ಹಾರ್ಮೋನನ್ನು ಇಂಜೆಕ್ಷನ್ ಮೂಲಕ ಸ್ವೀಕರಿಸಿ ಸೆಕ್ಸ್'ಅನ್ನು ಜೀವಂತವಾಗಿರಿಸುತ್ತಾರೆಯೇ?

By Internet DeskFirst Published Sep 26, 2016, 1:40 PM IST
Highlights

 

1.ಅಮೆರಿಕದಲ್ಲಿ ವಯಸ್ಸಾದ ಸ್ತ್ರೀಯರು ಋತುಚಕ್ರ ನಿಲ್ಲುವ ಸಮಯ ಬಂದಾಗ ಸ್ತ್ರೀ ಹಾರ್ಮೋನುಗಳನ್ನೂ, ವಯಸ್ಸಾದ ಪುರುಷರು ತಮ್ಮ ಸೆಕ್ಸ್ ಸಾಮರ್ಥ್ಯ ಕುಂದಿದಾಗ ಪುರುಷ ಹಾರ್ಮೋನುಗಳನ್ನು ಇಂಜೆಕ್ಷನ್ ಮೂಲಕ ಸ್ವೀಕರಿಸುತ್ತಾರೆ. ಈ ಮೂಲಕ ಸೆಕ್ಸ್ ಅನ್ನು ಜೀವಂತವಾಗಿಟ್ಟಿರುತ್ತಾರಂತೆ, ನಿಜವೇ? ಇದು ನಮ್ಮ ದೇಶದಲ್ಲೂ ಇದೆಯೇ?

- ಎಸ್‌ಎಎಸ್, ಹರಿಹರ

ಇದನ್ನು ಹಾರ್ಮೋನ್ ಪೂರೈಕೆ ಚಿಕಿತ್ಸೆ (Hormone replacement treatment) ಎನ್ನುತ್ತಾರೆ. ಇದು ಇಲ್ಲಿಯೂ ಇದೆ. ಆದರೆ, ಇದರ ಅವಶ್ಯಕತೆಯಿದ್ದರೆ ಸೀರೋಗ ತಜ್ಞ/ ಹಾರ್ಮೋನ್ ತಜ್ಞರ ನೇತೃತ್ವದಲ್ಲಷ್ಟೇ ತೆಗೆದುಕೊಳ್ಳಬೇಕು. ಸೀಯರಲ್ಲಿ ಈಸ್ಟ್ರೋಜೆನ್‌ಗಳು ಕಡಿಮೆಯಾದರೆ ಲೈಂಗಿಕ ಆಸಕ್ತಿಯೂ ಕುಗ್ಗಿ, ಯೋನಿಯು ಒಣಗಿ ಸಂಭೋಗದಲ್ಲಿ ನೋವಾಗಬಹುದು. ಪುರುಷರಲ್ಲಿ ಟೆಸ್ಟೋಸ್ಟಿರಾನ್ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕುಗ್ಗಿ, ನಿಮಿರುವಿಕೆ ಕಷ್ಟವಾಗಬಹುದು. ಇವು ಬಹಳವಾದರಷ್ಟೇ ಈ ಚಿಕಿತ್ಸೆ ಬೇಕಾಗುತ್ತದೆ. ಸಹಜವಾಗಿಯೇ ಸೋಯಾಬೀನ್ಸ್, ತಾಜಾ ಹಣ್ಣುಗಳು ಹಾಗೂ ಹಸಿರು ತರಕಾರಿಗಳಲ್ಲಿ ಈಸ್ಟ್ರೋಜೆನ್‌ಗಳೂ, ಹಸಿರು ತರಕಾರಿಗಳು ಹಾಗೂ ಉದ್ದಿನಬೇಳೆಯಲ್ಲಿ ಟೆಸ್ಟೋಸ್ಟಿರಾನೂ ದೊರೆಯುವುದೆಂದು ಹೇಳಲಾಗಿದೆ. ಇವುಗಳನ್ನು ಸೇವಿಸುವುದರಿಂದಲೂ ಯೋಗ, ವ್ಯಾಯಾಮ, ಲವಲವಿಕೆಯ ಜೀವನ ಹಾಗೂ ರತಿಮುನ್ನಲಿವಿನಾಟಗಳಿಂದ ಚಿಕಿತ್ಸೆಯಿಲ್ಲದೆಯೂ ಲೈಂಗಿಕ ಜೀವನವನ್ನು ಹಸನಾಗಿಸಿಕೊಳ್ಳಬಹುದು.

2. ನಾನು 47 ವರ್ಷದ ಅವಿವಾಹಿತ. ಕೌಟುಂಬಿಕ ಕಾರಣಕ್ಕಾಗಿ ಮದುವೆ ಆಗಿಲ್ಲ. ಮದುವೆಯಾಗದ ವ್ಯಕ್ತಿಗಳ ಆಯುಸ್ಸು ಕಡಿಮೆ ಇರುತ್ತದೆಂದು ಎಲ್ಲೋ ಓದಿದ ನೆನಪು. ಮದುವೆಗೂ ನಮ್ಮ ಜೀವಿತಾವಗೂ ಸಂಬಂಧವಿದೆಯೇ?

- ಸಂಜೀವ ಪಾಟೀಲ, ಅಥಣಿ

ಅವಿವಾಹಿತರಿಗೆ ಆಯುಸ್ಸು ಕಡಿಮೆಯಾಗುತ್ತದೆ ಅಂತೇನೂ ಇಲ್ಲ. ಅನೇಕ ಅವಿವಾಹಿತರು ದೀರ್ಘಾಯುಷಿಗಳಾಗಿರುವುದಿದೆ. ಆದರೆ ಇದರಿಂದ ಒಂಟಿತನ, ಖಿನ್ನತೆ, ಜುಗುಪ್ಸೆಗಳು ಕಾಡಬಾರದಷ್ಟೇ. ಜೀವನವನ್ನೂ, ಜಗತ್ತನ್ನೂ ಚೆನ್ನಾಗಿ ಪ್ರೀತಿಸುವುದನ್ನು ಕಲಿತು ಸದಾ ಕ್ರಿಯಾಶೀಲರಾಗಿರಬೇಕು. ಅವಿವಾಹಿತರಾದ ಮಾತ್ರಕ್ಕೆ ಲೈಂಗಿಕ ಬಯಕೆಗಳು, ಆಸಕ್ತಿಗಳು ಇರಬಾರದು ಅಥವಾ ಇರುವುದೆಂದೇನೂ ಇಲ್ಲ. ಇವನ್ನು ಬಲವಂತವಾಗಿ ತಡೆಯಬಾರದಷ್ಟೇ. ಆಯುರ್ವೇದವೂ ಹಾಗೆಯೇ ಹೇಳುತ್ತದೆ. ಲೈಂಗಿಕ ಬಯಕೆಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಕಡೆ ತಿರುಗಿಸಬೇಕು ಹಾಗೂ ಇವುಗಳ ಕಡೆ ಸಕಾರಾತ್ಮಕ ಭಾವನೆಯಿರಬೇಕು. ಪ್ರೀತಿ, ಪ್ರೇಮ ಸಂಬಂತ ಕಥೆ, ಕವನ, ಸಿನಿಮಾ ಮೊದಲಾದವುಗಳಿಂದ ಇವನ್ನು ತಣಿಸಿಕೊಳ್ಳಬೇಕು. ಹಸ್ತಮೈಥುನವೂ ಸಹಾಯಕಾರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಅಥವಾ ಈ ರೀತಿಗಳಲ್ಲಿ ಅವು ಸಹಜವಾಗಿ ಕಡಿಮೆಯಾದರೆ ತಪ್ಪೇನಿಲ್ಲ. ಆದರೆ ಬಲವಂತವಾಗಿ ತಡೆದರೆ, ಏಕಾಗ್ರತೆ ಭಂಗ, ಖಿನ್ನತೆ ಮೊದಲಾದ ತೊಂದರೆಗಳಾಗುತ್ತವೆ.

ಸುಖಿ ಕ್ಲಿನಿಕ್ (ಕನ್ನಡ ಪ್ರಭ)

click me!