌ ಸಂಸ್ಥೆಗಳು ವರದಿಯನ್ನು ಸಿದ್ಧಪಡಿಸಿವೆ.

2006ರಿಂದ 2016ರ ಒಂದು ದಶಕದ ಅವಧಿಯಲ್ಲಿ ಭಾರತ, ಬಾಂಗ್ಲಾದೇಶ, ಕಾಂಗೋ, ಇಥಿಯೋಪಿಯಾ, ಹೈಟಿ, ನೈಜೀರಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ- ಈ 10 ದೇಶಗಳು ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವಲ್ಲಿ ಗಣನೀಯ ಪ್ರಗತಿ ದಾಖಲಿಸಿವೆ. ಈ ಅವಧಿಯಲ್ಲಿ ಜನರ ಆಸ್ತಿ, ಅಡುಗೆ ಅನಿಲ, ನೈರ್ಮಲ್ಯ ಮತ್ತು ಪೌಷ್ಟಿಕಾಂಶದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ 27.1 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 2005​-2006ರ ಅವಧಿಯಲ್ಲಿ ಭಾರತದಲ್ಲಿ ಬಹು ಆಯಾಮದ ಬಡತನ 64 ಕೋಟಿ (ಶೇ.55.1)ಯಷ್ಟಿತ್ತು. ಈ ಪ್ರಮಾಣ 2015​-16ರ ವೇಳೆಗೆ 36.9 ಕೋಟಿ (ಶೇ.27.9)ಗೆ ಇಳಿಕೆಯಾಗಿದೆ.

click me!