ಭೂಮಿಯ ಮೇಲೆ ಮಾನವ ಸಂತತಿ ಇನ್ನು ಸಾವಿರ ವರ್ಷವೂ ಇರಲಾರದು: ಹಾಕಿಂಗ್ ಭವಿಷ್ಯ

By Suvarna Web DeskFirst Published Nov 18, 2016, 7:50 AM IST
Highlights

"ಮಂಗಳ ಗ್ರಹದಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಮಾನವ ವಸಾಹತು ನಿರ್ಮಿಸಲು ನೂರಕ್ಕಿಂತ ಹೆಚ್ಚು ವರ್ಷ ಬೇಕು. ಅಷ್ಟರಲ್ಲಿ ಮಾನವರು ಬೇರೆ ಬೇರೆ ಸ್ಥಳಗಳನ್ನು ಶೋಧಿಸಲು ಯತ್ನಿಸುತ್ತಲೇ ಇರಬೇಕು"

ಲಂಡನ್(ನ. 18): ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಮಾನವ ಸಂತತಿ ಅಬ್ಬಬ್ಬಾ ಅಂದರೆ ಇನ್ನು 1 ಸಾವಿರ ವರ್ಷ ಭೂಮಿಯಲ್ಲಿ ಉಳಿಯಬಹುದು ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಭಿಪ್ರಾಯಪಟ್ಟಿದ್ದಾರೆ. ಆಕ್ಸ್'ಫರ್ಡ್ ಯೂನಿಯನ್'ನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಕಿಂಗ್, ಮಾನವರು ವಾಸಿಸಲು ಬೇರೆ ಗ್ರಹ ಅಥವಾ ಸ್ಥಳವನ್ನು ನೋಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

"ಭೂಮಿಯಲ್ಲಿ ಇನ್ನು ಹೆಚ್ಚು ವರ್ಷ ಬದುಕಲು ಆಗುವುದಿಲ್ಲ. ಹೆಚ್ಚೆಂದರೆ ಸಾವಿರ ವರ್ಷವಷ್ಟೇ ಇಲ್ಲಿರಬಲ್ಲೆವು. ಮಂಗಳ ಗ್ರಹದಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಮಾನವ ವಸಾಹತು ನಿರ್ಮಿಸಲು ನೂರಕ್ಕಿಂತ ಹೆಚ್ಚು ವರ್ಷ ಬೇಕು. ಅಷ್ಟರಲ್ಲಿ ಮಾನವರು ಬೇರೆ ಬೇರೆ ಸ್ಥಳಗಳನ್ನು ಶೋಧಿಸಲು ಯತ್ನಿಸುತ್ತಲೇ ಇರಬೇಕು" ಎಂದು ಬ್ರಿಟನ್'ನ ಈ ವಿಜ್ಞಾನಿ ತಿಳಿಸಿದ್ದಾರೆ.

ಈ ವಿಶ್ವದ ಒಂದು ಅಣುಭಾಗವಷ್ಟೇ ಆಗಿರುವ ಮಾನವ ಈಗ ವಿಶ್ವದ ಸತ್ಯವನ್ನು ತಿಳಿದುಕೊಳ್ಳುವ ಸಾಹಸ ಮಾಡುತ್ತಿರುವುದು ಸ್ವಾಗತಾರ್ಹ. ಈ ವಿಚಾರದಲ್ಲಿ ಮನುಷ್ಯ ಸಾಕಷ್ಟು ಮುಂದೆ ಹೋಗಿದ್ದಾನೆ. ಆದರೂ ಕೂಡ ವಿಶ್ವದ ಅದೆಷ್ಟೋ ರಹಸ್ಯಗಳನ್ನು ಭೇದಿಸಲು ಸಾಧ್ಯವಾಗಿಲ್ಲ. ಮುಂಬರುವ ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿ ತೋರಬೇಕು ಎಂದು ಹಾಕಿಂಗ್ ಕರೆ ನೀಡಿದ್ದಾರೆ.

"ಕೆಳಗಿರುವ ನೆಲದ ಬದಲು ಮೇಲಿರುವ ತಾರೆಗಳತ್ತ ನೋಡಿರಿ. ಈ ವಿಶ್ವವು ಹೇಗೆ ಅಸ್ತಿತ್ವದಲ್ಲಿದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಅದರ ಬಗ್ಗೆ ಕುತೂಹಲವಿರಲಿ. ಇದು ಕಷ್ಟಸಾಧ್ಯವಾದರೂ ಏನಾದರೂ ಮಾರ್ಗೋಪಾಯವಿರುತ್ತದೆ. ಏನೇ ಆಗಲಿ ಛಲ ಬಿಡದೇ ಪ್ರಯತ್ನ ಮುಂದುವರಿಸಿ" ಎಂದು ಹಾಕಿಂಗ್ ಸಲಹೆ ನೀಡಿದ್ದಾರೆ.

click me!