ಇನ್ನು ಆಷಾಢ ಮಾಸ ಆರಂಭವಾಗುವ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಸುದ್ದಿಯೊಂದು ಹೊರ ಬಿದ್ದಿದ್ದು, ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಮತ್ತಷ್ಟು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು (ಜೂ.1): ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಯಾದ ಮಾರನೇ ದಿನದಿಂದಲೇ ಪತನಗೊಳ್ಳುವ ಊಹಾಪೋಹಗಳೂ ಕೇಳಿ ಬರುತ್ತಿದ್ದು, ಇದೀಗ ಸಮ್ಮಿಶ್ರ ಸರಕಾರದ ಮೊದಲ ವಿಕೆಟ್ ಪತನಗೊಳ್ಳುವ ಮೂಲಕ ಸರಕಾರ ಉರುಳುವ ಸಾಧ್ಯತೆಗಳು ನಿಚ್ಚಳವಾಗಿದೆ.
ಹೊಸಪೇಟೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರ ಇಂದಿರಾ ನಗರ ಮನೆಗೇ ತೆರಳಿ ಸಲ್ಲಿಸಿದ್ದಾರೆ. ಆ ಮೂಲಕ ಸರಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ.
ರಾಜ್ಯ ರಾಜಕೀಯದಲ್ಲಿ ಈ ಸ್ಫೋಟಕ ಸುದ್ದಿಯನ್ನು ಸುವರ್ಣನ್ಯೂಸ್.ಕಾಂ ಬ್ರೇಕ್ ಮಾಡುತ್ತಿದೆ. ಅಮೆರಿಕದಲ್ಲಿರರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಲಭೈರವೇಶ್ವರ ದೇವಸ್ಥಾನಕ್ಕೆ ಶಂಕು ಸ್ಥಾಪನೆ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆನಂದ್ ಸಿಂಗ್ ಬಿಜೆಪಿಗೆ ಮರಳುವ ಸಾಧ್ಯತೆ ಇದ್ದು, ಬಿಜೆಪಿ ಸರಕಾರ ಬರುತ್ತಾ ಎಂಬುದನ್ನು ಕಾದು ನೋಡಬೇಕು.
ಜೂನ್ 30ರ ರಾತ್ರಿಯೇ ಕಾಂಗ್ರೆಸ್ ಅತೃಪ್ತ ಶಾಸಕರು ಸಭೆ ನಡೆಸಿದ್ದು, ರಾಜೀನಾಮೆ ನೀಡುವ ಸಂಬಂಧ ಚರ್ಚಿಸಿದ್ದಾರೆ. ಕೊಟ್ಟ ಮಾತಿನಂತೆ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ಬೆಳ್ಳಂ ಬೆಳಗ್ಗೆಯೇ ರಾಜೀನಾಮೆ ಸಲ್ಲಿಸಿದ್ದು, ಉಳಿದ ಎಂಟು ಶಾಸಕರ ಯಾವಾಗ ರಾಜೀನಾಮೆ ನೀಡುತ್ತಾರೆಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿಯಿಲ್ಲ. ಈ ರಹಸ್ಯ ಸಭೆಯಲ್ಲಿ ಒಟ್ಟು ಒಂಬತ್ತು ಶಾಸಕರು ಪಾಲ್ಗೊಂಡಿದ್ದರೆಂದು ಸುವರ್ಣನ್ಯೂಸ್‌ಗೆ ಮಾಹಿತಿ ಸಿಕ್ಕಿದೆ.
ಮುಖ್ಯಮಂತ್ರಿ ಎಚ್.ಡಿ.ಕುವಾರಸ್ವಾಮಿ ಅತ್ತ ಅಮೆರಿಕಕ್ಕೆ ತೆರಳುತ್ತಿದ್ದಂತೆ, ಇತ್ತ ಅತೃಪ್ತ ಶಾಸಕರ ಚಟುವಟಿಕೆಗಳು ಹೆಚ್ಚಾಗಿದ್ದು ರಹಸ್ಯ ಸಭೆ ನಡೆಸಲಾಗಿದೆ. ಇನ್ನೂ 20 ಶಾಸಕರ ರಾಜೀನಾಮೆ ನೀಡುತ್ತಾರೆಂದು ಹೇಳಲಾಗುತ್ತಿದ್ದು, ಆಷಾಢದ ಮೊದಲ ದಿನದಿಂದಲೇ ಆಪರೇಷನ್ ಪರ್ವ ಆರಂಭವಾದಂತಾಗಿದೆ.