
ಸರಕಾರ ಮೇಲೆ ನಂಬಿಕೆ ಇಡಿ. ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾಲು ಸಾಲು ಭಾಷಣ ಕೊಟ್ಟು ಹೊರಡುವ ಬಹುತೇಕರು ತಮ್ಮ ಮಕ್ಕಳನ್ನು ಮಾತ್ರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುತ್ತಾರೆ ಎನ್ನುವುದು ಬಹುತೇಕರ ವಿಚಾರದಲ್ಲಿ ಖಂಡಿತವಾಗಿರುತ್ತದೆ.
ಅದೂ ಅಲ್ಲದೇ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ. ಹಾಗಾಗಿ ಕಷ್ಟವೋ ಸುಖವೋ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂದು ಪ್ರತಿ ಪೋಷಕರೂ ಆಸೆ ಪಡುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಇದ್ದಾರೆ. ಇನ್ನೊಬ್ಬರಿಗೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂದು ಹೇಳುವುದರ ಜೊತೆಗೆ ತಮ್ಮ ಮಗಳನ್ನೂ ಸರಕಾರಿ ಶಾಲೆಗೇ ಸೇರಿಸಿ ಮಾದರಿಯಾಗಿದ್ದಾರೆ.
ಛತ್ತೀಸ್‌ಗಡ್ ರಾಜ್ಯದ ಐಎಎಸ್ ಅಧಿಕಾರಿ ಶರಣ್ ಈ ರೀತಿ ಮಾದರಿಯಾಗಿರುವವರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸರಕಾರಿ ಶಾಲೆಗಳ ಬಗ್ಗೆ ಅರಿವು ಮೂಡಿಸುತ್ತಿರುವ ಇವರು, ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಅವಶ್ಯವಾದ ಹತ್ತಾರು ಕ್ರಮಗಳನ್ನು ಕೈಗೊಂಡಿದ್ದಾರೆ.
ಮಗಳು ಓದುತ್ತಿರುವ ಸ್ಥಳೀಯ ಸರಕಾರಿ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಶರಣ್ ಅವರು ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಏರಿಕೆ ಕಂಡ ದಾಖಲಾತಿ: ಒಬ್ಬ ಐಎಎಸ್ ಆಫೀಸರ್ ತನ್ನ ಮಗಳನ್ನು ಸರಕಾರಿ ಶಾಲೆಗೆ ಸೇರಿಸುತ್ತಾರೆ ಎಂದರೆ ಅದು ಮಾಮೂಲಿ ಮಾತಲ್ಲ. ಇದು ಸಾಧ್ಯವಾಗಿದ್ದೇ ತಡ ಸುತ್ತಲಿನ ಸಾಮಾನ್ಯ ಜನರಲ್ಲೂ ನಾವೂ ಕೂಡ ಖಾಸಗಿ ವ್ಯಾಮೋಹ ಬಿಟ್ಟು ಸರಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ನಿರ್ಧಾರ ಮಾಡಿದ್ದರ ಪರಿಣಾಮವಾಗಿ ಶಾಲೆಯ ದಾಖಲಾತಿಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ.
ಇದರ ಜೊತೆಗೆ ಶಾಲೆಯ ಆಡಳಿತ ಮಂಡಳಿಗೂ ಇದರಿಂದ ಉತ್ಸಾಹ ಹೆಚ್ಚಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಸಾಮಾಜಿಕವಾಗಿ ಬದಲಾವಣೆ ಸಾಧ್ಯವಾಗಬೇಕಾದರೆ ನಾವು ಮೊದಲು ಹೆಜ್ಜೆ ಇಡಬೇಕು. ಉನ್ನತ ಹುದ್ದೆಯಲ್ಲಿರುವವರು ಹೀಗೆ ಮಾದರಿ ಕಾರ್ಯ ಮಾಡಿದರೆ ಅದು ಬೇಗನೇ ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ದೂರದ ಛತ್ತೀಸ್‌ಗಡ್‌ನ ಈ ಮಾದರಿ ಅಧಿಕಾರಿ ಶರತ್ ಅವರೇ ನಿದರ್ಶನ. ಇವರಿಗೆ ನಮ್ಮೆಲ್ಲರದೂ ಒಂದು ಸಲಾಂ ಇರಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.