ಅಪ್ಪ – ಮಕ್ಕಳಿಗೆ ರಾಹುಲ್ ಟಿಕೆಟ್ ಕೊಡುತ್ತಾರಾ..? ಮಕ್ಕಳಿಗೆ ಟಿಕೆಟ್ ಕೇಳಿದ್ಯಾರು..?

By Prashanth NathuFirst Published Jan 16, 2018, 12:59 PM IST
Highlights

ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಬಹುತೇಕ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಮಗ ಅಥವಾ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೀಗೆ ಸಾರಾಸಗಟಾಗಿ ಅಪ್ಪ ಮಕ್ಕಳಿಗೆ ಅಕ್ಕಪಕ್ಕದಲ್ಲಿಯೇ ಟಿಕೆಟ್ ನೀಡೋದು ಕಷ್ಟವಂತೆ.

ಬೆಂಗಳೂರ (ಜ.16): ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಬಹುತೇಕ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಮಗ ಅಥವಾ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೀಗೆ ಸಾರಾಸಗಟಾಗಿ ಅಪ್ಪ ಮಕ್ಕಳಿಗೆ ಅಕ್ಕಪಕ್ಕದಲ್ಲಿಯೇ ಟಿಕೆಟ್ ನೀಡೋದು ಕಷ್ಟವಂತೆ.

ಹೀಗಾಗಿ ನೇರವಾಗಿ ಮಕ್ಕಳಿಗೆ ಟಿಕೆಟ್ ಕೊಡಿ ಎಂದು ಕೇಳಿದ ಒಬ್ಬ ಹಿರಿಯ ನಾಯಕರಿಗೆ ರಾಹುಲ್ ಆಪ್ತರೊಬ್ಬರು ‘ಪಕ್ಷ ಈ ಬಗ್ಗೆ ಪಾಲಿಸಿ ನಿರ್ಣಯ ತೆಗೆದುಕೊಳ್ಳುತ್ತದೆ. ಅಕ್ಕ ಪಕ್ಕದಲ್ಲಿ ತಂದೆ ಮತ್ತು ಮಗ ಚುನಾವಣೆಗೆ ನಿಂತರೆ ಕಾರ್ಯಕರ್ತರು ಬೇಸರಗೊಳ್ಳಬಹುದು. ನೋಡೋಣ, ಗೆಲ್ಲೋದು ಮುಖ್ಯ’ ಎಂದು ಹೇಳಿ ಕಳುಹಿಸಿದ್ದಾರೆ. ದೇವೇಗೌಡರು ಮಗನಿಗೆ ಪ್ರಾತಿನಿಧ್ಯ ಕೊಡುತ್ತಿದ್ದಾರೆ ಎಂದು ಜೆಡಿಎಸ್ ಬಿಟ್ಟು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್‌ಸಿ ಮಹಾದೇವಪ್ಪ ತಮ್ಮ ಕ್ಷೇತ್ರಗಳಾದ ವರುಣ ಮತ್ತು ಟಿ.ನರಸೀಪುರ ಕ್ಷೇತ್ರಗಳನ್ನು ಮಕ್ಕಳಿಗೆ ಬಿಟ್ಟು ತಾವು ಬೇರೆ ಕಡೆ ನಿಲ್ಲುವುದಾಗಿ ಈಗಾಗಲೇ ಹೇಳಿಬಿಟ್ಟಿದ್ದಾರೆ.

ಇನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ತನಗೆ ಬಿಟಿಎಂ ಲೇಔಟ್ ಮತ್ತು ಮಗಳಿಗೆ ಜಯನಗರದಿಂದ, ಇನ್ನೊಬ್ಬ ಹಿರಿಯ ಸಚಿವ ಟಿ ಬಿ ಜಯಚಂದ್ರ ತನಗೆ ಶಿರಾದಿಂದ, ಮಗನಿಗೆ ಪಕ್ಕದ ಚಿಕ್ಕನಾಯಕನ ಹಳ್ಳಿಯಿಂದ ಟಿಕೆಟ್ ಕೇಳುತ್ತಿದ್ದಾರೆ. ಸಂಸದ ಕೆ.ಎಚ್ ಮುನಿಯಪ್ಪ ತನ್ನದೇ ಲೋಕಸಭಾ ಕ್ಷೇತ್ರದಲ್ಲಿ ಮಗಳಿಗೆ ಟಿಕೆಟ್ ಕೊಡಬೇಕೆಂದು ದೆಹಲಿಯಲ್ಲಿ ಸಾಕಷ್ಟು ಬಾರಿ ನಾಯಕರಿಗೆ ದಂಡವತ್ ಹಾಕುತ್ತಿದ್ದಾರೆ. ಇನ್ನು ರೋಷನ್ ಬೇಗ್ ಕೂಡ ಹೇಗೂ ರೆಹಮಾನ್ ಖಾನ್ ಸೀಟ್ ಖಾಲಿಯಾಗುತ್ತಿದೆ, ಮಗನಿಗೆ ಶಿವಾಜಿ ನಗರದಿಂದ ಕೊಡಿ. ನನ್ನನ್ನು ರಾಜ್ಯಸಭೆಗೆ ಕಳುಹಿಸಿ ಎಂದು ಗುಲಾಂ ನಬಿ ಮತ್ತು ಅಹ್ಮದ್ ಪಟೇಲ್ ಬಳಿ ಹೇಳಿ ಹೋಗಿದ್ದಾರೆ.

ಇನ್ನೂ ಒಂದು ಆಶ್ಚರ್ಯ ಎಂದರೆ ಶಾಸಕ ಹ್ಯಾರಿಸ್ ಕೂಡ ತನ್ನ ಮಗನಿಗೆ ಟಿಕೆಟ್ ಕೇಳಬಹುದು ಎಂದು ಮಲೆಯಾಳಿ ಲಾಬಿ ಹೇಳುತ್ತಿದ್ದು, ಅಪ್ಪ ಮಕ್ಕಳ ದೊಡ್ಡ ಪಟ್ಟಿಯೇ ಹೈಕಮಾಂಡ್ ಮುಂದಿದೆ. ಹೈಕಮಾಂಡ್ ಮೂಲಗಳು ಹೇಳುತ್ತಿರುವ ಪ್ರಕಾರ, ಇಂಥ ಕ್ಷೇತ್ರಗಳ ಬಗ್ಗೆ ಅಂತಿಮವಾಗಿ ರಾಹುಲ್ ಗಾಂಧಿಯೇ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ವಿಪರ್ಯಾಸ ಎಂದರೆ ಸ್ವತಃ ರಾಹುಲ್ ಗಾಂಧಿ ಕೂಡ ತನ್ನ ತಾಯಿಯ ಕ್ಷೇತ್ರ ರಾಯ್ ಬರೇಲಿ ಪಕ್ಕದ ಅಮೇಥಿಯಿಂದಲೇ ರಾಜಕಾರಣಕ್ಕೆ ಬಂದವರು.

click me!