
ನವದೆಹಲಿ(ಫೆ. 28): ನೆಲದ ಮೇಲೆ ವಿಮಾನಕ್ಕಿಂತಲೂ ಹೆಚ್ಚು ವೇಗವಾಗಿ ಚಲಿಸಬಲ್ಲ ಹೈಪರ್'ಲೂಪ್ ಎಂಬ ಹೊಚ್ಚಹೊಸ ಸಾರಿಗೆ ವ್ಯವಸ್ಥೆ ಭಾರತಕ್ಕೆ ಅಡಿ ಇಡಬಹುದು ಎಂಬ ನಿರೀಕ್ಷೆ ಸಾಕಾರಗೊಳ್ಳುವ ಸಾಧ್ಯತೆ ಇದೆ. ಅಮೆರಿಕದ ಹೈಪರ್'ಲೂಪ್ ಟ್ರಾನ್ಸ್'ಪೋರ್ಟೇಶನ್ ಟೆಕ್ನಾಲಜೀಸ್ ಸಂಸ್ಥೆ ಇಂದು ರಾಜಧಾನಿಯಲ್ಲಿ "ಹೈಪರ್'ಲೂಪ್ ಒನ್" ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಅಮಿತಾಭ್ ಕಾಂತ್ ಅವರು ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಏನೇನು ಮಾಡಬಹುದು ಎಂಬುದರ ಕುರಿತು ಕಂಪನಿಯು ಈ ಕಾರ್ಯಕ್ರಮದಲ್ಲಿ ಪ್ರಸ್ತಾವಗಳನ್ನು ಮಾಡಲಿದೆ.
ಹೈಪರ್'ಲೂಪ್ ಸಂಸ್ಥೆಯು ಐದು ರಾಜ್ಯಗಳೊಂದಿಗೆ ತಮ್ಮ ಯೋಜನೆಗಳನ್ನು ಚರ್ಚಿಸುತ್ತಿದೆ. ಎಲ್ಲವೂ ಕ್ಷಿಪ್ರಗತಿಯಲ್ಲಿ ಸಾಕಾರಗೊಂಡರೆ ಹೈಪರ್'ಲೂಪ್ ಎಂಬ ವಿನೂತನ ಸಾರಿಗೆ ವ್ಯವಸ್ಥೆ ಹೊಂದಿದ ವಿಶ್ವದ ಚೊಚ್ಚಲ ರಾಷ್ಟ್ರ ಎಂಬ ಹಿರಿಮೆ ಭಾರತದ್ದಾಗಬಹುದು. ದುಬೈನಲ್ಲಿ ಈಗಾಗಲೇ ಈ ಯೋಜನೆಯ ಪ್ರಾಥಮಿಕ ರೂಪುರೇಖೆ ನಡೆಯುತ್ತಿದೆ. ವಿಶ್ವಾದ್ಯಂತ ಹಲವು ದೇಶಗಳ ಮುಂದೆ ಹೈಪರ್'ಲೂಪ್ ಯೋಜನೆಯ ಪ್ರಸ್ತಾವಗಳು ಇದ್ದರೂ ಯಾರೂ ಕೂಡ ಇನ್ನೂ ಹಸಿರು ನಿಶಾನೆ ತೋರಿಲ್ಲ. ಈಗ ಕೇಂದ್ರದ ಮೋದಿ ಸರಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು.
ಹೈಪರ್'ಲೂಪ್ ಟ್ರಾನ್ಸ್'ಪೋರ್ಟೇಶನ್ ಟೆಕ್ನಾಲಜೀಸ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಬೋಪ್ ಜಿ.ಗ್ರೆಸ್ಟಾ ಅವರು ಕಳೆದೆರಡು ವಾರದ ಹಿಂದೆ ಭಾರತಕ್ಕೆ ಆಗಮಿಸಿ ಯೋಜನೆಯ ಕುರಿತು ಪ್ರಧಾನಿ ಮೋದಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದರು.
ಬುಲೆಟ್ ಟ್ರೈನ್'ಗಿಂತ ಇದು ಉತ್ತಮವಾ?
ಶೂನ್ಯ ವಾತಾವರಣದ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಹೈಪರ್'ಲೂಪ್ ತಂತ್ರಜ್ಞಾನ ಬುಲೆಟ್ ರೈಲಿಗಿಂತಲೂ ಸುರಕ್ಷಾ ಹಾಗೂ ಕಡಿಮೆ ವೆಚ್ಚದ ಪ್ರಾಜೆಕ್ಟ್ ಎನ್ನಲಾಗಿದೆ. ಗಂಟೆಗೆ 200-700 ಕಿಮೀ ವೇಗದಲ್ಲಿ ಹೋಗುವ ಬುಲೆಟ್ ಟ್ರೈನ್ ಬಗ್ಗೆ ಕೆಲವಾರು ಆಕ್ಷೇಪಗಳಿವೆ. ರೈಲು ಹಳಿಯ ಮೇಲಿನ ಘರ್ಷಣೆಯಾಗುವುದು ಪ್ರಮುಖ ಸಮಸ್ಯೆ. ಬಿಬೋಪ್ ಗ್ರೆಸ್ಟಾ ಹೇಳುವ ಪ್ರಕಾರ ಗಂಟೆಗೆ 500 ಕಿಮೀಗಿಂತ ಹೆಚ್ಚು ವೇಗದಲ್ಲಿ ರೈಲು ಚಲಿಸಿದರೆ, ಗಾಳಿಯು ದ್ರವಂತಾಗುತ್ತದೆ. ಇದು ಒಂದು ರೀತಿಯಲ್ಲಿ ನೀರಿನ ಗೋಡೆ ಅಪ್ಪಳಿಸಿದಂತಾಗುತ್ತದೆ. ಇದರಿಂದ ಸಾಕಷ್ಟು ಸುರಕ್ಷತಾ ಸಮಸ್ಯೆ ಎದುರಾಗುತ್ತದೆ. ಅಲ್ಲದೇ ಈ ಬುಲೆಟ್ ರೈಲಿಗೆ ಸಿಕ್ಕಾಪಟ್ಟೆ ಹಣ ಹಾಗೂ ಶಕ್ತಿ ವ್ಯಯವಾಗುತ್ತದೆ. ಅದು ಯಾವುದೇ ಕೋನದಲ್ಲೂ ಆದಾಯದ ಯೋಜನೆಯಲ್ಲ ಎಂದನ್ನುತ್ತಾರೆ ಹೈಪರ್'ಲೂಪ್ ಸಂಸ್ಥಾಪಕರು.
ಹೈಪರ್'ಲೂಪ್ ಹೇಗೆ?
ಇದು ಘರ್ಷಣೆ ಮುಕ್ತ ವ್ಯಾಕ್ಯೂಮ್ ವಾತಾವರಣದ ವ್ಯವಸ್ಥೆಯಾಗಿದೆ. ಇದರಲ್ಲಿ ಗಂಟೆಗೆ 900-1200 ಕಿಮೀ ವೇಗದಲ್ಲಿ ವಾಹನವನ್ನು ಚಲಾಯಿಸಬಹುದು. ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗಬಹುದು. ಹೈಪರ್'ಲೂಪ್'ನಲ್ಲಿ ಕೂತು ಪ್ರಯಾಣಿಸಿದರೆ ಏರೋಪ್ಲೇನ್'ನಲ್ಲಿದ್ದಂತೆ ಭಾಸವಾಗುತ್ತದೆ. ಪ್ರಯಾಣ ಮಾಡುತ್ತಿದ್ದೀರೆಂಬ ಭಾವನೆಯೇ ಸಿಗದಷ್ಟು ಸ್ಮೂತಾಗಿ ಸಾಗಬಹುದು ಎಂದು ಗ್ರೆಸ್ಟಾ ಹೇಳುತ್ತಾರೆ.
ಎಷ್ಟು ವೆಚ್ಚವಾಗುತ್ತದೆ?
ಸದ್ಯದ ಅಂದಾಜಿನ ಪ್ರಕಾರ, ಪ್ರತೀ ಕಿಮೀ ಹೈಪರ್'ಲೂಪ್'ಗೆ 40 ಮಿಲಿಯನ್ ಡಾಲರ್ (270 ಕೋಟಿ ರೂಪಾಯಿ) ವೆಚ್ಚವಾಗುತ್ತದೆ. ಅಂದರೆ, ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕೆಂದಿರುವ ಸ್ಟೀಲ್ ಫ್ಲೈಓವರ್'ಗೆ ಆಗುವ ವೆಚ್ಚದಷ್ಟೇ ಹಣದಲ್ಲಿ ಹೈಪರ್'ಲೂಪ್ ನಿರ್ಮಿಸಬಹುದಂತೆ.
ಯಾವೆಲ್ಲಾ ದೇಶದಲ್ಲಿದೆ?
ಹೈಪರ್'ಲೂಪ್ ಭವಿಷ್ಯದ ತಂತ್ರಜ್ಞಾನವಾಗಿದ್ದು ಇನ್ನೂ ಯಾವುದೇ ದೇಶದಲ್ಲಿ ಕಾರ್ಯಗತವಾಗಿಲ್ಲ. ಅಬುಧಾಬಿಯಲ್ಲಿ ಯೋಜನೆಗೆ ಅಂಗೀಕಾರ ದೊರೆತಿದ್ದು, ಕೆಲವೇ ವರ್ಷಗಳಲ್ಲಿ ಅಲ್ಲಿ ಯೋಜನೆ ಶುರುವಾಗಬಹುದು. ಅಮೆರಿಕದಲ್ಲಿ ಯೋಜನೆ ಕಾರ್ಯಗತಗೊಳಿಸಲು ಸಮೀಕ್ಷೆ ಮತ್ತು ಅಧ್ಯಯನಗಳು ನಡೆಯುತ್ತಿವೆ. ಭಾರತ ಸೇರಿದಂತೆ ಒಟ್ಟು 20 ದೇಶಗಳ ಮುಂದೆ ಹೈಪರ್'ಲೂಪ್ ಯೋಜನೆಯ ಪ್ರಸ್ತಾವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.