ಬಾಲಾಕೋಟ್‌ ದಾಳಿ ಪ್ರೋಮೋ ಬಿಡುಗಡೆ!

By Web DeskFirst Published Oct 5, 2019, 9:13 AM IST
Highlights

ಬಾಲಾಕೋಟ್‌ ದಾಳಿ ಪ್ರೋಮೋ ಬಿಡುಗಡೆ| ಸಂಸ್ಥಾಪನಾ ದಿನದ ನಿಮಿತ್ತ ಹೊರತಂದ ವಾಯುಪಡೆ| ಇದು ನೈಜ ವಿಡಿಯೋ ಅಲ್ಲ: ವಾಯುಪಡೆ ಬಾಸ್‌

ನವದೆಹಲಿ[ಅ.05]: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಫೆಬ್ರವರಿಯಲ್ಲಿ ನಾಮಾವಶೇಷ ಮಾಡಿದ್ದ ಭಾರತೀಯ ವಾಯುಪಡೆ, ಆ ಕುರಿತಾದ ಪ್ರಚಾರ (ಪ್ರೊಮೋಷನಲ್‌) ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅ.8ರಂದು ವಾಯುಪಡೆಯ ಸಂಸ್ಥಾಪನಾ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌. ಭದೌರಿಯಾ ಅವರು ಲೋಕಾರ್ಪಣೆ ಮಾಡಿದ್ದಾರೆ.

ಯುದ್ಧ ವಿಮಾನಗಳು ಟೇಕಾಫ್‌ ಆಗುವುದು, ಕ್ಷಿಪಣಿ ಹಾರಿಸುವುದು ಹಾಗೂ ರಾಡಾರ್‌ಗಳು ನಿಗದಿತ ಗುರಿ ಮೇಲೆ ಲಕ್ಷ್ಯ ವಹಿಸುವುದು ಸೇರಿದಂತೆ ಹಲವು ರೋಚಕ ದೃಶ್ಯಗಳು ಈ ವಿಡಿಯೋದಲ್ಲಿವೆ. ಆದರೆ ಇದು ಫೆ.26ರಂದು ನಡೆದ ದಾಳಿಯ ನೈಜ ವಿಡಿಯೋ ಅಲ್ಲ ಎಂದು ಭದೌರಿಯಾ ಅವರು ಸ್ಪಷ್ಟಪಡಿಸಿದ್ದಾರೆ.

IAF releases Balakot video, Major Gaurav Arya calls it a positive move https://t.co/pS7EPFlQEv

— Republic (@republic)

ಫೆ.14ರಂದು ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಗೆ ಯಾವ ರೀತಿ ವಾಯುಪಡೆ ಪ್ರತೀಕಾರ ತೀರಿಸಿಕೊಂಡಿತು ಎಂಬ ಹಿನ್ನೆಲೆ ಧ್ವನಿಯೂ ಇರುವ ಈ ವಿಡಿಯೋದಲ್ಲಿ ವಾಯುಪಡೆ ಪೈಲಟ್‌ಗಳು ಸಭೆ ನಡೆಸುವ ದೃಶ್ಯವಿದೆ. ಮಿರಾಜ್‌-2000 ಯುದ್ಧ ವಿಮಾನಗಳತ್ತ ಪೈಲಟ್‌ಗಳು ಓಡುತ್ತಿರುವುದು ಹಾಗೂ ಆ ವಿಮಾನಗಳನ್ನು ಟೇಕಾಫ್‌ ಮಾಡುವ ಚಿತ್ರಣಗಳು ಇವೆ. ಬಾಲಾಕೋಟ್‌ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಮೇಲೆ ಫೆ.27ರಂದು ದಂಡೆತ್ತಿ ಬಂದಿದ್ದ ಪಾಕಿಸ್ತಾನ ವಿಮಾನಗಳ ಜತೆ ಭಾರತೀಯ ವಿಮಾನಗಳು ಕಾದಾಟ ನಡೆಸಿದ ದೃಶ್ಯಗಳನ್ನೂ ಈ ವಿಡಿಯೋ ಒಳಗೊಂಡಿದೆ.

click me!