ಸರ್ಕಾರ ಪತನವಾದರೆ ಇಲ್ಲಿಯೂ ಕೈ-ಜೆಡಿಎಸ್ ಅಧಿಕಾರಕ್ಕೆ ಕೊನೆ

By Web DeskFirst Published Jul 7, 2019, 8:14 AM IST
Highlights

ಸದ್ಯ ಮೈತ್ರಿ ಕೂಟದ ಹಲವು ಶಾಸಕರು ರಾಜೀನಾಮೆ ನೀಡುತ್ತಿದ್ದು,  ಒಂದು ವೇಳೆ ಮೈತ್ರಿ ಸರ್ಕಾರ ಪತನವಾದಲ್ಲಿ ಇಲ್ಲಿಯೂ ಕೂಡ ಕಾಂಗ್ರೆಸ್ ಜೆಡಿಎಸ್ ಅಧಿಕಾರ ಕಳೆದುಕೊಳ್ಳಲಿವೆ

ಬೆಂಗಳೂರು [ಜು.07] :  ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಗೊಂಡು ರಾಜೀನಾಮೆ ನೀಡಿರುವ 13 ಶಾಸಕರ ಪೈಕಿ ಬೆಂಗಳೂರಿನ ಐವರು ಪ್ರಭಾವಿ ಶಾಸಕರೂ ಇದ್ದಾರೆ. ಒಂದು ವೇಳೆ ಈ ಶಾಸಕರ ರಾಜೀನಾಮೆ ಸ್ವೀಕಾರಗೊಂಡು ಸರ್ಕಾರ ಪತನವಾದರೆ ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಕೊನೆಗೊಳ್ಳುವುದು ಬಹುತೇಕ ಖಚಿತ!

ಪ್ರಸ್ತತ ರಾಜೀನಾಮೆ ನೀಡಿರುವ 13 ಶಾಸಕರ ಪೈಕಿ ಬೆಂಗಳೂರಿನ ಪ್ರಭಾವಿ ಶಾಸಕರಾದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಮುನಿರತ್ನ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು ಹಾಗೂ ಜೆಡಿಎಸ್‌ ಶಾಸಕ ಗೋಪಾಲಯ್ಯ ಕೂಡ ಇದ್ದಾರೆ. ಈ ಶಾಸಕರೆಲ್ಲರೂ ಬಿಬಿಎಂಪಿಯ ಮೇಯರ್‌ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಒಂದು ವೇಳೆ ಈ ಎಲ್ಲಾ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಬಿಬಿಎಂಪಿಯಲ್ಲೂ ಮೈತ್ರಿ ಆಡಳಿತದ ಸಂಖ್ಯಾಬಲ ಕುಸಿಯಲಿದೆ.

ಸಂಖ್ಯಾಬಲ ಎಷ್ಟುಕುಸಿಯುತ್ತದೆ:  ಬಿಬಿಎಂಪಿಯ ಮೇಯರ್‌ ಉಪಮೇಯರ್‌ ಚುನಾವಣೆಯಲ್ಲಿ ಪಾಲಿಕೆಯ ಎಲ್ಲಾ 198 ಸದಸ್ಯರು, ಬೆಂಗಳೂರಿನ 28 ಶಾಸಕರು, ಮೂವರು ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯರು ಸೇರಿ ಒಟ್ಟು 265 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಹಾಗಾಗಿ ಮುಂದಿನ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾವುದೇ ಪಕ್ಷಕ್ಕೆ 133 ಸದಸ್ಯರ ಬಲ ಹೊಂದಿರುವವರು ಅಧಿಕಾರದ ಗದ್ದುಗೆ ಏರಲಿದ್ದಾರೆ. ಹಾಲಿ ಸಂಖ್ಯಾಬಲದ ಲೆಕ್ಕಾಚಾರದ ಪ್ರಕಾರ, ಪಕ್ಷೇತರರನ್ನೂ ಒಳಗೊಂಡು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಲ್ಲಿ 137 (ಇಬ್ಬರು ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರನ್ನು ಹೊರತುಪಡಿಸಿ) ಬಲವಿದೆ. ಇದೀಗ, ರಾಜೀನಾಮೆ ನೀಡಿರುವ ಬೆಂಗಳೂರಿನ ಆರು ಜನ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಸ್ವೀಕಾರಗೊಂಡರೆ ಮೈತ್ರಿ ಬಲ 131ಕ್ಕೆ ಕುಸಿಯಲಿದೆ. ಜೊತೆಗೆ ಈ ಶಾಸಕರ ಬೆಂಬಲಿಗರೂ ತಮ್ಮ ನಾಯಕರು ಸೂಚನೆ ನೀಡಿದರೆ ರಾಜೀನಾಮೆ ನೀಡಬಹುದು ಅಥವಾ ಮೇಯರ್‌ ಚುನಾವಣೆಯಲ್ಲಿ ಅಡ್ಡಮತದಾನ ಮಾಡಬಹುದು ಅಥವಾ ತಟಸ್ಥವಾಗಿ ಉಳಿಯಲೂಬಹುದು. ಇದರಿಂದ, ಒಟ್ಟು 126 ಸದಸ್ಯರ ಸಂಖ್ಯಾಬಲ ಹೊಂದಿರುವ ಬಿಜೆಪಿ ಜೆಡಿಎಸ್‌ನ ಅತೃಪ್ತ ಶಾಸಕರು ಮತ್ತು ಪಕ್ಷೇತರರನ್ನು ತನ್ನೆಡೆಗೆ ಸೆಳೆದುಕೊಂಡು ಅಧಿಕಾರ ಹಿಡಿದರೆ ಆಶ್ಚರ್ಯವೇನಿಲ್ಲ.

ಏಕೆಂದರೆ, ಪಾಲಿಕೆಯಲ್ಲಿನ ಹಾಲಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಮೇಯರ್‌ ಮಂಜುನಾಥರೆಡ್ಡಿ ಸೇರಿದಂತೆ ಬಹಳಷ್ಟುಕಾಂಗ್ರೆಸ್‌ ಸದಸ್ಯರ ಪೈಕಿ ಶಾಸಕ ರಾಮಲಿಂಗಾರೆಡ್ಡಿ ಅವರ ಬೆಂಬಲಿಗರು ಹಾಗೂ ಇತರೆ ನಾಲ್ಕು ಶಾಸಕರ ಬೆಂಬಲಿಗರೇ ಇರುವುದರಿಂದ ಅವರೆಲ್ಲರೂ ಮುಂದಿನ ಸೆಪ್ಟಂಬರ್‌ನಲ್ಲಿ ನಡೆಯುವ ನೂತನ ಮೇಯರ್‌ ಚುನಾವಣೆಯಲ್ಲಿ ತಮ್ಮ ನಾಯಕರು ಹೇಳಿದಂತೆ ನಡೆದುಕೊಳ್ಳುವುದರಲ್ಲಿ ಸಂಶಯವೇನಿಲ್ಲ.

ಕೆಲವರು ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ. ಇದರ ಜೊತೆಗೆ ಜೆಡಿಎಸ್‌ನಲ್ಲಿ ಶಾಸಕ ಗೋಪಾಲಯ್ಯ ಅವರ ಪತ್ನಿ ಸೇರಿದಂತೆ ಅವರ ಬೆಂಬಲಿಗ ಸದಸ್ಯರೂ ಕೂಡ ಮೇಯರ್‌ ಚುನಾವಣೆ ವೇಳೆ ಅಡ್ಡ ಮತದಾನ ಮಾಡಬಹುದು. ಇದರಿಂದ ನಾಲ್ಕು ವರ್ಷಗಳಿಂದ ಮೈತ್ರಿ ಹಿಡಿತದಲ್ಲಿರುವ ಬಿಬಿಎಂಪಿ ಈ ಬಾರಿ ಬಿಜೆಪಿ ಪಾಲಾಗುವ ಸಾಧ್ಯತೆ ಹೆಚ್ಚಾಗಲಿದೆ. ಶಾಸಕರ ಪಕ್ಷಾಂತರ ಪರ್ವ ನಡೆದರೆ ಪಾಲಿಕೆಯಲ್ಲೂ ಅವರ ಬೆಂಬಲಿಗರ ಪಕ್ಷಾಂತರ ಪರ್ವ ನಡೆಯಲಿದೆ ಎನ್ನುತ್ತಾರೆ ಅವರ ಪ್ರಮುಖ ಬೆಂಬಲಿಗರ ಸದಸ್ಯರು.

click me!