
ರಾಮಕೃಷ್ಣ ದಾಸರಿ ರಾಯಚೂರು
ಹೈ- ಕ ಭಾಗದಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಆರಂಭಿಸಲು ಕೇಂದ್ರ ಬಿಜೆಪಿ ಸರ್ಕಾರ ಬುಧವಾರ ಘೋಷಣೆ ಮಾಡಿದ್ದು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕೈತಪ್ಪಿಸಿ ನೀಡಿದ ಕೊಡುಗೆಗೆ ಜಿಲ್ಲೆಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವ್ಡೇಕರ್ ಅವರು ರಾಯಚೂರಿಗೆ ಐಐಐಟಿ ಘೋಷಿಸಿ ಆದೇಶ ಹೊರಡಿಸಿದ್ದರೂ ಜಿಲ್ಲೆ ಜನ ಯಾವುದೇ ರೀತಿಯ ಸಂಭ್ರಾಮಾಚರಣೆ ಮಾಡದೇ ಸ್ವಾಗತಿಸಿದ್ದಾರೆ. ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ನಡೆದ ಐತಿಹಾಸಿಕ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದ್ರೋಹಬಗೆದಿವೆ ಎಂಬ ಆಕ್ರೋಶದ ಗುಂಗಿನಿಂದ ಜನರು ಹೊರ ಬಾರದ ಕಾರಣಕ್ಕೆ ಐಐಐಟಿ ಸಿಕ್ಕರೂ ಸಂತೋಷಕ್ಕೆ ಸಿಮಿತಗೊಂಡಿದ್ದಾರೆ.
ಕೇಂದ್ರ ಘೋಷಣೆ ಮಾಡಿದ್ದರಿಂದ ಸ್ಥಳೀಯ ಬಿಜೆಪಿ ನಾಯಕರು ಸಂತೋಷಗೊಂಡಿದ್ದು, ಐಐಟಿಗಾಗಿ ಹೋರಾಟ ನಡೆಸಿದ ಸಂಘ-ಸಂಸ್ಥೆಗಳು, ಮುಖಂಡರು ಹಾಗೂ ಜನ ಸಾಮಾನ್ಯರು ಸಂಭ್ರಮಾಚರಣೆಯಿಂದ ದೂರ ಉಳಿದಿದ್ದಾರೆ.
ಖಂಡನೆ:
ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ೨೦ಕ್ಕೂ ಹೆಚ್ಚು ಐಐಐಟಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಬಿಜೆಪಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಐಐಟಿ ಜೊತೆ ಐಐಐಟಿಯನ್ನು ಸಹ ಘೋಷಣೆ ಮಾಡಿತ್ತು. ಆದರೆ ಡಾ. ನಂಜುಂಡಪ್ಪ ವರದಿ ಅನ್ವಯ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕು ಎನ್ನುವ ಶಿಫಾರಸಿಗೆ ಉಭಯ ಸರ್ಕಾರಗಳು ಮಾನ್ಯತೆ ನೀಡದೇ ವಂಚನೆ ಮಾಡಿ ಇದೀಗ ಸಾಮಾನ್ಯ ಜನರಿಗೆ ಪ್ರಯೋಜನಕ್ಕೆ ಬಾರದ ಐಐಐಟಿಯನ್ನು ಘೋಷಿಸಿರುವದಕ್ಕೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.
ಐಐಟಿಗೆ ಐಐಐಟಿ ಸಮವಲ್ಲ:
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಸಮವಲ್ಲ. ಹಿಂದುಳಿದ ಜಿಲ್ಲೆ ರಾಯಚೂರಿಗೆ ಐಐಟಿ ನೀಡಿದ್ದರೇ ಜಿಲ್ಲೆಯ ಭೌತಿಕ ಅಭಿವೃದ್ಧಿಗೆ ನೆರವಾಗುತ್ತಿತ್ತು ಆದರೆ ಐಐಐಟಿಯು ಕೇವಲ ರಾಷ್ಟ್ರೀಯ ಸಂಸ್ಥೆಯಾಗಿದೆಯೇ ಹೊರತು ಅದರಿಂದ ಈ ಭಾಗದ ಜನರಿಗೆ ಏನು ಲಾಭ. ಐಐಟಿ ಕೈ ತಪ್ಪಿಸಿರುವ ಬಿಜೆಪಿಯ ರಾಜ್ಯ ಮತ್ತು ಕೇಂದ್ರದ ನಾಯಕರು ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚುವುದಕ್ಕಾಗಿ ಐಐಐಟಿ ನೀಡಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.
ಬಲಗೊಂಡ ಏಮ್ಸ್ ಕೂಗು:
ಐಐಟಿ ಕೈತಪ್ಪಿರುವ ರಾಯಚೂರು ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನೀಡಬೇಕು ಎನ್ನುವ ಕೂಗು ಇದೀಗ ಬಲಗೊಂಡಿದೆ. ಹೈ-ಕ ಭಾಗದ ಅಭಿವೃದ್ಧಿಗಾಗಿ ಏಮ್ಸ್‌ನಂತಹ ಸಂಸ್ಥೆಯನ್ನು ಜಿಲ್ಲೆಗೆ ನೀಡುವುದರ ಮೂಲಕ ಇಲ್ಲಿನ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬಹುದಾಗಿದ್ದು. ಐಐಐಟಿ ನೀಡಿರುವ ಸರ್ಕಾರವು ಏಮ್ಸ್ ಘೋಷಣೆಗೆ ಸಹ ಮುಂದಾಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಸ್ಥಳೀಯ ಮತ್ತು ರಾಜ್ಯದ ನಾಯಕರು ರಾಯಚೂರಿಗೆ ಏಮ್ಸ್ ತರುವುದರ ಮೂಲಕ ಐಐಟಿ ವಿಚಾರವಾಗಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬ ಒಕ್ಕೊರಲಿನ ಬೇಡಿಕೆ ಇಲ್ಲಿನ ಜನರದ್ದಾಗಿದೆ.
ರಾಯಚೂರಿಗೆ ಐಐಐಟಿ ಬಂದಿರುವುದಕ್ಕೆ ಸ್ವಾಗತಾರ್ಹ ಆದರೆ ಇದು ಐಐಟಿಗೆ ಪರ್ಯಾಯವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ದುರುದ್ದೇಶಕ್ಕಾಗಿ ಐಐಟಿ ವಿಚಾರದಲ್ಲಿ ಜಿಲ್ಲೆಗೆ ಐತಿಹಾಸಿಕ ವಂಚನೆಯನ್ನು ಮಾಡಿದ್ದು, ಕೂಡಲೇ ಏಮ್ಸ್ ಘೋಷಣೆ ಮಾಡುವುದರ ಮೂಲಕ ಅನ್ಯಾಯ ಸರಿಪಡಿಸಬೇಕು.
-ಡಾ. ರಜಾಕ ಉಸ್ತಾದ ಉಪನ್ಯಾಸಕ, ರಾಯಚೂರುಹೈ-ಕ ಭಾಗಕ್ಕೆ ಐಐಟಿ ನೀಡದೇ ದ್ರೋಹ ಬಗೆದಿರುವ ಸರ್ಕಾರಗಳು ಅದಕ್ಕೆ ಪರ್ಯಾಯವಾಗಿ ಐಐಐಟಿಯನ್ನು ನೀಡಿದ್ದು, ಈ ಸಂಸ್ಥೆಯಿಂದ ಯಾವುದೇ ಪ್ರಯೋಜನವಿಲ್ಲ. ಐಐಟಿ ಬದಲಿಗೆ ಏಮ್ಸ್ ನೀಡುವುದಾಗಿ ಭರವಸೆ ನೀಡಿದ್ದ ನಾಯಕರು ಐಐಐಟಿ ನೀಡಿ ಸರಿಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ.
- ಬಸವರಾಜ ಕಳಸ, ಐಐಟಿ ಹೋರಾಟ ಸಮಿತಿ, ಅಧ್ಯಕ್ಷ, ರಾಯಚೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.