
ನವದೆಹಲಿ (ಸೆ. 05): ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮೆಹಮೂದ್, ಜಮಾದ್-ಉದ್-ದವಾ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್, ಲಷ್ಕರ್ ಕಮಾಂಡರ್ ಝಾಕಿರ್-ಉರ್-ರೆಹ್ಮಾನ್ ಲಖ್ವಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕಿಗತ ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಸರ್ಕಾರ ಘೋಷಿಸಿದೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆಯನ್ವ (ಯುಎಪಿಎ)ಯ, ಕೇಂದ್ರ ಗೃಹ ಇಲಾಖೆ ಮೊದಲ ಬಾರಿಗೆ ವ್ಯಕ್ತಿಗತ ಉಗ್ರರ ಪಟ್ಟಿಘೋಷಣೆ ಮಾಡಿದೆ.
ಈ ಹಿಂದಿನ ಯುಎಪಿಎ ಕಾಯ್ದೆಯ ಅನ್ವಯ ಗುಂಪನ್ನು ಮಾತ್ರವೇ ಉಗ್ರ ಸಂಘಟನೆ ಎಂದು ಘೋಷಿಸಬಹುದಿತ್ತು. ಆದರೆ ಕಾಯ್ದೆಗೆ ತಿದ್ದು ಪಡಿ ತಂದ ಬಳಿಕ ಇದೀಗ ಒಬ್ಬ ವ್ಯಕ್ತಿಯನ್ನು ಕೂಡಾ ಉಗ್ರ ಎಂದು ಪರಿಗಣಿಸಬಹುದಾಗಿದೆ.
ಈ ಹಿಂದೆ ಉಗ್ರ ಸಂಘಟನೆಗಳನ್ನು ನಿಷೇಧಿಸಿದಾಗ, ಉಗ್ರರು ತಮ್ಮ ಸಂಘಟನೆಗಳ ಹೆಸರು ಬದಲಾಯಿಸಿ ಸುಲಭವಾಗಿ ಬಚಾವ್ ಆಗುತ್ತಿದ್ದರು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇದೀಗ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲಾಗುತ್ತಿದೆ. ಹೀಗಾಗಿ ಅವರು ಯಾವುದೇ ಹೆಸರಿನಲ್ಲಿ ಸಂಘಟನೆ ನಡೆಸಿದರೂ ಉಗ್ರರಾಗಿಯೇ ಪರಿಗಣಿಸಲ್ಪಡುತ್ತಾರೆ. ಅಲ್ಲದೇ ಇದು ವಿಶ್ವಸಂಸ್ಥೆಯ ನಿಯಮಾವಳಿ ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಪೂರಕವಾಗಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆಗೆ ರಾಜ್ಯಸಭಾ ಅನುಮೋದನೆ ಸಿಕ್ಕ ಬಳಿಕ ಮೊದಲ ಪ್ರಕರಣ ಇದಾಗಿದ್ದು, 45 ದಿನಗಳ ಒಳಗಾಗಿ ಕೇಂದ್ರ ಗೃಹ ಕಾರ್ಯದರ್ಶಿಗೆ ಘೋಷಣೆ ರದ್ದು ಕೋರಿ ಮನವಿ ಸಲ್ಲಿಸಬಹದು.
ಅಲ್ಲದೇ ಹಾಲಿ ಅಥವಾ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಕನಿಷ್ಠ ಇಬ್ಬರು ಮಾಜಿ ಕಾರ್ಯದರ್ಶಿಗಳಿರುವ ಪರಿಶೀಲನಾ ಸಮಿತಿ ಸರ್ಕಾರದ ಘೋಷಣೆ ವಿರುದ್ಧ ಮನವಿ ಸಲ್ಲಿಸಬಹುದು. ಒಂದು ವೇಳೆ ವ್ಯಕ್ತಿ ಉಗ್ರಗಾಮಿ ಎಂದು ಗೊತ್ತುಪಡಿಸಿದರೆ ಆತನ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ. ಅಲ್ಲದೇ ಆತನಿಗೆ ಸಂಬಂಧಿಸಿದ ದಾಖಲೆಗಳನ್ನು ವಿದೇಶಿ ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.