ಅರಬ್‌ ದೇಶಗಳಿಗೆ ʼಮಧ್ಯ ಪ್ರಾಚ್ಯʼ ಅಂತೀವಲ್ಲಾ, ಹಾಗೆಂದರೇನು?

Published : Mar 03, 2026, 05:28 PM IST
gulf war

ಸಾರಾಂಶ

ಅರಬ್‌ ದೇಶಗಳಿಗೆ 'ಮಧ್ಯ ಪ್ರಾಚ್ಯ' ಅಥವಾ 'ಮಿಡಲ್ ಈಸ್ಟ್' ಎಂಬ ಪದ ಬಳಕೆಗೆ ಬಂದುದು ಹೇಗೆ? ಈ ಪದದ ಇತಿಹಾಸ, ರಾಜಕೀಯ ಭಾರ ಮತ್ತು ಪರ್ಯಾಯ ಪದಗಳ ಕುರಿತು ಇಂಟರೆಸ್ಟಿಂಗ್‌ ಡೀಟೇಲ್ಸ್‌ ಇಲ್ಲಿದೆ.  

ಗಲ್ಫ್ ಯುದ್ಧ, ತೈಲ ದರ ಏರಿಕೆ, ಅಮೆರಿಕಾ– ಇರಾನ್ ಹಣಾಹಣಿ, ಇಸ್ರೇಲ್– ಪ್ಯಾಲೆಸ್ಟೈನ್ ಸಂಘರ್ಷ, ಸಿರಿಯಾ- ಲೆಬನಾನ್‌ ತಿಕ್ಕಾಟಗಳು... ಈ ಎಲ್ಲ ಸುದ್ದಿಗಳನ್ನು ಓದುವಾಗ ಕೇಳುವಾಗ ನಾವು ನಿರಂತರವಾಗಿ ಕೇಳುವ ಪದ ಮಧ್ಯ ಪ್ರಾಚ್ಯ ಅಥವಾ “ಮಿಡಲ್ ಈಸ್ಟ್” (Middle East). ಆದರೆ ಈ ಪದದ ಅರ್ಥ ಏನು? ಇದು ನಿಜವಾದ ಭೌಗೋಳಿಕ ಪದವಾ? ಅಥವಾ ರಾಜಕೀಯ ಇತಿಹಾಸದಿಂದ ಬಂದ ಪದವಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

“ಮಧ್ಯ” ಎಂದರೆ ಯಾವುದರ ಮಧ್ಯ? ಸಾಮಾನ್ಯವಾಗಿ ಏಷ್ಯಾದ ಪಶ್ಚಿಮೋತ್ತರ ಭಾಗ, ಯುರೋಪಿನ ದಕ್ಷಿಣಪೂರ್ವದ ಭಾಗಗಳನ್ನು ಮಿಡಲ್‌ ಈಸ್ಟ್‌ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ಉಲ್ಲೇಖದಲ್ಲಿ ಬರುವ ದೇಶಗಳು- ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಓಮನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್, ಕೆಲವೊಮ್ಮೆ ಈಜಿಪ್ಟ್.

“ಮಿಡಲ್ ಈಸ್ಟ್” ಎಂಬ ಪದವನ್ನು ಮೊದಲ ಬಾರಿ 1902ರಲ್ಲಿ ಅಮೆರಿಕದ ನೌಕಾಪಡೆ ತಂತ್ರಜ್ಞ Alfred Thayer Mahan ಬಳಸಿದ ಎಂದು ಇತಿಹಾಸ ಹೇಳುತ್ತದೆ. ಆತ ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳನ್ನು ವಿಶ್ಲೇಷಿಸುವಾಗ, ಭಾರತ ಮತ್ತು ಪರ್ಷಿಯನ್ ಗಲ್ಫ್ ನಡುವಿನ ಪ್ರದೇಶವನ್ನು “Middle East” ಎಂದು ಕರೆದ.

ಆ ಸಮಯದಲ್ಲಿ ಲೋಕವನ್ನು ನೋಡುವ ಕಣ್ಣು ಲಂಡನ್‌ನದಾಗಿತ್ತು. ಆಗ Near East ಎಂದರೆ ಬಾಲ್ಕನ್ ಪ್ರದೇಶ ಮತ್ತು ಒಟ್ಟೊಮನ್‌ ಸಾಮ್ರಾಜ್ಯದ ಭಾಗಗಳು, Far East ಎಂದರೆ ಚೀನಾ ಮತ್ತು ಜಪಾನ್. ಇವುಗಳ ನಡುವೆ ಇದ್ದ ಪ್ರದೇಶವೇ Middle East ಎನ್ನಬಹುದು. ಅಂದರೆ, “ಮಧ್ಯ” ಎಂಬುದು ಯೂರೋಪ್‌ನಿಂದ ಅಳೆಯಲ್ಪಟ್ಟ ಮಧ್ಯ. ಇದು ಸಾಮ್ರಾಜ್ಯಶಾಹಿಯ ಭಾಷೆ.

ಬ್ರಿಟಿಷ್ ಸಾಮ್ರಾಜ್ಯ ವಿಸ್ತಾರವಾದಂತೆ, ತನ್ನ ವಸಾಹತು ಪ್ರದೇಶಗಳನ್ನು ವರ್ಗೀಕರಿಸಲು ಪದಗಳು ಬೇಕಾಗಿದ್ದವು. ಈಜಿಪ್ಟ್, ಅರಬ್ ಪ್ರದೇಶಗಳು, ಪರ್ಷಿಯನ್ ಗಲ್ಫ್ ಭಾಗಗಳು ಲಂಡನ್‌ಗೆ ಪೂರ್ವದಲ್ಲಿದ್ದರೂ, ಚೀನಾದಷ್ಟು ದೂರ ಇರಲಿಲ್ಲ. ಆದ್ದರಿಂದ ಅವುಗಳಿಗೆ “Middle East” ಎಂಬ ಲೇಬಲ್ ಅಂಟಿತು. ಇದು ತಟಸ್ಥ ಪದವಲ್ಲ. ಇದು ನೌಕಾಪಡೆ ಮಾರ್ಗಗಳು, ತೈಲ ಮಾರ್ಗಗಳು, ಮತ್ತು ಸೈನಿಕ ತಂತ್ರಗಳ ಆಧಾರದ ಮೇಲೆ ಹುಟ್ಟಿದ ಪದ.

ಪ್ರಥಮ ವಿಶ್ವಯುದ್ಧದ ನಂತರ ಒಟ್ಟೊಮನ್‌ ಸಾಮ್ರಾಜ್ಯ ಕುಸಿದಾಗ, ಹೊಸ ರಾಷ್ಟ್ರಗಳು ರೂಪುಗೊಂಡವು. ಆದರೆ “Middle East” ಎಂಬ ಪದ ಹಾಗೇ ಉಳಿಯಿತು. ಆದರೆ ಇದರ ಗಡಿ ಎಲ್ಲಿದೆ? ಸ್ಪಷ್ಟತೆ ಇಲ್ಲ. ಇಂದಿಗೂ “Middle East” ಎಂಬ ಪ್ರದೇಶದ ಗಡಿ ಸ್ಪಷ್ಟವಿಲ್ಲ. ಇದರಲ್ಲಿ ಉತ್ತರ ಆಫ್ರಿಕಾ ದೇಶಗಳು ಸೇರಿದೆಯೇ, ಈಜಿಪ್ಟ್‌ ಸೇರಿದೆಯೇ ಇಲ್ಲವೇ ಗೊತ್ತಿಲ್ಲ. ಈ ಬಗ್ಗೆ ವಿಶ್ಲೇಷಕರಿಗೊಂದು ಅಭಿಪ್ರಾಯ, ರಾಜಕೀಯ ನಾಯಕರಿಗೊಂದು ಅಭಿಪ್ರಾಯ ಇದೆ. ಇದೇ ಕಾರಣಕ್ಕೆ ಕೆಲವರು ಈ ಪದವನ್ನು ಪ್ರಶ್ನಿಸುತ್ತಾರೆ.

ಗಲ್ಫ್ ಯುದ್ಧ ಮತ್ತು ಪದದ ರಾಜಕೀಯ ಭಾರ

ಗಲ್ಫ್ ಯುದ್ಧಗಳು- ವಿಶೇಷವಾಗಿ 1991ರ ಗಲ್ಫ್ ಯುದ್ಧ ಮತ್ತು ನಂತರದ ಇರಾಕ್ ಯುದ್ಧಗಳು ಈ ಪದವನ್ನು ಜಾಗತಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಿದ್ಧಗೊಳಿಸಿತು. ತೈಲ ಸಂಪತ್ತಿನ ಕಾರಣದಿಂದ ಈ ಪ್ರದೇಶ ಜಾಗತಿಕ ಶಕ್ತಿಗಳ ಗಮನದ ಕೇಂದ್ರವಾಯಿತು. ಮಾಧ್ಯಮಗಳಲ್ಲಿ “Middle East” ಪದವು ಬಹುಪಾಲು ಯುದ್ಧ, ತೈಲ ರಾಜಕೀಯ, ಉಗ್ರವಾದ, ಅಸ್ಥಿರತೆ- ಈ ವಿಷಯಗಳ ಜೊತೆ ಜೋಡಿಸಲ್ಪಟ್ಟಿತು.

ಆದರೆ ನಿಜವಾಗಿ ಈ ಪ್ರದೇಶ ಬಹಳ ವೈವಿಧ್ಯಮಯವಾಗಿದೆ. ಮೆಡಿಟೆರೇನಿಯನ್ ಸಮುದ್ರದಿಂದ ಪರ್ಷಿಯನ್ ಗಲ್ಫ್ ವರೆಗೆ ಹರಡಿರುವ ಈ ಭೂಭಾಗದಲ್ಲಿ ಪರ್ಷಿಯನ್, ಅರಬ್, ಟರ್ಕಿಷ್ ಸಂಸ್ಕೃತಿಗಳು, ವಿಭಿನ್ನ ಭಾಷೆಗಳು, ಬೇರೆ ಬೇರೆ ಧರ್ಮಗಳು ಇವೆ. ಒಂದೇ ಪದದಲ್ಲಿ ಈ ವೈವಿಧ್ಯತೆಯನ್ನು ಕಟ್ಟಿಹಾಕುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಹಾಗಾದರೆ ಇದಕ್ಕೆ ಪರ್ಯಾಯ ಪದಗಳು ಯಾವುವು? ಇತ್ತೀಚೆಗೆ ಕೆಲವು ಅಕಾಡೆಮಿಕ್ ಮತ್ತು ರಾಜಕೀಯ ವಲಯಗಳಲ್ಲಿ “West Asia” (ಪಶ್ಚಿಮ ಏಷ್ಯಾ) ಅಥವಾ “North Africa” ಎಂಬ ಪದಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಈ ಪದಗಳು ಯೂರೋಪ್ ಕೇಂದ್ರಿತ ದೃಷ್ಟಿಕೋನವನ್ನು ತಪ್ಪಿಸಲು ಪ್ರಯತ್ನಿಸುತ್ತವೆ. ಆದರೆ “Middle East” ಪದ ಈಗಾಗಲೇ ರಾಜತಾಂತ್ರಿಕ ಚರ್ಚೆ, ಸೈನಿಕ ಒಪ್ಪಂದಗಳು, ಜಾಗತಿಕ ಮಾಧ್ಯಮಗಳಲ್ಲಿ ಗಾಢವಾಗಿ ನೆಲೆಯೂರಿದೆ. ಪದ ಬದಲಿಸುವುದು ಅಷ್ಟೇ ಸುಲಭವಲ್ಲ.

ದೊಡ್ಡ ಪ್ರಶ್ನೆಯೆಂದರೆ, ಹೆಸರು ಇಡುವ ಹಕ್ಕು ಇರುವುದು ಯಾರಿಗೆ? ಒಂದು ಪ್ರದೇಶಕ್ಕೆ ಹೆಸರು ಇಡುವುದು ಕೇವಲ ಭೌಗೋಳಿಕ ವಿಚಾರವಲ್ಲ. ಅದು ಅಧಿಕಾರದ ವಿಚಾರ. “Middle East” ಎಂಬ ಪದದಿಂದ ನಮಗೆ, ಜಗತ್ತಿನ ನಕ್ಷೆ ಕೇವಲ ಭೂಗೋಳದಿಂದ ಮಾತ್ರ ಅಲ್ಲ, ಅಧಿಕಾರದಿಂದಲೂ ರೂಪುಗೊಳ್ಳುತ್ತದೆ ಎಂದು ಗೊತ್ತಾಗುತ್ತದೆ. ಗಲ್ಫ್ ಯುದ್ಧದಂತಹ ಸಂಘರ್ಷಗಳನ್ನು ನೋಡುತ್ತಿರುವಾಗ, ಈ ಪದದ ಹಿಂದೆ ಇರುವ ಇತಿಹಾಸವನ್ನು ಅರಿತುಕೊಳ್ಳುವುದು ಮುಖ್ಯ.

ಹೀಗಾಗಿ “ಮಿಡಲ್ ಈಸ್ಟ್” ಎಂಬುದು ದಿಕ್ಕುದೆಸೆಯಿಂದ ಹುಟ್ಟಿದ್ದಲ್ಲ, ಅದು ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲಿ ಹುಟ್ಟಿದ ರಾಜಕೀಯ ಪದ. ಯೂರೋಪ್‌ನ್ನು ಕೇಂದ್ರವಾಗಿ ನೋಡಿದಾಗ ಮಾತ್ರ ಅದು “ಮಧ್ಯ”.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ: ಸಿಕ್ತು 29 ಲಕ್ಷ ರೂ ವಧುದಕ್ಷಿಣೆ
Phone Tapping: ದೇವರಾಣೆ ಮಾಡಿ, ಡಿಕೆಶಿ ಫೋನ್ ಟ್ಯಾಪ್ ಮಾಡಿಲ್ಲವ? ಸಿಎಂಗೆ ಚಲವಾದಿ ಸವಾಲು, ಕಲಬುರಗಿ ಪ್ರಬುದ್ಧರ ಮೇಲೂ ವಾಗ್ದಾಳಿ!