ರಾಹುಲ್‌ ಬಳಿ ಕಾಂಗ್ರೆಸ್ಸಿಗರ ವಿರುದ್ಧ ಗದಾಪ್ರಹಾರ ಮಾಡಿಲ್ಲ: ಸಿಎಂ

First Published Jun 20, 2018, 9:39 AM IST
Highlights

ರಾಜ್ಯ ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲಿಸುವ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಲಹೆ ಕೇಳಿದ್ದೇನೆಯೇ ಹೊರತು ಕಾಂಗ್ರೆಸ್‌ ನಾಯಕರ ವಿರುದ್ಧ ಗದಾಪ್ರಹಾರ ಮಾಡುವ ಅಥವಾ ಗುನ್ನಾ ಹಾಕುವ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಜೂ. 20):  ರಾಜ್ಯ ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲಿಸುವ ಕುರಿತಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಲಹೆ ಕೇಳಿದ್ದೇನೆಯೇ ಹೊರತು ಕಾಂಗ್ರೆಸ್‌ ನಾಯಕರ ವಿರುದ್ಧ ಗದಾಪ್ರಹಾರ ಮಾಡುವ ಅಥವಾ ಗುನ್ನಾ ಹಾಕುವ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟಗಳು ಜಂಟಿಯಾಗಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ವೈಯಕ್ತಿಕ ವಿಚಾರಕ್ಕಾಗಲಿ, ಕಾಂಗ್ರೆಸ್‌ ನಾಯಕರ ವಿರುದ್ಧ ಗದಾಪ್ರಹಾರ ಮಾಡುವುದಕ್ಕಾಗಲಿ ಅಥವಾ ಯಾರಿಗೋ ಗುನ್ನಾ ಹಾಕಲಾಗಲಿ ಭೇಟಿ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮುಕ್ತ ಚರ್ಚೆ ಮಾಡಿ ಅವರಿಂದ ಹಲವು ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲನೆ ಕುರಿತಂತೆ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದರು.

ಸಮ್ಮಿಶ್ರ ಸರ್ಕಾರದ ಮುಂದಿನ ಹಾದಿ, ಕಾರ್ಯಕ್ರಮಗಳ ಬಗ್ಗೆ ಮತ್ತು ಕಾಂಗ್ರೆಸ್‌ ಅಧ್ಯಕ್ಷರು ಸಮ್ಮಿಶ್ರ ಸರ್ಕಾರದ ನಿರೀಕ್ಷೆ ಏನು ಎಂಬ ವಿಚಾರಗಳಿಗೆ ಮಾತ್ರ ಮಾತುಕತೆ ಸೀಮಿತವಾಗಿತ್ತು. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ವಿಚಾರಗಳ ಕುರಿತು ಸಮಾಲೊಚನೆ ನಡೆಸಿಲ್ಲ. ರಾಹುಲ್‌ಗಾಂಧಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು.

ಐದು ವರ್ಷ ಸುಭದ್ರ:

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ಯಾವಾಗ ಪತನವಾಗಲಿದೆ ಎಂಬ ಆತಂಕ ಬೇಡ. ಐದು ವರ್ಷ ಸುಭದ್ರವಾಗಿ ಉತ್ತಮ ಕೆಲಸ ಮಾಡಲಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.

ಒಂದು ವರ್ಷ ನಮ್ಮನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಯವರೆಗೆ ಸರ್ಕಾರವನ್ನು ಯಾರಾದರೂ ಅಸ್ಥಿರಗೊಳಿಸಲು ಸಾಧ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರದ ರೂಪದಲ್ಲಿ ಹೀಗೆ ಮಾತನಾಡಿದೆನೇ ಹೊರತು ಒಂದು ವರ್ಷ ಮಾತ್ರ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ರೀತಿಯಲ್ಲಿ ಹೇಳಿಲ್ಲ ಎಂದು ತಿಳಿಸಿದರು.

ಸರ್ಕಾರದ ಶಕ್ತಿ ಮಾಧ್ಯಮಗಳು:

ಸಮಾಜದಲ್ಲಿ ನಾನು ಪ್ರಸ್ತುತವಾಗಿರಲು ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದ್ದು, ರಾಜ್ಯದ ಸಮಸ್ಯೆಗಳನ್ನು ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಸರ್ಕಾರದ ಶಕ್ತಿಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ರಾಜ್ಯದ ಯೋಜನೆಗಳ ಅನುಷ್ಠಾನ, ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಮಾಧ್ಯಮಗಳು ಕೈ ಜೋಡಿಸಬೇಕು. ಹಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ಕುಮಾರಸ್ವಾಮಿ ಇವತ್ತಿಗೂ ರಾಜಕೀಯಲ್ಲಿದ್ದಾನೆ ಎಂದರೆ ಅದಕ್ಕೆ ಕಾರಣ ಮಾಧ್ಯಮಗಳಾಗಿವೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. 

click me!