ಪ್ರತೀ ವರ್ಷ 5 ದಿನ ಏಕಾಂಗಿಯಾಗಿ ಕಾಡಿಗೆ : ಕುತೂಹಲದ ಸಂಗತಿ ಬಿಚ್ಚಿಟ್ಟ ಮೋದಿ

By Web DeskFirst Published Jan 24, 2019, 8:51 AM IST
Highlights

ಮೋದಿ ಅವರು ಈಗ ಇಂಥದ್ದೇ ಇನ್ನೊಂದು ಸಂಚಲನದ ಹೇಳಿಕೆ ನೀಡಿದ್ದಾರೆ. ತಮ್ಮ ಬಗ್ಗೆಯೇ ಕುತೂಹಲದ ಸಂಗತಿ ಬಿಚ್ಚಿಟ್ಟಿದ್ದಾರೆ. ‘ನಾನು ಈ ಹಿಂದೆ ವರ್ಷಕ್ಕೆ 5 ದಿನ ಕಾಡಿನಲ್ಲಿ ಇರುತ್ತಿದ್ದೆ’ ಎಂದು ಮೋದಿ ಹೇಳಿದ್ದಾರೆ.

ನವದೆಹಲಿ :  ಈ ಹಿಂದೆ, ‘ನಾನು ಚಿಕ್ಕವನಿದ್ದಾಗ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ’ ಎಂದು ಹೇಳಿ ಸಂಚಲನ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಇಂಥದ್ದೇ ಇನ್ನೊಂದು ಸಂಚಲನದ ಹೇಳಿಕೆ ನೀಡಿದ್ದಾರೆ. ‘ನಾನು ಈ ಹಿಂದೆ ವರ್ಷಕ್ಕೆ 5 ದಿನ ಕಾಡಿನಲ್ಲಿ ಇರುತ್ತಿದ್ದೆ’ ಎಂದು ಮೋದಿ ಹೇಳಿದ್ದಾರೆ.

‘ದ ಹ್ಯೂಮನ್ಸ್‌ ಆಫ್‌ ಬಾಂಬೇ’ ಎಂಬ ಜನಪ್ರಿಯ ಫೇಸ್‌ಬುಕ್‌ ಪುಟಕ್ಕೆ ಸಂದರ್ಶನ ನೀಡಿರುವ ಮೋದಿ ಅವು ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಟಿಟ್ಟಿದ್ದಾರೆ. ‘ಈ ಹಿಂದೆ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ನಾನು 5 ದಿನ, ಯಾವುದೇ ನಾಗರಿಕ ಸಂಪರ್ಕವಿಲ್ಲದ, ಶುದ್ಧ ಕುಡಿಯುವ ನೀರು ದೊರಕುತ್ತಿದ್ದ ನಿರ್ಜನ ಅರಣ್ಯಕ್ಕೆ ಹೋಗುತ್ತಿದ್ದೆ. ಅಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ’ ಎಂದರು.

‘ಅದಕ್ಕೇ ನೀವೂ (ಜನರು), ಅದರಲ್ಲೂ ವಿಶೇಷವಾಗಿ ಯುವ ಜನರು, ನಿಮ್ಮ ಎಡೆಬಿಡದ ಜೀವನಶೈಲಿಯ ನಡುವೆಯೂ ಕೆಲ ಕಾಲ ವಿರಾಮ ತೆಗೆದುಕೊಳ್ಳಿ. ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಇದು ನಿಮ್ಮ ಜೀವನವನ್ನು ಬದಲಿಸುತ್ತದೆ. ನಿಮ್ಮನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದರು.

ತಾವು 17 ವರ್ಷದವನಿದ್ದಾಗ ಹಿಮಾಲಯಕ್ಕೆ 2 ವರ್ಷ ಕಾಲ ತೆರಳಿದ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಹಿಮಾಲಯದಿಂದ ಬಂದ ನಂತರ ನನ್ನ ಜೀವನಶೈಲಿ ಬದಲಾಯಿತು. ನನ್ನ ಗ್ರಾಮದಿಂದ ಅಹಮದಾಬಾದ್‌ಗೆ ಹೋದೆ. ನಗರದ ಜೀವನಶೈಲಿಗೆ ಒಗ್ಗಿಕೊಂಡೆ. ನನ್ನ ಚಿಕ್ಕಪ್ಪ ಕ್ಯಾಂಟೀನ್‌ ನಡೆಸುತ್ತಿದ್ದರು. ಅಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೆ. ಇದೇ ವೇಳೆ ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತನಾಗಿ ನಿಯೋಜಿತನಾದೆ’ ಎಂದರು.

‘ಸಂಘದಲ್ಲಿ ಇದ್ದಾಗ ಕಚೇರಿಯಲ್ಲಿ ನಿತ್ಯ ಕಸ ಗುಡಿಸುತ್ತಿದ್ದೆವು. ಕಚೇರಿಗೆ ಬರುವವರಿಗೆ ಚಹಾ ಮಾಡುತ್ತಿದ್ದೆವು. ಪಾತ್ರೆ ತೊಳೆಯುತ್ತಿದ್ದೆವು’ ಎಂದೂ ಪ್ರಧಾನಿ ಮೆಲುಕು ಹಾಕಿದರು.

‘ಇಷ್ಟೆಲ್ಲ ಕೆಲಸದ ಒತ್ತಡ ಇದ್ದರೂ ಹಿಮಾಲಯದಲ್ಲಿ ನಾನು ಪಡೆದ ಮನಶ್ಶಾಂತಿಯು ನನಗೆ ಸ್ಫೂರ್ತಿಯಾಗಿತ್ತು. ಬಳಿಕ ನಾನು ದೀಪಾವಳಿ ವೇಳೆ 5 ದಿವಸ ಕಾಲ ಪ್ರತಿವರ್ಷ ಎಡೆಬಿಡದ ಕೆಲಸದಲ್ಲೂ ರಜೆ ಪಡೆದು ನಿರ್ಜನ ಕಾಡಿಗೆ ತೆರಳುತ್ತಿದ್ದೆ. 5 ದಿವಸಕ್ಕೆ ಆಗುವಷ್ಟುತಿಂಡಿ-ತಿನಿಸು ಒಯ್ಯುತ್ತಿದ್ದೆ. ಅಲ್ಲಿ ಶುದ್ಧ ನೀರು ಇರುತ್ತಿತ್ತು. ಮನಶ್ಶಾಂತಿ ಇರುತ್ತಿತ್ತು. ಇದು ಬಹಳ ಜನರಿಗೆ ಗೊತ್ತಿಲ್ಲ’ ಎಂದು ಹೇಳಿದರು.

click me!