ಕಬ್ಬನ್ ಪಾರ್ಕ್ ಕರಗದಕುಂಟೆ ಅಕ್ಕಪಕ್ಕ ಮತ್ತು ಟೆನಿಸ್ ಕೋರ್ಟ್ ಪಕ್ಕದಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸುತ್ತಿದ್ದು, ಚಿಟ್ಟೆಗಳನ್ನು ಆಕರ್ಷಣೆ ಮಾಡುವಂತಹ ಮೂರು ಸಾವಿರ ಜಾತಿಯ ಗಿಡಗಳನ್ನು ಗುರುತಿಸಲಾಗಿದೆ.
ಬೆಂಗಳೂರು (ಸೆ. 24): ಕಬ್ಬನ್ ಉದ್ಯಾನವನದಲ್ಲಿ ಪ್ರಾರಂಭವಾಗಲಿರುವ ಉದ್ದೇಶಿತ ಚಿಟ್ಟೆ ಪಾರ್ಕ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಸದಸ್ಯರು ಚಿಟ್ಟೆಗಳು ಹಾಗೂ ಜೇನು ನೊಣಗಳನ್ನು ಆಕರ್ಷಿಸುವ ಗಿಡಗಳನ್ನು ನೆಟ್ಟರು.
ಉದ್ಯಾನದ ಕರಗದಕುಂಟೆ ಅಕ್ಕಪಕ್ಕ ಮತ್ತು ಟೆನಿಸ್ ಕೋರ್ಟ್ ಪಕ್ಕದಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸುತ್ತಿದ್ದು, ಚಿಟ್ಟೆಗಳನ್ನು ಆಕರ್ಷಣೆ ಮಾಡುವಂತಹ ಮೂರು ಸಾವಿರ ಜಾತಿಯ ಗಿಡಗಳನ್ನು ಗುರುತಿಸಲಾಗಿದೆ. ಈಗಾಗಲೇ ಬಿಳಿಗಿರಿ ರಂಗನ ಬೆಟ್ಟ, ಪಶ್ಚಿಮ ಘಟ್ಟಗಳು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿರುವ ವಿವಿಧ ಜಾತಿಯ ಎರಡು ಸಾವಿರ ಜಾತಿಯ ಗಿಡಗಳನ್ನು ತರಿಸಿಕೊಳ್ಳಲಾಗಿದೆ.
ಸೋಮವಾರ ಸುಮಾರು 300 ಗಿಡಗಳನ್ನು ನೆಟ್ಟಿದ್ದು, ಮುಂದಿನ ಒಂದು ವಾರದ ಕಾಲ ಗಿಡ ನಡುವೆ ಕಾರ್ಯಕ್ರಮ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳಿದರು. ಚಿಟ್ಟೆ ಉದ್ಯಾನದ ಪಕ್ಕದಲ್ಲಿಯೇ ಪವಿತ್ರ ವನ ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ದೇವರು, ಆಧ್ಯಾತ್ಮಿಕ ಕಾರ್ಯಗಳಿಗೆ ಹೆಚ್ಚಾಗಿ ಬಳಕೆ ಆಗುವ ಕದಿರಾ, ಬ್ರಹ್ಮವೃಕ್ಷ, ಈಶ್ವರ ಬಳ್ಳಿ, ನಾಡಿಬಟ್ಟಲು, ಸೌಗಂಧಿಕಾ, ಬನ್ನಿ, ಅತ್ತಿಮರ, ಬಿಲ್ವ ಪತ್ರೆ, ಅಶ್ವತ್ಥ ಮರ, ನಾಗಸಂಪಿಗೆ, ನಾಗ ಲಿಂಗ ಪುಷ್ಪ, ಸೀತಾ ಅಶೋಕ ಗಿಡಗಳನ್ನು ಬೆಳೆಸಲಾಗುತ್ತಿದ್ದು, ಗಿಡಗಳನ್ನು ತರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂಐಕ್ಯೂ ಮತ್ತು ಇಂಡಸ್ ಹರ್ಬಲ್ ಎಂಬ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚಿಟ್ಟೆ ಉದ್ಯಾನವ ನಿರ್ಮಾಣ ಮಾಡಲಾಗುತ್ತಿದೆ. ಚಿಟ್ಟೆ ಉದ್ಯಾನವನಕ್ಕೆ ಆಗುವ ವೆಚ್ಚವನ್ನು ಈ ಸಂಸ್ಥೆಗಳು ಭರಿಸುತ್ತಿದ್ದು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡಲಿದೆ. ಮುಂದಿನ ಒಂದು ವಾರದಲ್ಲಿ ಎಲ್ಲ ರೀತಿಯ ಗಿಡಗಳನ್ನು ನೆಡುವ ಕಾರ್ಯ ಪೂರ್ಣಗೊಳ್ಳಲಿದ್ದು, ಒಂದು ವರ್ಷದಲ್ಲಿ ಉದ್ಯಾನ ಸಂಪೂರ್ಣವಾಗಿ ಚಿಟ್ಟೆಗಳು ಆಗಮಿಸಲಿದ್ದು, ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಜಿ. ಕುಸುಮಾ ವಿವರಿಸಿದರು.