ಚೋರನಾದ ಐಐಟಿ ಪದವೀಧರ : ಲಕ್ಷಾಂತರ ಮೌಲ್ಯದ ವಸ್ತು ವಶಕ್ಕೆ

First Published May 29, 2018, 5:03 PM IST
Highlights

ಕಾರ್ತಿಕ್ ತಂದೆ ಸೇನೆಯ ಅಧಿಕಾರಿಯಾದರೆ, ತಾಯಿ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಕಾರ್ತಿಕ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಸೂಕ್ತ ಕೆಲಸ ಸಿಗದೆ ವಂಚನೆ ಕೃತ್ಯಕ್ಕೆ ಇಳಿದಿದ್ದ. ಫೇಸ್‌ಬುಕ್, ಇನ್ಸ್ಟಾಗ್ರಾಂ ಖಾತೆಗಳ ಮೂಲಕ ರೆಂಟ್‌ಶೇರ್ ಡಾಟ್ ಕಾಮ್‌ಗೆ ಹೋಗಿ ದುಬಾರಿ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದ.

ಬೆಂಗಳೂರು(ಮೇ.29): ಆನ್‌ಲೈನ್‌ನಲ್ಲಿ ದುಬಾರಿ ಬೆಲೆಯ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಬಾಡಿಗೆಗೆ ಪಡೆದು ಮರಳಿಸದೆ ಒಎಲ್‌ಎಕ್ಸ್‌ನಲ್ಲಿ ಮಾರಾಟ
ಮಾಡುತ್ತಿದ್ದ ಐಐಟಿ ಪದವೀಧರ, ಅಂತಾರಾಜ್ಯ ವಂಚಕನೊಬ್ಬನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಕಾರ್ತಿಕ್ (28) ಬಂಧಿತ. ಆರೋಪಿಯಿಂದ ಸುಮಾರು 12 ಲಕ್ಷ ರೂ. ಮೌಲ್ಯದ ಕ್ಯಾಮರಾ ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ಹೈದ್ರಾಬಾದ್, ಮುಂಬೈ,
ಅಹಮದಬಾದ್, ಚೆನ್ನೈ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ. ಈತನ ಜತೆ ನಾಲ್ಕೈದು ಮಂದಿ ಹೈಟೆಕ್ ವಂಚಕರ ಗ್ಯಾಂಗ್ ಇದೆ. ಇದರಲ್ಲಿ ಇಬ್ಬರು ಯುವತಿಯರು ಇರುವ ಬಗ್ಗೆ ಮಾಹಿತಿ ಇದೆ. ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರ್ತಿಕ್ ತಂದೆ ಸೇನೆಯ ಅಧಿಕಾರಿಯಾದರೆ, ತಾಯಿ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಕಾರ್ತಿಕ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಸೂಕ್ತ ಕೆಲಸ ಸಿಗದೆ ವಂಚನೆ ಕೃತ್ಯಕ್ಕೆ ಇಳಿದಿದ್ದ. ಫೇಸ್‌ಬುಕ್, ಇನ್ಸ್ಟಾಗ್ರಾಂ ಖಾತೆಗಳ ಮೂಲಕ ರೆಂಟ್‌ಶೇರ್ ಡಾಟ್ ಕಾಮ್‌ಗೆ ಹೋಗಿ ದುಬಾರಿ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ‘ಟ್ರಾವೆಲ್ ವಿದ್ ಕಾರ್ತಿಕ್’ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದಿರುವ ಈತ ತನ್ನನ್ನು ತಾನು ಪರಿಸರ ಪ್ರೇಮಿ ಎಂದು ಹಾಕಿಕೊಂಡಿದ್ದ. ಖಾತೆಯನ್ನು ನೋಡಿದ ಕ್ಯಾಮರಾ ಮಾಲೀಕರು ನಂಬಿ ಕ್ಯಾಮರಾ ಬಾಡಿಗೆಗೆ ನೀಡುತ್ತಿದ್ದರು. ಕಡಿಮೆ ಮೊತ್ತವನ್ನು ಮುಂಗಡವಾಗಿ ಪಾವತಿ ಬಳಿಕ ನಂಬರ್ ಬದಲಾಯಿಸಿ ತಲೆಮರೆಸಿಕೊಳ್ಳುತ್ತಿದ್ದ.
ನಂತರ ಬಾಡಿಗೆಗೆ ಪಡೆದ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿ ಮಾರಾಟ ಮಾಡುತ್ತಿದ್ದ. ಇದಕ್ಕೆ ಮತ್ತೊಂದು ಮೊಬೈಲ್ ಸಂಖ್ಯೆ ಬಳಸುತ್ತಿದ್ದ.
ಇದೇ ರೀತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತನ್ನ ಸ್ಥಳ ಬದಲಾಯಿಸುತ್ತಿದ್ದ. 2017ರ ಜುಲೈನಲ್ಲಿ ಆರೋಪಿ ಆಯುಶ್ ಜೈನ್ ಎಂಬುವರಿಂದ ಕ್ಯಾಮರಾ ಬಾಡಿಗೆ ಪಡೆದು ವಂಚಿಸಿದ್ದ. ಈ ಸಂಬಂಧ ಆಯುಶ್ ಸಂಪಿಗೆಹಳ್ಳಿಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪದೇ-ಪದೇ ನಂಬರ್ ಬದಲಾವಣೆ ಮಾಡುತ್ತಿದ್ದದ್ದು ಹಾಗೂ ಸ್ಥಳ ಬದಲಾವಣೆ ಮಾಡುತ್ತಿದ್ದರಿಂದ ಆರೋಪಿ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತು ಎಂದು
ಪೊಲೀಸರು ತಿಳಿಸಿದರು.
80 ಲಕ್ಷ ರೂ ವಂಚನೆ
ಆರೋಪಿ ಇಲ್ಲಿತನಕ ಸುಮಾರು 80 ಲಕ್ಷ ಮೌಲ್ಯದ ಕ್ಯಾಮರಾಗಳನ್ನು ಬಾಡಿಗೆಗೆಂದು ಪಡೆದು ವಂಚಿಸಿದ್ದಾನೆ. ಬಂದ ಹಣದಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ಉಳಿದು
ಕೊಳ್ಳುವ ಮೂಲಕ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಹಲವು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದ ವೇಳೆ ಕಾರ್ತಿಕ್‌ನ ತಂದೆ ವಂಚನೆಗೆ ಒಳಗಾದವರಿಗೆ ಹಣ ಹಿಂದಿರುಗಿಸಿ ತಮ್ಮ ನಿವೃತ್ತಿ ಹಣವನ್ನೆಲ್ಲಾ ಖಾಲಿ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು. ಹೈದ್ರಾಬಾದ್ ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದರೂ ತನ್ನ ಚಾಳಿ ಮುಂದುವರೆಸಿದ್ದ ಎಂದು ತಿಳಿಸಿದರು.

click me!