ಐಐಎಸ್ಸಿ, ಮಣಿಪಾಲ್ ವಿವಿ ದೇಶದ ಶ್ರೇಷ್ಠತಾ ಸಂಸ್ಥೆಗಳು

First Published Jul 10, 2018, 10:30 AM IST
Highlights
  • ಬೆಂಗಳೂರಿನ ಆಚಾರ್ಯ ಶಿಕ್ಷಣ ಸಂಸ್ಥೆ ಕೂಡ ಖಾಸಗಿ ವಿಭಾಗದಲ್ಲಿ ರೇಸ್‌ನಲ್ಲಿತ್ತು
  • ಶೈಕ್ಷಣಿಕ ಶ್ರೇಷ್ಠತಾ ಸಂಸ್ಥೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 1000 ಕೋಟಿ ರು. ಅನುದಾನವನ್ನು ನೀಡಲಿದೆ

ನವದೆಹಲಿ[ಜು.10]: ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ) ಹಾಗೂ ಮಣಿಪಾಲದ ‘ಮಾಹೆ’ ಸೇರಿ ದೇಶದ ಮೂರು ಸರ್ಕಾರಿ, ಮೂರು ಖಾಸಗಿ ವಿದ್ಯಾಸಂಸ್ಥೆಗಳಿಗೆ ಕೇಂದ್ರ ಸರ್ಕಾರ ‘ಶೈಕ್ಷಣಿಕ ಶ್ರೇಷ್ಠತಾ ಸಂಸ್ಥೆಗಳು’ ಎಂಬ ಸ್ಥಾನಮಾನ ನೀಡಿದೆ.

ಇದರಿಂದಾಗಿ ಈ ಸಂಸ್ಥೆಗಳು ಸಂಪೂರ್ಣ ಸ್ವಾಯತ್ತೆ ಹೊಂದಲು ಹಾದಿ ಸುಗಮವಾಗಲಿದೆ. ಜತೆಗೆ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳು ಎಂದು ಬಿಂಬಿತವಾಗಲು ವಿಶೇಷ ಪ್ರೋತ್ಸಾಹವೂ ದೊರೆಯಲಿದೆ. ಬೆಂಗಳೂರಿನ ಐಐಎಸ್ಸಿ, ದೆಹಲಿ ಐಐಟಿ, ಬಾಂಬೆ ಐಐಟಿಗಳು ಸರ್ಕಾರಿ ವಿಭಾಗದಲ್ಲಿ ಹಾಗೂ ಕರ್ನಾಟಕದ ಮಣಿಪಾಲದಲ್ಲಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ಬಿರ್ಲಾ ಸಮೂಹಕ್ಕೆ ಸೇರಿದ ಬಿಟ್ಸ್ ಪಿಲಾನಿ ಹಾಗೂ ರಿಲಯನ್ಸ್ ಫೌಂಡೇಷನ್‌ನ ಜಿಯೋ ಇನ್ಸ್‌ಟಿಟ್ಯೂಟ್‌ಗಳು ಖಾಸಗಿ ವಿಭಾಗದಡಿ ‘ಶೈಕ್ಷಣಿಕ ಶ್ರೇಷ್ಠತಾ ಸಂಸ್ಥೆಗಳು’ ಪಟ್ಟಕ್ಕೆ ಭಾಜನವಾಗಿವೆ.

ಬೆಂಗಳೂರಿನ ಆಚಾರ್ಯ ಶಿಕ್ಷಣ ಸಂಸ್ಥೆ ಕೂಡ ಖಾಸಗಿ ವಿಭಾಗದಲ್ಲಿ ರೇಸ್‌ನಲ್ಲಿತ್ತಾದರೂ, ಪಟ್ಟದಿಂದ ವಂಚಿತವಾಗಿದೆ. ಶೈಕ್ಷಣಿಕ ಶ್ರೇಷ್ಠತಾ ಸಂಸ್ಥೆಗಳು’ ಪಟ್ಟಕ್ಕೆ ಪಾತ್ರವಾಗಿರುವ ಐಐಎಸ್ಸಿ ಸೇರಿ ಮೂರು ಸರ್ಕಾರಿ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳ ಕಾಲ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 1000 ಕೋಟಿ ರು. ಅನುದಾನವನ್ನು ನೀಡಲಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಅನುದಾನ ಲಭಿಸುವುದಿಲ್ಲ.

ಜಿಯೋಗೆ ಕೊಟ್ಟಿದ್ದಕ್ಕೆ ಆಕ್ಷೇಪ
ಈ ನಡುವೆ ಇನ್ನೂ ಆರಂಭವೇ ಆಗದ ರಿಲಯನ್ಸ್ ಫೌಂಡೇಷನ್‌ನ ಜಿಯೋ ಇನ್ಸ್‌ಟಿಟ್ಯೂಟ್‌ಗೆ ಈ ಮಾನ್ಯತೆ ಕೊಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ಸಾಕಷ್ಟು ಖ್ಯಾತಿ ಹೊಂದಿರುವ ವಿವಿಗಳಿದ್ದರೂ ಅದನ್ನು ಕಡೆಗಣಿಸಿ ರಿಲಯನ್ಸ್‌ಗೆ ಮಣೆ ಹಾಕಿದ್ದು ಏಕೆ ಎಂಬ ಪ್ರಶ್ನೆಗಳು ತೂರಿಬಂದಿವೆ. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಗ್ರೀನ್‌ಫೀಲ್ಡ್ (ಹೊಸದಾಗಿ ಆರಂಭವಾಗಲಿರುವ) ವಿವಿಗಳ ವಿಭಾಗದಲ್ಲಿ ಜಿಯೋ ಇನ್ಸ್‌ಟಿಟ್ಯೂಟ್‌ಗೆ ಮಾನ್ಯತೆ ನೀಡಲಾಗಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಏಕೆ ಈ ಪಟ್ಟ?
ವಿಶ್ವದ ಟಾಪ್ 100 ಅಥವಾ 200 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯವೂ ಸ್ಥಾನ ಪಡೆಯುತ್ತಿಲ್ಲ. ಈ ಕೊರತೆ ಹೋಗಲಾಡಿಸಲು ವಿವಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಆಯ್ದ ಸಂಸ್ಥೆಗಳಿಗೆ ಶೈಕ್ಷಣಿಕ ಶ್ರೇಷ್ಠತಾ ಪಟ್ಟವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. 10 ಸರ್ಕಾರಿ ಹಾಗೂ 10 ಖಾಸಗಿ ಸಂಸ್ಥೆಗಳಿಗೆ ಈ ಸ್ಥಾನಮಾನ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. 

ನಿವೃತ್ತ ಮುಖ್ಯ ಚುನಾವಣಾಧಿಕಾರಿ ಎನ್. ಗೋಪಾಲಸ್ವಾಮಿ ನೇತೃತ್ವದ ಉನ್ನತಾಧಿಕಾರ ಪರಿಣತ ಸಮಿತಿ ಜಾಗತಿಕ 500 ರಾಂಕಿಂಗ್ ನಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿರುವ ಆರು ಸಂಸ್ಥೆಗಳನ್ನು ಈಗ ಗುರುತಿಸಿದೆ. ಮುಂದಿನ 10-15 ವರ್ಷಗಳಲ್ಲಿ ಈ ಶ್ರೇಷ್ಠತಾ ಸಂಸ್ಥೆಗಳು ವಿಶ್ವದ ಟಾಪ್- 500ರ ಪಟ್ಟಿ ಬಳಿಕ, ಟಾಪ್- 100ರ ಪಟ್ಟಿಗೆ ಸೇರಬಹುದು ಎಂಬ ವಿಶ್ವಾಸವನ್ನು ಸರ್ಕಾರ ಹೊಂದಿದೆ.

click me!