
ನವದೆಹಲಿ: ಮಂಜುಗಡ್ಡೆಯ ಮೇಲೆ ಆಡುವ ವೈಯಕ್ತಿಕ ಕ್ರೀಡೆ ಆಯ್ತು, ತಂಡವಾಗಿ ಆಡುವ ಸ್ಕೇಟಿಂಗ್, ಹಾಕಿಯನ್ನು ಐಸ್ ಮೇಲೆ ಆಡಿದ್ದೂ ಆಯ್ತು. ಇದೀಗ ಕ್ರಿಕೆಟ್ ಸರದಿ. ಅಚ್ಚರಿಯಾದರೂ ನಿಜ. ಬರುವ ಫೆಬ್ರವರಿಯಲ್ಲಿ ಮಂಜುಗಡ್ಡೆ ಮೇಲೆ ಹಾಸಿದ ಪಿಚ್‌ನಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಉರಿ ಚೆಂಡೆಸೆಯಲಿದ್ದಾರೆ. ಭಾರತದ ಬಿಡುಬೀಸು ದಾಂಡಿಗ ವೀರೇಂದ್ರ ಸೆಹ್ವಾಗ್ ಚೆಂಡನ್ನು ಬೌಂಡರಿಗೆ ಅಟ್ಟಲಿದ್ದಾರೆ.
ಇವರಷ್ಟೇ ಅಲ್ಲ, ಜಾಕ್ ಕಾಲಿಸ್, ಗ್ರೇಮ್ ಸ್ಮಿತ್, ಡೇನಿಯಲ್ ವೆಟ್ಟೋರಿಯವರಂತಹ ದಿಗ್ಗಜ ಕ್ರಿಕೆಟಿಗರೂ ಮಂಜಿನ ಮೈದಾನಕ್ಕಿಳಿಯಲಿದ್ದಾರೆ. ಇಂತಹದೊಂದು ವಿಶಿಷ್ಟ ಕ್ರಿಕೆಟ್ ಕದನಕ್ಕೆ ಸಾಕ್ಷಿಯಾಗಲಿದೆ ಯುರೋಪ್‌ನ ಸ್ವರ್ಗ ಸದೃಶ ಸ್ವಿಜರ್ಲೆಂಡ್. ಇಲ್ಲಿನ ಹಿಮಪರ್ವತಗಳ ನಡುವೆ ಸೇಂಟ್ ಮಾರಿಟ್ಜ್ ಎಂಬ ಸುಂದರ ಸರೋವರವಿದೆ. ಈ ಸರೋವರ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ.
ಚಳಿಗಾಲದ ಒಲಿಂಪಿಕ್ಸ್‌ಗೂ ಆತಿಥ್ಯ ವಹಿಸಿರುವ ಈ ಸರೋವರ ಹೆಪ್ಪುಗಟ್ಟಿದಾಗ ಬರೋಬ್ಬರಿ 300 ಟನ್‌ನಷ್ಟು ತೂಕವನ್ನು ಹೊರಬಲ್ಲುದು. 1988ರಿಂದಲೂ ಚಳಿಗಾಲದಲ್ಲಿ ಮನರಂಜನೆಗಾಗಿ ಕ್ರಿಕೆಟ್ ಆಡಲಾಗುತ್ತಿದ್ದ ಈ ಸರೋವರದ ಮೇಲೆ ಇದೀಗ ಎರಡು ಟಿ20 ಪಂದ್ಯಗಳನ್ನು ಆಡಿಸಲು ಸಿದ್ಧತೆ ನಡೆದಿದೆ.
2018ರ ಫೆಬ್ರವರಿ 8 ಹಾಗೂ 9ರಂದು ಈ ಪಂದ್ಯಗಳು ನಡೆಯಲಿದ್ದು, ಒಂದು ತಂಡಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೇತೃತ್ವ ವಹಿಸಿದರೆ, ಮತ್ತೊಂದು ತಂಡವನ್ನು ಪಾಕ್‌ನ ಮಾಜಿ ವೇಗಿ ಶೋಯಬ್ ಅಖ್ತರ್ ಮುನ್ನಡೆಸಲಿದ್ದಾರೆ.
ಎರಡೇ ನಿಮಿಷದಲ್ಲಿ ಒಪ್ಪಿಗೆ:
ಈ ಕುರಿತು ಪ್ರತಿಕ್ರಿಯಿಸಿರುವ ಸೆಹ್ವಾಗ್, ‘ಐಸ್ ಮೇಲೆ ಕ್ರಿಕೆಟ್ ಆಡಲು ಸಾಧ್ಯ ಎಂದು ನಾನು ಭಾವಿಸಿರಲಿಲ್ಲ. ಇದೀಗ ಸಾಧ್ಯವಾಗುತ್ತಿದ್ದು, ಇದರ ಅನುಭವ ಪಡೆಯಲು ಕಾತುರನಾಗಿದ್ದೇನೆ. ಕೇವಲ ಎರಡೇ ನಿಮಿಷದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದೆ. ಐಸ್ ಮೇಲೆ ಕ್ರಿಕೆಟ್ ಆಡುವುದು ನಿಜವಾಗಿಯೂ ಸವಾಲಿನ ಕೆಲಸ’ ಎಂದಿದ್ದಾರೆ. ಇನ್ನು ಮೊಹಮ್ಮದ್ ಕೈಫ್, ‘ಯೂರೋಪ್ ನಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು ಇದು ಮೊದಲ ಹೆಜ್ಜೆಯಾಗಿದೆ. ಅದರಲ್ಲೂ ಐಸ್ ಮೇಲೆ ಕ್ರಿಕೆಟ್ ಎನ್ನುತ್ತಿದ್ದಂತೆ ಎಲ್ಲರ ಗಮನ ಸೆಳೆಯಲಿದೆ’ ಎಂದಿದ್ದಾರೆ.
ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್:
ಈ ಪಂದ್ಯಾವಳಿಗೆ ‘ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್’ ಎಂದು ನಾಮಕಾರಣ ಮಾಡಿದ್ದು, ಕ್ರಿಕೆಟ್ ಪರಿಚಯ ವಿಲ್ಲದ ಸ್ವಿಜರ್ಲೆಂಡ್‌ನಂತಹ ದೇಶಗಳಿಗೆ ಕ್ರಿಕೆಟನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ. ಈ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಹ ಸಮ್ಮತಿ ಸೂಚಿಸಿದೆ ಎಂದು ಪಂದ್ಯಗಳ ಆಯೋಜಕರಾದ ವಿಜೆ ಸ್ಪೋರ್ಟ್ಸ್‌ನ ವಿಜಯ್ ಸಿಂಗ್ ತಿಳಿಸಿದ್ದಾರೆ.
ಯಾರ್ಯಾರು ಆಡ್ತಾರೆ?
ಈ ತಂಡಗಳಲ್ಲಿ ಕ್ರಿಕೆಟ್ ಲೋಕದ ಹೆಸರಾಂತ ತಾರೆಯ ರಾದ ಮೊಹಮ್ಮದ್ ಕೈಫ್, ಮಹೇಲಾ ಜಯವರ್ಧನೆ, ಲಸಿತ್ ಮಾಲಿಂಗ, ಮೈಕಲ್ ಹಸ್ಸಿ, ಗ್ರೇಮ್ ಸ್ಮಿತ್, ಜಾಕ್ ಕಾಲಿಸ್, ಡೇನಿಯಲ್ ವೆಟ್ಟೋರಿ, ನೇಥನ್ ಮೆಕಲಮ್, ಗ್ರಾಂಟ್ ಎಲಿಯಟ್, ಮಾಂಟಿ ಪನೇಸರ್, ಓವೈಸ್ ಶಾ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಲಕ್ಷ ಲಕ್ಷ ವೇತನ | ಕೆಂಪು ಚೆಂಡು ಬಳಕೆ:
ಇನ್ನು ಪಂದ್ಯಗಳಲ್ಲಿ ಆಡುವ ಹೆಸರಾಂತ ಆಟಗಾರರಿಗೆ ಸುಮಾರು ₹26 ಲಕ್ಷದಿಂದ ₹33 ಲಕ್ಷ ಹಾಗೂ ಇತರೆ ಆಟಗಾರರಿಗೆ ₹12 ರಿಂದ ₹19 ಲಕ್ಷ ವೇತನ ಪಾವತಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೆಂಪು ಬಣ್ಣದ ಚೆಂಡಿನಲ್ಲಿ ಆಟವನ್ನು ಆಡಲಿಸಲಿದ್ದು, ಆಟಗಾರರು ಸ್ಪೈಕ್ಸ್ ಶೂಗಳ ಬದಲಿಗೆ ಸಾಮಾನ್ಯ ಕ್ರೀಡಾ ಶೂಗಳನ್ನು ಬಳಸಬೇಕಿದೆ. ಮ್ಯಾಟ್‌ಗಳ ಮೇಲೆ ಪಂದ್ಯಗಳನ್ನು ಆಡಿಸಲಿದ್ದಾರೆ. ವಾತಾವರಣ ಹಿತಕರವಾಗಿರಲಿದೆ ಎಂದು ಭಾವಿಸಲಾಗಿದೆ. ಆದಾಗ್ಯೂ ಸೂರ್ಯನ ದರ್ಶನ ಭಾಗ್ಯ ಕಂಡರೂ ಉಷ್ಣಾಂಶ -20 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.