ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ...?

By Suvarna Web DeskFirst Published Jun 25, 2017, 10:39 PM IST
Highlights

ಶೋಭಾ ಹಾಗೂ ಕೃಷ್ಣ ಇಬ್ಬರೂ ಕೂಡ ನಂಜನಗೂಡು ತಾಲೂಕಿನ ಯಡಿಯಾಲ ಸಮೀಪ ಪಾರ್ವತಿಪುರ ಗ್ರಾಮದವರು. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇದಕ್ಕೆ ಅಡ್ಡಿ ಮಾಡಿದ ತಂದೆ ಗುರುಸಿದ್ದೇಗೌಡ ಮಗಳನ್ನ ಅಪಹರಿಸಿ ಹತ್ಯೆ ಮಾಡಿದ್ದಾರೆಂದು ಆಕೆಯನ್ನ ಪ್ರೀತಿಸುತ್ತಿದ್ದ ಕೃಷ್ಣ ಎಂಬ ಯುವಕ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಳೆದ ವರ್ಷವಷ್ಟೇ ಮೈಸೂರು ಜಿಲ್ಲೆಯ ಚಂದ್ರವಾಡಿ ಗ್ರಾಮದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ನೆನಪಿರುವಾಗಲೇ ಅದೇ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಇಷ್ಟವಿಲ್ಲದ ಯುವಕನನ್ನ ಪ್ರೀತಿಸಿದ್ದಕ್ಕಾಗಿ ಹೆತ್ತ ಮಗಳನ್ನೇ ಪೋಷಕರು ಬಲಿ ತೆಗೆದುಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

ಶೋಭಾ ಹಾಗೂ ಕೃಷ್ಣ ಇಬ್ಬರೂ ಕೂಡ ನಂಜನಗೂಡು ತಾಲೂಕಿನ ಯಡಿಯಾಲ ಸಮೀಪ ಪಾರ್ವತಿಪುರ ಗ್ರಾಮದವರು. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇದಕ್ಕೆ ಅಡ್ಡಿ ಮಾಡಿದ ತಂದೆ ಗುರುಸಿದ್ದೇಗೌಡ ಮಗಳನ್ನ ಅಪಹರಿಸಿ ಹತ್ಯೆ ಮಾಡಿದ್ದಾರೆಂದು ಆಕೆಯನ್ನ ಪ್ರೀತಿಸುತ್ತಿದ್ದ ಕೃಷ್ಣ ಎಂಬ ಯುವಕ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಪ್ರಕರಣದ ಬೆನ್ನತ್ತಿರುವ ಪೊಲೀಸರು ಈಗ ಶೋಭಾಳ ಚಿಕ್ಕಪ್ಪ ರಾಮು, ಸಹೋದರ ಕಿರಣ್​ ಹಾಗೂ ಚಿಕ್ಕಪ್ಪನ ಮಗನನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದ ಶೋಭಾಳ ತಂದೆ ಗುರುಸಿದ್ದೇಗೌಡ ತಲೆಮರೆಸಿಕೊಂಡಿದ್ದಾರೆ.

ಶೋಭಾ ಹಾಗೂ ಕೃಷ್ಣ ಇಬ್ಬರೂ ಬೇರೆ ಜಾತಿಯವರು ಅನ್ನೋದೇ ಪೋಷಕರ ವಿರೋಧಕ್ಕೆ ಕಾರಣವಾಗಿದೆ. ಮೂರು ತಿಂಗಳ ಹಿಂದೆ ಕೃಷ್ಣ ಹಾಗೂ ಶೋಭಾ ಓಡಿಹೋಗಿ ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಅದೇ ರೀತಿ ರಾತ್ರಿ ವೇಳೆ ತಾಲೂಕಿನ ಮುಳ್ಳೂರು ಗೇಟ್​ ಬಳಿ ಇಬ್ಬರೂ ಭೇಟಿಯಾಗಿ ಹೊರಡುವಷ್ಟರಲ್ಲಿ ಅಡ್ಡಗಟ್ಟಿದ ಶೋಭಾ ತಂದೆ ಗುರುಸಿದ್ದೇಗೌಡ, ಜೊತೆಗಿದ್ದ ನಾಲ್ವರು ದಾಂಡಿಗರು ಕೃಷ್ಣನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ, ಶೋಭಾಳನ್ನ ಕರೆದೊಯ್ದಿದ್ದರು. ಆನಂತರ ಶೋಭಾ ಕಣ್ಮರೆಯಾಗಿದ್ದಾಳೆ. ತಂದೆ ಮನೆಯಲ್ಲೂ ಇಲ್ಲ, ಸಂಬಂಧಿಕರ ಮನೆಯಲ್ಲೂ ಇಲ್ಲ. ಆಕೆಯನ್ನ ಹೆತ್ತವರೇ ಕೊಂದು ಸುಟ್ಟು ಹಾಕಿದ್ದಾರೆಂದು ಗ್ರಾಮದ ತುಂಬಾ ಗುಲ್ಲಾಗಿದೆ ಅಂತಾ ಕೃಷ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಮಚ್ಚು ಹಿಡಿದುಕೊಂಡು ಓಡಾಡುತ್ತಿದ್ದ ಯುವತಿ ತಂದೆ

ಗ್ರಾಮದಲ್ಲಿ ಶೋಭಾ ತಂದೆ ಕಂಡರೆ ಯಾರಿಗೂ ಆಗುವುದಿಲ್ಲ. ಜೊತೆಯಲ್ಲಿ ಯಾವಾಗಲೂ ಮಚ್ಚು ಹಿಡಿದುಕೊಂಡೇ ಓಡಾಡುತ್ತಿದ್ದ ಕಾರಣಕ್ಕೆ ಮಚ್ಚು ಗುರುಸಿದ್ದೇಗೌಡ ಅಂತಾನೇ ಗ್ರಾಮಸ್ಥರು ಕರೆಯುತ್ತಾರೆ. ಮಚ್ಚು ತೋರಿಸಿ ಗ್ರಾಮದವರನ್ನು ಹೆದರಿಸುತ್ತಿದ್ದರಿಂದ ಯಾರೂ ಕೂಡ ಇವರ ಕುಟುಂಬದಲ್ಲಿ ಏನು ನಡೆಯಿತು ಅನ್ನುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಕೇಳಿದರೆ ನಮಗೇನು ಗೊತ್ತೇ ಅಲ್ಲ ಎನ್ನುತ್ತಾರೆ. ಕೆಲವರು ಮಾತನಾಡಲು ಮುಂದಾದರೆ ಅವರ ಸುದ್ದಿ ನಿಮಗ್ಯಾಕೆ ಎಂದು ಸುಮ್ಮನಿಸಿರುತ್ತಾರೆ.

ಮೂರು ತಿಂಗಳಿಂದ ನಾಪತ್ತೆಯಾಗಿರುವ ಶೋಭಾ ಬದುಕಿದ್ದಾಳಾ ಅಥವಾ ಹೆತ್ತವರೇ ಆಕೆಯನ್ನ ಕೊಲೆ ಮಾಡಿದ್ದಾರಾ ಅನ್ನೋದನ್ನ ಪೊಲೀಸರ ತನಿಖೆ ಬಯಲು ಮಾಡಬೇಕಾಗಿದೆ. ಆದರೆ ಮಗಳ ವಿಷಯದಲ್ಲಿ ಪೊಲೀಸ್​ ಠಾಣೆಗೆ ದೂರು ದಾಖಲಾಗುತ್ತಿದ್ದಂತೆ ಶೋಭಾ ತಂದೆ ಕಣ್ಮರೆಯಾಗಿರುವುದು ಮರ್ಯಾದಾ ಹತ್ಯೆ ನಡೆದಿದೆ ಅನ್ನೋದಕ್ಕೆ ಪುಷ್ಠಿ ಕೊಡುತ್ತಿದೆ.

ವರದಿ: ಮಧು ಚಿನಕುರಳಿ, ಸುವರ್ಣ ನ್ಯೂಸ್

click me!