
ಬೆಂಗಳೂರು(ಸೆ. 29): ಬೆಂಜ್ ಕಾರು ಅಪಘಾತ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ ಪುತ್ರ ಗೀತಾವಿಷ್ಣು ಅವರು ಮಲ್ಯ ಆಸ್ಪತ್ರೆಯಿಂದ ತಪ್ಪಿಸಿಕೊಂಡಿರುವುದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಉದ್ಯಮಿ ಆದಿಕೇಶವುಲು ಅವರ ಮೊಮ್ಮಗನಾಗಿರುವ ಗೀತಾವಿಷ್ಣು ಆಸ್ಪತ್ರೆಯಿಂದ ಎಸ್ಕೇಪ್ ಆಗುವ ಮುನ್ನ ಸಾಕಷ್ಟು ಚಾಲಾಕಿತನ ತೋರಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಯಿಂದ ಫೈರ್ ಎಕ್ಸಿಟ್ ಬಗ್ಗೆ ಮಾಹಿತಿ ಪಡೆದು ಆ ದಾರಿ ಮೂಲಕವೇ ವಿಷ್ಣು ಪರಾರಿಯಾಗಿದ್ದಾನೆನ್ನುವುದು ಬಹುತೇಕ ಖಚಿತವಾಗಿದೆ. ವಿಷ್ಣು ತಪ್ಪಿಸಿಕೊಳ್ಳಲು ಆತನ ಗನ್'ಮ್ಯಾನ್ ಸಹಾಯ ಮಾಡಿದ್ದಾನೆ. ಇಬ್ಬರೂ ಕೂಡ ಫೈರ್ ಎಕ್ಸಿಟ್ ಮೂಲಕವೇ ಶುಕ್ರವಾರ ಬೆಳಗ್ಗೆ 6:15ರ ಸುಮಾರಿಗೆ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾರೆ.
ಇದೇ ವೇಳೆ, ಸುವರ್ಣನ್ಯೂಸ್ ಸಿಕ್ಕ ಮಾಹಿತಿ ಪ್ರಕಾರ ಗೀತಾವಿಷ್ಣು ಸದ್ಯ ಬೆಂಗಳೂರಿನ ಹೊರವಲಯದ ಫಾರ್ಮ್'ಹೌಸ್'ವೊಂದರಲ್ಲಿ ಅಡಗಿಕೊಂಡಿದ್ದಾನೆನ್ನಲಾಗಿದೆ. ಪೊಲೀಸರು ಆತನನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಅವರ ಮೊಮ್ಮಗ ವಿಷ್ಣು(27) ಮೊನ್ನೆ ಬೆಂಗಳೂರಿನ ಸೌಥ್'ಎಂಡ್ ಸರ್ಕಲ್ ಸಮೀಪ ತಮ್ಮ ಮರ್ಸಿಡಿಸ್ ಬೆಂಜ್ ಕಾರನ್ನು ಮಾರುತಿ ಆಮ್ನಿ ವ್ಯಾನ್'ಗೆ ಗುದ್ದಿರುತ್ತಾನೆ. ಸ್ಥಳೀಯರು ವಿಷ್ಣುವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುತ್ತಾರೆ. 2.8 ಕೋಟಿ ಬೆಲೆಯ ಈ ಕಾರಿನಲ್ಲಿ 110 ಗ್ರಾಮ್ ಗಾಂಜಾ ಪತ್ತೆಯಾಗಿದೆ. ಈ ಕಾರಿನಲ್ಲಿ ವಿಷ್ಣು ಜೊತೆ ಆತನ ಡ್ರೈವರ್ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಇದ್ದರೆಂದು ಹೇಳಲಾಗುತ್ತಿದೆಯಾದರೂ ಆ ಇಬ್ಬರು ವ್ಯಕ್ತಿಗಳು ನಿಗೂಢವಾಗಿ ಅಲ್ಲಿಂದ ತಪ್ಪಿಸಿಕೊಂಡಿರುತ್ತಾರೆ. ಸ್ಯಾಂಡಲ್ವುಡ್'ನ ಇಬ್ಬರು ಸ್ಟಾರ್'ಗಳು ಗಾಂಜಾ ಸೇವಿಸಿ ಆ ಕಾರಿನಲ್ಲಿದ್ದರೆಂಬ ಮಾತು ಕೇಳಿಬರುತ್ತಿದೆ. ಆದರೆ, ವಿಷ್ಣು ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಕಾರಿನಲ್ಲಿ ತಾನು ಮತ್ತು ಡ್ರೈವರ್ ಇಬ್ಬರೇ ಇದ್ದದ್ದು, ಡ್ರೈವರ್ ತಪ್ಪಿನಿಂದಾಗಿ ಕಾರು ಅಪಘಾತವಾಯಿತು ಎಂದಿದ್ದಾರೆ.
ಅಪಘಾತವಾದ ಬಳಿಕ ಪೊಲೀಸರು ವಿಷ್ಣುವನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾಕತಾಳೀಯವಾಗಿ, ವಿಷ್ಣುವಿನ ತಾಯಿ ತೇಜಸ್ವಿನಿ ಅವರು ಮಲ್ಯ ಆಸ್ಪತ್ರೆಯ ನಿರ್ದೇಶಕರಲ್ಲೊಬ್ಬರಾಗಿದ್ದಾರೆ. ಆಕೆ ತನ್ನ ಪ್ರಭಾವ ಬಳಸಿ ಮಗನನ್ನು ಅಲ್ಲಿಂದ ಎಸ್ಕೇಪ್ ಕೂಡ ಮಾಡಿರಬಹುದೆಂಬ ಶಂಕೆಯೂ ಇದೆ. ಆದರೆ, ಆಸ್ಪತ್ರೆಯಿಂದ ವಿಷ್ಣು ತಪ್ಪಿಸಿಕೊಳ್ಳಲು ಯಾವುದೇ ಪ್ರಭಾವ ಕಾರಣವಲ್ಲ ಎಂದು ಮಲ್ಯ ಆಸ್ಪತ್ರೆ ವೈದ್ಯ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.
ಇನ್ನು, ಪೊಲೀಸರು ವಿಷ್ಣು ಮೇಲೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಪಘಾತ ಹಾಗೂ ಗಾಂಜಾ ಪ್ರಕರಣಗಳು ದಾಖಲಾಗಿವೆ. ಗಾಂಜಾ ಕೇಸ್'ನ ಭಯದಿಂದ ವಿಷ್ಣು ಪರಾರಿಯಾಗಿದ್ದಿರಬಹುದೆಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.