ನಿಮಗೆ ಕೊಡಗಿನತ್ತ ಹೋಗುವ ಪ್ಲಾನ್ ಇದ್ಯಾ..? ಹಾಗಾದ್ರೆ ನೀವು ಈ ಸುದ್ದಿಯನ್ನೊಮ್ಮೆ ಗಮನಿಸಲೇಬೇಕು.
ಕೊಡಗು : ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಕೊಡಗು ಜಿಲ್ಲೆಗೆ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಹೋಂ ಸ್ಟೇ ಬುಕಿಂಗ್ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ.
ಕಳೆದ ಬಾರಿ ಭಾರಿ ಮಳೆಯಿಂದ ತೀವ್ರ ಹಾನಿ ಎದುರಿಸಿದ್ದ ಮಡಿಕೇರಿ ತಾಲೂಕಿನ ಮಕ್ಕಂದೂರಿನಲ್ಲಿ ಈ ಬಾರಿ ಮುಂಚಿತವಾಗಿ ಹೋಂ ಸ್ಟೇ ಗಳನ್ನು ಬಂದ್ ಮಾಡುವಂತೆ ಇಲ್ಲಿನ ಪಿಡಿಒ ಆದೇಶಿಸಿದ್ದಾರೆ.
ಕೊಡಗಿನ ಬಗ್ಗೆ ಎಚ್ಚರ ವಹಿಸಲು ಸಿಎಂ ಸೂಚನೆ
ಈ ಬಾರಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗಬಾರದೆಂದು ಸೂಚನೆ ನೀಡಿದ್ದು, ಆದೇಶ ಮೀರಿ ಬುಕಿಂಗ್ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಿಡಿಒ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಯಾವುದೇ ರೀತಿ ಅನಾಹುತ ಸಂಭವಿಸಿದಲ್ಲಿ ಹೋಮ್ಸ್ ಸ್ಟೇ ಮಾಲಿಕರೇ ಹೊಣೆಯಾಗಿರುತ್ತಾರೆ. ಈ ವರ್ಷವೂ ಕೂಡ ರಸ್ತೆ ಕುಸಿತವಾಗುವ ಸಂಭವ ಇದ್ದು, ಹಾಗೆಂದು ಭೂ ವಿಜ್ಞಾನ ಇಲಾಖೆ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ಹೋಂ ಸ್ಟೇ ಬುಕಿಂಗ್ ಮಾಡದಂತೆ ಸೂಚಿಸಲಾಗಿದೆ.