ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಒಂದೂ ಇಲ್ಲ ಹೆಣ್ಣು!

By Web DeskFirst Published Jul 22, 2019, 12:49 PM IST
Highlights

ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಆದ್ರೆ ಒಂದೂ ಹೆಣ್ಮಗು ಇಲ್ಲ!| ಆಡಳಿತ ವಲಯದಲ್ಲಿ ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ನೀಡಿದ ದತ್ತಾಂಶ| ಆಶಾ ಕಾರ್ಯಕರ್ತೆಯರ ತುರ್ತು ಸಭೆ ಕರೆದ ಜಿಲ್ಲಾಧಿಕಾರಿ

ಡೆಹ್ರಾಡೂನ್[ಜು.22]: ಒಂದೆಡೆ ದೇಶ ಚಂದ್ರಲೋಕಕ್ಕೆ ಪಯಣ ಮಾಡುವಷ್ಟು ಮುಂದುವರೆದಿದೆ. ವಿಜ್ಞಾನದಲ್ಲಿ ನಾನಾ ಆವಿಷ್ಕಾರ ನಡೆಸಿದ್ದೇವೆ, ಇದರಲ್ಲಿ ಹೆಣ್ಮಕ್ಕಳ ಪಾತ್ರವೂ ದೊಡ್ಡದು. ಹೀಗಿರುವಾಗ ಮತ್ತೊಂದೆಡೆ 21ರ ಶತಮಾನದ ಇಷ್ಟೊಂದು ಮುಂದುವರೆದ ದೇಶದಲ್ಲಿ ಲಿಂಗ ಅಸಮಾನತೆಯ ಸುದ್ದಿ ಕಪ್ಪು ಚುಕ್ಕೆ ಇಟ್ಟಂತಿದೆ. 

ಹೌದು ಉತ್ತರ ಕಾಶಿಯ 133 ಹಳ್ಳಿಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು 216 ಮಕ್ಕಳು ಜನಿಸಿವೆ. ಆದರೆ ಇವರಲ್ಲಿ ಒಂದು ಕೂಡಾ ಹೆಣ್ಮಗು ಇಲ್ಲ ಎಂಬುವುದು ಆಘಾಕಾರಿಯಾಗಿದೆ. 'ಬೇಟಿ ಬಚಾವೋ, ಬೇಟಿ ಪಡಾವೋ' ಎಂಬ ಅಭಿಯಾನ ಆರಂಭವಾಗಿದ್ದರೂ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶ ಈ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆಗಳಿಗೆ ಕನ್ನಡಿ ಹಿಡಿದಂತಿದೆ. 

ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಈ ದತ್ತಾಂಶ ಜಿಲ್ಲಾಡಳಿತ ಅಧಿಕಾರಿಳಲ್ಲಿ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ಆಶೀಷ್ ಚೌಹಾಣ್ ಆಶಾ ಕಾರ್ಯಕರ್ತೆಯರ ತುರ್ತು ಸಭೆ ಕರೆದಿದ್ದಾರೆ. 

ಈ ಮಾಹಿತಿ ಪಡೆದಿರುವ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

click me!