
ಮಂಗಳೂರು: ಮೊನ್ನೆ ಗೌರಿಗೆ ಬಿದ್ದ ಗುಂಡು ನನಗೂ ಬೀಳಬಹುದು. ಸಾವಿನ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ, ಅತೃಪ್ತರ ಆತ್ಮದ ಜೊತೆಗೆ ಸಾಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಹೇಳಿದರು.
ನಗರದ ಆಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ನನ್ನನ್ನು ಮಟ್ಟಹಾಕಬೇಕು ಎಂದು ತೀರ್ಮಾನಿಸಿದ್ದಾರೆ ಎಂಬುದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಆ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ಟರೂ ಇದ್ದರು ಎಂದು ಗೊತ್ತಾಗಿದೆ ಎಂದು ತಿಳಿಸಿದರು.
ಪೂಜಾರಿಯವರೇ ರಾಜಕೀಯ ಬಿಡಿ: ಇದೇ ವೇಳೆ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನುದ್ದೇಶಿಸಿ ಮಾತನಾಡಿದ ಮಟ್ಟು, ‘ಬೈಗುಳ, ಜಗಳ ಸಾಕು ಪೂಜಾರಿ ಅವರೇ. ಇನ್ನು ರಾಜಕೀಯ ನಿಮಗೆ ಕಷ್ಟ, ಇದು ಸಮಾಜ ಸುಧಾರಣೆಯ ಕಾಲ. ಆದ್ದರಿಂದ ರಾಜಕೀಯ ಬಿಟ್ಟು, ಸಮಾಜ ಸುಧಾರಣೆಗೆ ಬನ್ನಿ. ನಿಮ್ಮೊಂದಿಗೆ ಬಿಲ್ಲವ ಸಮಾಜ ಇದೆ. ಪೂಜಾರಿ ನೇತೃತ್ವ ವಹಿಸಿದರೆ ನಾನು ಎಲ್ಲವನ್ನೂ ಬಿಟ್ಟು ಅವರೊಂದಿಗೆ ಇರುತ್ತೇನೆ’ ಎಂದರು.
ಬಿಲ್ಲವರ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬಿಲ್ಲವ ಅರ್ಚಕರನ್ನೇ ಕರೆಯಿರಿ. ನಾರಾಯಣ ಗುರುಗಳಲ್ಲಿ ಭಕ್ತಿ ಇದ್ದರೆ ಇದನ್ನು ಪಾಲಿಸಿ ಎಂದೂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.