ಸಾರ್ಕ್'ಗೆ ಗುಡ್'ಬೈ? ಭಾರತ ಮತ್ತು ಪಾಕ್ ಕವಲು ದಾರಿ? ಪಾಕ್ ತೆಕ್ಕೆಗೆ ಇರಾನ್ ಬಿದ್ದರೆ ಭಾರತಕ್ಕೆ ಅಪಾಯ

By vijaysarathy -First Published Oct 12, 2016, 4:30 PM IST
Highlights

ಪಾಕಿಸ್ತಾನವು ಮಧ್ಯ ಏಷ್ಯಾ ಭಾಗದಲ್ಲಿ ಪ್ರತ್ಯೇಕ ಗುಂಪು ರಚಿಸಲು ಪ್ರಯತ್ನಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಇರುವ ಆರ್ಥಿಕ ಕಾರಿಡಾರ್(ಸಿಪೆಕ್) ಯೋಜನೆಗೆ ಇರಾನ್, ಆಫ್ಘಾನಿಸ್ತಾನ ಹಾಗೂ ಐದು ಮಧ್ಯ ಏಷ್ಯನ್ ರಾಷ್ಟ್ರಗಳನ್ನು ಜೋಡಿಸಿಕೊಳ್ಳಲು ಪಾಕ್ ಯೋಜಿಸುತ್ತಿದೆ.

ನವದೆಹಲಿ(ಅ. 12): ನವೆಂಬರ್'ನಂದು ನಡೆಯಬೇಕಿದ್ದ ಸಾರ್ಕ್ ಶೃಂಗಸಭೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಸಾರ್ಕ್ ಒಕ್ಕೂಟದ ಮುಂದಿನ ದಾರಿಯ ಬಗ್ಗೆ ಅನುಮಾನಗಳು ಮೂಡಲು ಆರಂಭಿಸಿವೆ. ಸಾರ್ಕ್ ರಾಷ್ಟ್ರಗಳೊಳಗೆ ಒಳಗುಂಪುಗಳು ರಚನೆಯಾಗುವ ಸಾಧ್ಯತೆ ಇದೆ. ಭಾರತವು ಬಹಳ ದಿನದಿಂದ ಬಿಮ್ಸ್'ಟೆಕ್(BIMSTEC) ಗುಂಪನ್ನು ರಚಿಸಲು ಯೋಜಿಸಿತ್ತು. ಇದೀಗ ಈ ಬಿಮ್ಸ್'ಟೆಕ್ ರಾಷ್ಟ್ರಗಳ ಶೃಂಗಸಭೆಯನ್ನು ಮುಂದಿನ ವಾರ ಗೋವಾದಲ್ಲಿ ಆಯೋಜಿಸಲಾಗುತ್ತಿದೆ. ಈ ಗುಂಪಿನಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶ, ಮಯನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳ ದೇಶಗಳಿವೆ. ಬಿಮ್ಸ್'ಟೆಕ್ ಎಂಬುದು ಒಂದು ರೀತಿಯಲ್ಲಿ ಬಂಗಾಳ ಕೊಲ್ಲಿ ದೇಶಗಳ ಸಂಯೋಜನೆಯಾಗಿದೆ.

ಭಾರತದ ಕವಲು ದಾರಿಗೆ ಪಾಕ್ ಕಾರಣ?
ಕಠ್ಮಂಡುವಿನಲ್ಲಿ ನಡೆದಿದ್ದ 2014ರ ಸಾರ್ಕ್ ಶೃಂಗಸಭೆಯಲ್ಲಿ ಭಾರತವು ಪ್ರಾದೇಶಿಕ ಮೋಟಾರ್ ವಾಹನಗಳ ವ್ಯವಸ್ಥೆ ಜಾರಿಗೆ ತರಲು ಪ್ರಸ್ತಾಪಿಸಿತ್ತು. ಆದರೆ, ಭಾರತದ ಯತ್ನಕ್ಕೆ ಪಾಕಿಸ್ತಾನ ಅಡ್ಡಗಾಲು ಹಾಕಿತ್ತು. ಆಗ ಭಾರತವು ತನ್ನ ಪ್ರದೇಶದಲ್ಲಿ ಪ್ರತ್ಯೇಕ ಗುಂಪುನ್ನು ರಚಿಸಲು ದೃಢ ನಿಶ್ಚಯ ಮಾಡಿತೆನ್ನಲಾಗಿದೆ. ಅದರಂತೆ ಬಿಬಿನ್(BBIN) ಗುಂಪು ರಚಿಸಿ ತನ್ನ ಮೋಟಾರ್ ವಾಹನ ವ್ಯವಸ್ಥೆ ಅಳವಡಿಸಿತು. ಇದೀಗ ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ದೇಶಗಳಲ್ಲಿ ವಾಹನ ಸವಾರರು ಯಾವುದೇ ಪ್ರತ್ಯೇಕ ಸಂಚಾರ ಪರವಾನಗಿ ಇಲ್ಲದೆಯೇ ಮುಕ್ತವಾಗಿ ಸಂಚರಿಸಬಹುದಾಗಿದೆ.

ಇನ್ನೊಂದೆಡೆ ಪಾಕಿಸ್ತಾನವು ಮಧ್ಯ ಏಷ್ಯಾ ಭಾಗದಲ್ಲಿ ಪ್ರತ್ಯೇಕ ಗುಂಪು ರಚಿಸಲು ಪ್ರಯತ್ನಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಇರುವ ಆರ್ಥಿಕ ಕಾರಿಡಾರ್(ಸಿಪೆಕ್) ಯೋಜನೆಗೆ ಇರಾನ್, ಆಫ್ಘಾನಿಸ್ತಾನ ಹಾಗೂ ಐದು ಮಧ್ಯ ಏಷ್ಯನ್ ರಾಷ್ಟ್ರಗಳನ್ನು ಜೋಡಿಸಿಕೊಳ್ಳಲು ಪಾಕ್ ಯೋಜಿಸುತ್ತಿದೆ.

ಇರಾನ್ ನಿರ್ಧಾರ ಭಾರತಕ್ಕೆ ಮುಖ್ಯ:
ಪಾಕಿಸ್ತಾನದ ಸಿಪೆಕ್ ಯೋಜನೆಗೆ ಸೇರಿಕೊಳ್ಳಲು ಇರಾನ್ ಒಪ್ಪಿದ್ದೇ ಆದಲ್ಲಿ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ. ಯಾಕೆಂದರೆ, ಇರಾನ್'ನಲ್ಲಿ ಛಬಹಾರ್ ಪೋರ್ಟ್ ಯೋಜನೆಗೆ ಭಾರತವು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ಸಿಪೆಕ್ ಯೋಜನೆಯ ಅಂತಿಮ ಭಾಗವು ಇರುವುದು ಗ್ವದಾರ್'ನಲ್ಲಿ. ಈ ಗ್ವದಾರ್ ಎಂಬುದು ಛಬಹಾರ್'ನಿಂದ ಕೇವಲ 70 ಕಿಮೀ ದೂರದಲ್ಲಿದೆ. ಒಂದು ವೇಳೆ, ಸಿಪೆಕ್ ಯೋಜನೆಗೆ ಇರಾನ್ ಒಲವು ತೋರಿದರೆ ಭಾರತಕ್ಕೆ ಛಬಹಾರ್ ಕಾಮಗಾರಿ ಕೈತಪ್ಪಿಹೋಗುವ ಸಾಧ್ಯತೆ ಇದೆ. ಒಂದು ಯೋಜನೆ ಕೈತಪ್ಪಿದರೆ ಅಂತಹದ್ದೇನು ಅನಾಹುತ ಸಂಭವಿಸದೇ ಇರಬಹದು. ಆದರೆ, ಇರಾನ್'ನಲ್ಲಿ ತನ್ನ ಉಪಸ್ಥಿತಿಯೇ ಇಲ್ಲದಂತಾಗಿಬಿಡಬಹುದು ಎಂಬ ಆತಂಕ ಭಾರತಕ್ಕಿದೆ. ಇರಾನ್ ಮುಖಾಂತರ ಆಫ್ಘಾನಿಸ್ತಾನವನ್ನು ಸಂಪರ್ಕಿಸುವ ಭಾರತದ ಪ್ರಯತ್ನಕ್ಕೆ ಭಾರೀ ಹಿನ್ನಡೆಯುಂಟಾಗಲಿದೆ.

(ಮಾಹಿತಿ ಕೃಪೆ: ಜಾಕಾ ಜೇಕಬ್, ಸಿಎನ್'ಎನ್ ನ್ಯೂಸ್18)

click me!