
ನಿನ್ನೆ ದಿವಂಗತರಾದ ಕನ್ನಡದ ಹೆಮ್ಮೆಯ ಕಾದಂಬರಿಕಾರರಾದ ಎಸ್ ಎಲ್ ಭೈರಪ್ಪ ಅವರು ಕನ್ನಡ ಸಾಹಿತಿಗಳಲ್ಲೆಲ್ಲ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದವರೂ ಹೌದು. ಪ್ರಾಧ್ಯಾಪಕ ವೃತ್ತಿಯಿಂದ ಬಹಳ ಹಿಂದೆಯೇ ಅವರು ನಿವೃತ್ತರಾಗಿದ್ದರೂ, ಯಾವುದೇ ವೃತ್ತಿಪರ ಬರಹಗಾರ, ಕತೆಗಾರ, ಕಾದಂಬರಿಕಾರರಿಗಿಂತ ಹೆಚ್ಚಿನ ಗೌರವಧನ ಅವರಿಗೆ ಪ್ರತಿ ತಿಂಗಳು ಸಂದಾಯವಾಗುತ್ತಿತ್ತು. ಅದು ಲಕ್ಷಗಳ ಲೆಕ್ಕದಲ್ಲಿತ್ತು. ಕನ್ನಡದ ಇತರ ಕಾದಂಬರಿಕಾರರು ಇದನ್ನು ಊಹಿಸಲೂ ಸಾಧ್ಯವಿಲ್ಲ ಬಿಡಿ. ಇದರ ಹಿಂದೆ ಅವರ ಅಂತಾರಾಷ್ಟ್ರೀಯ ಜನಪ್ರಿಯತೆ- ಅನುವಾದ ಎಲ್ಲವೂ ಸೇರಿದ್ದವು.
ಭೈರಪ್ಪನವರು 24 ಕಾದಂಬರಿಗಳನ್ನು ಬರೆದಿದ್ದರು. ಆರಂಂಭದ ಗತಜನ್ಮ, ಭೀಮಕಾಯ ಕೃತಿಗಳು ಅಷ್ಟೇನೂ ಗಳಿಕೆ ತಂದುಕೊಡಲಿಲ್ಲ. ನಂತರದ ಕೃತಿ ಧರ್ಮಶ್ರೀ ಜನಪ್ರಿಯತೆ ಗಳಿಸಿತು. ಬಳಿಕ ದೂರ ಸರಿದರು, ಮತದಾನ, ವಂಶವೃಕ್ಷ ಮೊದಲಾದ ಕೃತಿಗಳೆಲ್ಲವೂ ಒಂದೊಂದಾಗಿ ಬಂದವು. ಅವರ ಜನಪ್ರಿಯತೆ ಹೆಚ್ಚಿತು. ಅವೆಲ್ಲವೂ ಹತ್ತಕ್ಕಿಂತಲೂ ಹೆಚ್ಚು ಮರುಮುದ್ರಣಗಳನ್ನು ಕಂಡವು. ಒಂದೊಂದು ಪ್ರಿಂಟ್‌ನಲ್ಲೂ ಹತ್ತಾರು ಸಾವಿರ ಕಾಪಿ ಅಚ್ಚು ಹಾಕಿಸಲಾಗುತ್ತಿತ್ತು. ಹೀಗಾಗಿ ಸಾಕಷ್ಟು ಸಂಭಾವನೆ, ಗೌರವಧನ ಅವುಗಳಿಂದ ಬಂತು.
ಅವರ ಪರ್ವ ಕಾದಂಬರಿ 36 ಮರುಮುದ್ರಣ ಕಂಡಿದೆ. ನಿರಾಕರಣ 25 ಸಲ, ಮಂದ್ರ 21 ಸಲ, ಆವರಣ 31 ಸಲ ಮರುಮುದ್ರಣ ಕಂಡಿದೆ. ಅವರ ಯಾವುದೇ ಕೃತಿಯೂ ಹತ್ತಕ್ಕಿಂತ ಕಡಿಮೆ ಮುದ್ರಣ ಕಂಡೇ ಇಲ್ಲ. ಎಲ್ಲ ಲೆಕ್ಕ ಹಾಕಿದರೆ ಅವರ ಎಲ್ಲ ಕೃತಿಗಳು 500 ಮರುಮುದ್ರಣ ಕಂಡಿವೆ ಎಂಬ ಅಂದಾಜು ಇದೆ. ಅಂದರೆ ಅವರಿಗೆ ಇಷ್ಟು ಸಲ ಸಂಭಾವನೆ ಬಂದಿತ್ತು. ಒಮ್ಮೆ ಬರೆದ ಕಾದಂಬರಿ ಮರುಮುದ್ರಣ ಕಂಡಿತೆಂದರೆ ಲೇಖಕನಿಗೆ ಲಾಟರಿ ಹೊಡೆಯಿತೆಂದೇ ಲೆಕ್ಕ. ಯಾಕೆಂದರೆ ಮೊದಲ ಮುದ್ರಣಕ್ಕೆ ಸಿಕ್ಕ ಸಂಭಾವನೆಯೇ ನಂತರದ ಮುದ್ರಣಗಳಿಗೂ ಸಿಗುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಹೊಸ ಲೇಖಕರಿಗೆ ಕೃತಿಯ ಮುಖಬೆಲೆಯ 10 ಶೇಕಡ ಹಣ ಸಂಭಾವನೆಯಾಗಿ ದೊರೆಯುತ್ತದೆ. ಆ ಲೆಕ್ಕದ ಪ್ರಕಾರ ಭೈರಪ್ಪನವರು ಪಡೆದ ಹಣ ಕೋಟಿಗಳ ಲೆಕ್ಕದಲ್ಲಿದೆ.
ಭೈರಪ್ಪನವರ ಬಹುತೇಕ ಎಲ್ಲ ಕೃತಿಗಳೂ ಇತರ ಭಾಷೆಗಳಿಗೆ ಅನುವಾದವಾಗಿವೆ. ಕನ್ನಡದಂತೆಯೇ ಮರಾಠಿ ಹಾಗೂ ಹಿಂದಿಯಲ್ಲೂ ಅವರು ಬೆಸ್ಟ್ ಸೆಲ್ಲರ್. ಎಲ್ಲ ಕಾದಂಬರಿಗಳೂ ಭಾರತದ ಹೆಚ್ಚಿನ ಭಾಷೆಗಳಿಗೆ ಹಾಗೂ 6 ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದ ಆಗಿವೆ. ಅನುವಾದದ ಹಕ್ಕುಗಳಿಂದ ಅವರಿಗೆ ಹಣ ಬಂದಿತ್ತು.
ಜೊತೆಗೆ ಅವರಿಗೆ ಪ್ರಶಸ್ತಿ ಪುರಸ್ಕಾರಗಳಿಂದ ಸಾಕಷ್ಟು ಹಣ ಬಂದಿತ್ತು. ಕೇಂದ್ರ ಸರ್ಕಾರದ ಪದ್ಮಗೌರವಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ಎರಡೂ ಪ್ರಶಸ್ತಿಗಳನ್ನು ಪಡೆದ ಕನ್ನಡದ ಕೆಲವೇ ಬರಹಗಾರರಲ್ಲಿ ಭೈರಪ್ಪ ಒಬ್ಬರು. ಬಿರ್ಲಾ ಫೌಂಡೇಶನ್ ನೀಡುವ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಅವರು ಸ್ವೀಕರಿಸಿದ್ದಾರೆ. ಇದು ಭಾರತದಲ್ಲೇ ಅತಿ ಹೆಚ್ಚಿನ ನಗದು ಮೊತ್ತ ನೀಡುವ (15 ಲಕ್ಷ ರೂ.) ಪ್ರಶಸ್ತಿ.
ಇನ್ನು ಅವರ ಕೃತಿಗಳು ಸಿನಿಮಾ ಹಾಗೂ ಸೀರಿಯಲ್ ಕೂಡ ಆಗಿವೆ. ಅವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂತು. ವಂಶವೃಕ್ಷ ಸಿನಿಮಾ ತೆಲುಗಿನಲ್ಲಿ ಅನಿಲ್ ಕಪೂರ್ ನಟನೆಯಲ್ಲಿ ರಿಮೇಕ್ ಆಗಿದೆ. ʼದಾಟುʼ ಹಿಂದಿಯಲ್ಲಿ ಟಿವಿ ಧಾರಾವಾಹಿಯಾಗಿದೆ. ಇವೆಲ್ಲವುಗಳಿಂದಲೂ ಅವರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ದೊರೆತಿದೆ.
ಹಾಗಾದರೆ ಈ ಹಣವನ್ನೆಲ್ಲ ಅವರು ಏನು ಮಾಡಿದರು? ವೈಯಕ್ತಿಕ ಕಾರಣಗಳಿಗೆ ಅವರು ಇದನ್ನು ಬಳಸಿಕೊಂಡದ್ದು ಅತ್ಯಲ್ಪ. ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಕೊನೆಗಾಲದಲ್ಲಿ ಅವರು ಈ ಹಣದ ವಿಲೇವಾರಿಗೆ ಒಂದು ಟ್ರಸ್ಟ್ ರಚಿಸಿದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹುಡುಕಿ, ಅವರ ಶಿಕ್ಷಣಕ್ಕೆ ನೆರವಾಗುವುದು ಈ ಟ್ರಸ್ಟ್‌ನ ಉದ್ದೇಶ. ತಾವು ಬಾಲ್ಯದಲ್ಲಿ ಕಂಡು ಉಂಡು ನೊಂದ ಬಡತನದ ಅನುಭವ ಇತರ ಪ್ರತಿಭಾವಂತ ಮಕ್ಕಳಿಗೆ ಆಗದಿರಲಿ ಎಂಬ ಆಶಯದಿಂದ ಅವರು ಇದನ್ನು ಮಾಡಿದ್ದರು. ಈ ಟ್ರಸ್ಟ್‌ನಲ್ಲಿ ಒಂದಷ್ಟು ಕೋಟಿ ಹಣವಿದ್ದು, ಅದರಿಂದ ಬಂದ ಬಡ್ಡಿಯಿಂದ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.