ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ!

By Web DeskFirst Published Aug 4, 2019, 8:49 AM IST
Highlights

ಜನಾರ್ದನ ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅರಣ್ಯಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ| ಐಎಫ್‌ಎಸ್‌ ಅಧಿಕಾರಿ ಕಲ್ಲೋಲ್‌ ಬಿಸ್ವಾಸ್‌ಗೆ ಕಡ್ಡಾಯ ನಿವೃತ್ತಿ

ವಿಜಯವಾಡ[ಆ.04]: ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಓಬಳಾಪುರಂ ಗಣಿ ಹಗರಣ ಬಯಲಿಗೆ ಎಳೆದ ಭಾರತೀಯ ಅರಣ್ಯಸೇವಾ ಅಧಿಕಾರಿ ಕಲ್ಲೋಲ್‌ ಬಿಸ್ವಾಸ್‌ ಅವರಿಗೆ ಕೇಂದ್ರ ಸರ್ಕಾರ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿದೆ. ಈ ಸಂಬಂಧ ರಾಜ್ಯಸರ್ಕಾರಕ್ಕೆ ಆದೇಶ ಪ್ರತಿಯನ್ನು ಕಳುಹಿಸಿಕೊಡಲಾಗಿದೆ.

1991ನೇ ಬ್ಯಾಚಿನ ಆಂಧ್ರ ಪ್ರದೇಶ ಕೇಡರ್‌ನ ಅಧಿಕಾರಿ ಆಗಿರುವ ಬಿಸ್ವಾಸ್‌ ಅವರ ಸೇವಾ ದಾಖಲೆ ವಿವರಗಳನ್ನು ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಇದರ ಆಧಾರದ ಮೇಲೆ ಬಿಸ್ವಾಸ್‌ ಅವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಂತಪುರದ ಡಿಎಫ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿಗೆ ಸೇರಿದ ಓಬಳಾಪುರಂ ಗಣಿ ಕಂಪನಿಗೆ ಸಂಬಂಧಿಸಿದ ವಿವಾದಿತ ವಿಷಯವನ್ನು ನಿರ್ವಹಿಸುವಾಗ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೇವಾ ದಾಖಲೆಯ ಪರಿಶೀಲನೆಯ ವರದಿಯಲ್ಲಿ ಆರೋಪಿಸಲಾಗಿದೆ. ಅಲ್ಲದೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಕರ್ತವ್ಯದಿಂದ ವಿಮುಖರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಆಂಧ್ರದಲ್ಲಿ ವೈ.ಎಸ್‌.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಓಬಾಳಪುರಂ ಮೈನಿಂಗ್‌ ಕಂಪನಿಗೆ ಆಂಧ್ರದಲ್ಲಿ ಉಕ್ಕು ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಲಾಗಿತ್ತು. ಈ ಇಬ್ಬರ ನಡುವಿನ ಸಂಬಂಧವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದವರು ಬಿಸ್ವಾಸ್‌.

click me!