ಪಾಕಿಸ್ತಾನದ ಇಮ್ರಾನ್ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?

By Web DeskFirst Published Jul 27, 2018, 1:47 PM IST
Highlights

ಕ್ರಿಕೆಟ್, ರಾಜಕಾರಣ, ವೈಯುಕ್ತಿಕ ಜೀವನದಿಂದಾಗಿ ಜಗತ್ತಿಗೇ ಚಿರಪರಿಚಿತ ಹೆಸರಾಗಿರುವ ಇಮ್ರಾನ್ ಖಾನ್ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಪ್ರಧಾನಿ ಕುರ್ಚೆ ಏರಲು ಹೊರಟಿದ್ದಾರೆ. ನವಾಜ್ ಷರೀಫ್, ಭುಟ್ಟೋ ಕುಟುಂಬಗಳಂತಹ ಘಟಾನುಘಟಿ ರಾಜಕೀಯ ಶಕ್ತಿಗಳನ್ನು ಮಣಿಸಿದ್ದಾರೆ. ಒಬ್ಬ ಕ್ರಿಕೆಟಿಗ ರಾಜಕಾರಣಿಯಾಗಿ ದೇಶವನ್ನು ಆಳುವ ಮಟ್ಟಕ್ಕೆ ಬೆಳೆಯುವುದು ಸಣ್ಣ ಸಂಗತಿಯಲ್ಲ. ವರ್ಣರಂಜಿತ ವ್ಯಕ್ತಿತ್ವದ ಪಾಕ್’ನ ಭಾವಿ ಪ್ರಧಾನಿಯ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ..

ಕರಾಚಿ[ಜು.27]:ಕ್ರಿಕೆಟ್, ರಾಜಕಾರಣ, ವೈಯುಕ್ತಿಕ ಜೀವನದಿಂದಾಗಿ ಜಗತ್ತಿಗೇ ಚಿರಪರಿಚಿತ ಹೆಸರಾಗಿರುವ ಇಮ್ರಾನ್ ಖಾನ್ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಪ್ರಧಾನಿ ಕುರ್ಚೆ ಏರಲು ಹೊರಟಿದ್ದಾರೆ. ನವಾಜ್ ಷರೀಫ್, ಭುಟ್ಟೋ ಕುಟುಂಬಗಳಂತಹ ಘಟಾನುಘಟಿ ರಾಜಕೀಯ ಶಕ್ತಿಗಳನ್ನು ಮಣಿಸಿದ್ದಾರೆ. ಒಬ್ಬ ಕ್ರಿಕೆಟಿಗ ರಾಜಕಾರಣಿಯಾಗಿ ದೇಶವನ್ನು ಆಳುವ ಮಟ್ಟಕ್ಕೆ ಬೆಳೆಯುವುದು ಸಣ್ಣ ಸಂಗತಿಯಲ್ಲ. ವರ್ಣರಂಜಿತ ವ್ಯಕ್ತಿತ್ವದ ಪಾಕ್’ನ ಭಾವಿ ಪ್ರಧಾನಿಯ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.. 

ಪಾಕ್ ಕ್ರಿಕೆಟ್‌ನ ದಂತಕತೆ: 
ಲಾಹೋರ್‌ನ ಶ್ರೀಮಂತ ಕುಟುಂಬದಲ್ಲಿ ಅಕ್ಟೋಬರ್ 5, 1952ರಂದು ಜನಿಸಿದ ಇಮ್ರಾನ್ ಖಾನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಾಹೋರ್‌ನಲ್ಲಿಯೇ ಮುಗಿಸಿದರು. ಅನಂತರ 1975ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ತಮ್ಮ 13ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದ ಇಮ್ರಾನ್ 1982-1992ರ ವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಸಾರಥ್ಯ ಹೊತ್ತು ಪಾಕ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಇಮ್ರಾನ್ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿ ಕೊಂಡಿತು.

3 ಹೆಂಡಿರ ವಿಲನ್ ಗಂಡ!
ಇಮ್ರಾನ್ ಖಾನ್ ಕ್ರಿಕೆಟ್, ರಾಜಕೀಯ ಬದುಕಿನಿಂದಾಚೆಗೆ ಹೆಚ್ಚು ಸುದ್ದಿಯಾಗಿದ್ದು ಅವರ ವೈವಾಹಿಕ ಜೀವನದ ವೈಚಿತ್ರ್ಯಗಳಿಂದಾಗಿ. 1995ರಲ್ಲಿ ಇಮ್ರಾನ್ ಇಂಗ್ಲೆಂಡ್ ಮೂಲದ ಜೆಮಿಯಾ ಗೋಲ್ಡ್‌ಸ್ಮಿತ್‌ರನ್ನು ವಿವಾಹವಾಗಿ 2004 ರಲ್ಲಿ ವಿಚ್ಛೇದನ ನೀಡಿದರು. ನಂತರ 2005ರಲ್ಲಿ ಟೀವಿ ನಿರೂಪಕಿ ರೆಹಮ್ ಖಾನ್ ಜೊತೆ ವಿವಾಹವಾಗಿದ್ದರು. ಆದರೆ ಕೇವಲ 10 ತಿಂಗಳಿನಲ್ಲಿ ಮದುವೆ ಮುರಿದುಬಿದ್ದಿತ್ತು. 65 ವರ್ಷದ ಇಮ್ರಾನ್ ಖಾನ್ ಇತ್ತೀಚೆಗೆ ತಮ್ಮ ಆಧ್ಯಾತ್ಮ ಮಾರ್ಗ ದರ್ಶಕಿ ಬುಶ್ರಾ ಮನೇಕಾ ಅವರನ್ನು ವಿವಾಹವಾಗಿದ್ದರು. ಆಕೆಯೂ ಈಗ ಮನೆ ಬಿಟ್ಟು ಹೋಗಿದ್ದಾರೆಂಬ ಸುದ್ದಿಯಿದೆ. ಮಾಜಿ ಪತ್ನಿ ರೆಹಮ್ ತಮ್ಮ ಆತ್ಮ ಚರಿತ್ರೆಯಲ್ಲಿ, ಇಮ್ರಾನ್ ಖಾನ್ ಕುರಾನನ್ನೇ ಸರಿಯಾಗಿ ಓದಿಲ್ಲ. ಅವರಿಗೆ ಭಾರತದಲ್ಲಿ ಮಕ್ಕಳಿದ್ದಾರೆ ಎಂದು ಆರೋಪಿಸಿದ್ದಾರೆ.

ಮಿಲಿಟರಿ ಕೈಗೊಂಬೆ?
ಈಗ ಬಂದಿರುವ ಪಾಕ್ ಚುನಾವಣೆಯ ಫಲಿತಾಂಶದಲ್ಲಿ ಅಚ್ಚರಿ ಏನೂ ಇಲ್ಲ. ಸದಾ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸುವ ಮಿಲಿಟರಿಗೆ ಬೇಕಾದ ಫಲಿತಾಂಶವೇ ಹೊರಬಂದಿದೆ.
ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿದ ಬಳಿಕ ಅಲ್ಲಿನ ಸೇನೆಗೆ ಯಾರು ಬೆಂಬಲ ನೀಡುತ್ತಾರೋ ಅವರೇ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಎಂಬ ಸನ್ನಿವೇಶ ಎದುರಾಗಿತ್ತು. ಇಮ್ರಾನ್ ಖಾನ್ ಪಾಕಿಸ್ತಾನ ಸೇನೆಯ ಕೈಗೊಂಬೆ ಎಂಬ ಟೀಕೆಗಳಿವೆ.

ಸ್ವಂತ ರಾಜಕೀಯ ಪಕ್ಷ ಕಟ್ಟಿ ಪ್ರಧಾನಿ ಗದ್ದುಗೆವರೆಗೆ ಬಂದ ಛಲಗಾರ
1971 ರಿಂದ 1992ರವರೆಗೆ ಸುಮಾರು 2 ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ಇಮ್ರಾನ್ ಖಾನ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳುತ್ತಿದ್ದಂತೆ ರಾಜಕೀಯಕ್ಕೆ ಧುಮುಕಿದರು. 1996ರಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಎಂಬ ಪಕ್ಷ ಸ್ಥಾಪಿಸಿದರು. ಇಮ್ರಾನ್ ಅವರ ಕ್ರಿಕೆಟ್‌ಗೆ ಮಾರುಹೋಗಿದ್ದ ಜನ, ಅವರು ರಾಜಕೀಯಕ್ಕೆ ಬಂದಾಗ ಬೇಗನೆ ಅವರ ಕೈಹಿಡಿಯಲಿಲ್ಲ. 2003ರ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿ ಇಮ್ರಾನ್ ಖಾನ್. ಬಳಿಕ ಪಾಕಿಸ್ತಾನದ ಭ್ರಷ್ಟಾಚಾರ ಮತ್ತಿತರ ಅವ್ಯವಸ್ಥೆಯನ್ನೇ ಮುಂದಿಟ್ಟುಕೊಂಡು ಪಕ್ಷ ಸಂಘಟಿಸಿದರು. ಪರಿಣಾಮ 2013ರಲ್ಲಿ ಪಿಟಿಐ 2ನೇ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಈ ಬಾರಿಯ ಚುನಾ ವಣೆಯಲ್ಲಿ ಪಿಟಿಐ ಪಕ್ಷದ ಪರವಾದ ಅಲೆ ಎದ್ದಿತ್ತು. ಅಲ್ಲದೆ ಈ ಬಾರಿ ಯಾರು ಸೇನೆ ಯನ್ನು ಬೆಂಬಲಿಸುತ್ತಾರೋ ಅವರೇ ಪ್ರಧಾನಿ ಎಂಬ ಸನ್ನಿವೇಶ ಎದುರಾಗಿತ್ತು.

ಉನ್ನತ ಅಧಿಕಾರದ ಗದ್ದುಗೆ ಹಿಡಿದ ಕ್ರೀಡಾ ಕಲಿಗಳು

ಜಾರ್ಜ್ ವಿಯಾ 
ಆಫ್ರಿಕನ್ ಫುಟ್ಬಾಲ್ ಆಟಗಾರ. ಪಿಫಾ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. 18 ವರ್ಷದ ಅತ್ಯುನ್ನತ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದರು. 2003ರಲ್ಲಿ ನಿವೃತ್ತರಾಗಿ ನೂತನ ಪಕ್ಷ ಹುಟ್ಟುಹಾಕಿದರು. ಮೊದಲ ಚುನಾವಣೆ ಯಲ್ಲಿ ಸೋತರೂ 2017ರ ಎರಡನೇ ಪ್ರಯತ್ನದಲ್ಲಿ ಜಯ ಸಾಧಿಸಿ ಲೈಬೀರಿಯಾದ ಅಧ್ಯಕ್ಷರಾದರು.

ರಾಜ್ಯವರ್ಧನ್ ಸಿಂಗ್ ರಾಥೋಡ್ 
ರಾಜ್ಯವರ್ಧನ್ ಸಿಂಗ್ ರಾಥೋಡ್ 2004ರ ಅಥೆನ್ಸ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ. 2003ರ ವಿಶ್ವ ಚಾಂಪಿಯನ್’ಶಿಪ್‌ನಲ್ಲಿಯೂ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಅದಾದ ಬಳಿಕ 2013ರಲ್ಲಿ ಬಿಜೆಪಿಯನ್ನು ಸೇರಿ 2017ರಲ್ಲಿ ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಅರ್ನಾಲ್ಡ್ ಶ್ವಾಂಜೆನೆಗರ್ 
ಹಾಲಿವುಡ್ ಪ್ರವೇಶಕ್ಕೂ ಮುನ್ನ ಅಮೆರಿಕದ ಬಾಡಿಬಿಲ್ಡರ್ ಅರ್ನಾಲ್ಡ್ ಸಾಕಷ್ಟು ಪ್ರಶಸ್ತಿ ಪಡೆದಿದ್ದರು. ಮಾಧ್ಯಮಗಳು ಇವರನ್ನು ‘ಆಸ್ಟ್ರಿಯನ್ ಓಕ್’ ಎಂದು ಕರೆಯುತ್ತಿದ್ದವು. 2003ರಲ್ಲಿ ಕ್ಯಾಲಿಫೋರ್ನಿಯಾದ ಹಂಗಾಮಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ 2007ರಲ್ಲಿ ಪೂರ್ಣ ಅವಧಿಗೆ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು.

ನವಜೋತ್ ಸಿಂಗ್ ಸಿಧು
ಸುಮಾರು 50 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕ ನಾಗಿದ್ದ ನವಜೋತ್ ಸಿಂಗ್ ಸಿಧು 4 ಬಾರಿ ವಿಶ್ವಕಪ್‌ನಲ್ಲಿ ಜಯ ಸಾಧಿಸಿದ್ದಾರೆ. ಸಿಧು 2004ರಲ್ಲಿ ಬಿಜೆಪಿ ಸೇರಿ, ಅಮೃತಸರ ದಿಂದ ಗೆದ್ದಿದ್ದರು. 2017ರಲ್ಲಿ ಕಾಂಗ್ರೆಸ್ ಸೇರಿ ಅಮೃತಸರದಿಂದ ಸ್ಪರ್ಧಿಸಿದ್ದರು. ಸದ್ಯ ಪಂಜಾಬಿನಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಭಾರತ-ಪಾಕ್ ಸಂಬಂಧ ಏನಾಗುತ್ತದೆ..?
ಇಮ್ರಾನ್ ಖಾನ್ ಚುನಾವಣಾ ಪ್ರಚಾರದ ವೇಳೆ ‘ನೂತನ ಪಾಕಿಸ್ತಾನ’ ಪ್ರಾರಂಭಿಸುವ ಭರವಸೆ ನೀಡಿದ್ದರು. ಅವರು ಪ್ರಧಾನಿಯಾದಲ್ಲಿ ಭಾರತದ ಬಗ್ಗೆ ಪಾಕಿಸ್ತಾನದ ನಡೆ ಬದಲಾಗಬಹುದು, ಹಗೆತನ ಸ್ವಲ್ಪಮಟ್ಟಿಗೆ ತಗ್ಗಿ ಸೌಹಾರ್ದತೆ ಮೂಡಬಹುದು ಎಂಬ ನಿರೀಕ್ಷೆ ಇದೆ. ಭಾರತದೊಂದಿಗೆ ಸಂಪರ್ಕದಲ್ಲಿರುವ ಕೆಲವೇ ಕೆಲವು ಪಾಕಿಸ್ತಾನಿ ನಾಯಕರಲ್ಲಿ ಇಮ್ರಾನ್ ಖಾನ್ ಕೂಡ ಒಬ್ಬರು. ಇಮ್ರಾನ್ ಖಾನ್‌ಗೆ ಭಾರತದಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೆ ಕಾಶ್ಮೀರ ವಿಷಯವಾಗಿ ತನ್ನ ಬಿಗಿ ನೀತಿಯನ್ನು ಪಾಕ್ ಸಡಿಲಿಸಬಹುದು ಎಂಬ ನಿರೀಕ್ಷೆಯೂ ಇದೆ. ಆದರೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ನಿನ್ನೆ ಅವರು ಮಾಡಿದ ಮೊದಲ ಭಾಷಣದಲ್ಲಿ ಉಲ್ಟಾ ಹೊಡೆಯುವ ಸುಳಿವುಗಳೂ ಇವೆ!

click me!