
ಬೆಳಗಾವಿ (ಜ.20): ಬ್ರಿಟಿಷರ ಕಾಲದಿಂದಲೂ ಪೊಲೀಸ್ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಆರ್ಡರ್ಲಿ ಪದ್ಧತಿಯನ್ನು ಕಿತ್ತು ಹಾಕಲಾಗುವುದು. ಹಿರಿಯ ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕವೇ ಆರ್ಡರ್ಲಿ ಪದ್ಧತಿ ತೆಗೆದುಹಾಕಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಶುಕ್ರವಾರ ಸುವರ್ಣವಿಧಾನಸೌಧದ ಸೆಂಟ್ರಲ್ ಸಭಾಭವನದಲ್ಲಿ ಉತ್ತರ ವಲಯದ ಪೊಲೀಸ್ ಸಿಬ್ಬಂದಿಗೆ ಪದೋನ್ನತಿ ಪ್ರದಾನ ಮಾಡಿ ಮಾತನಾಡಿದ ಅವರು ಆರ್ಡರ್ಲಿ ಕೆಲಸಕ್ಕೆ ಮೀಸಲಾಗಿದ್ದ ಸಿಬ್ಬಂದಿಯನ್ನು ಇಲಾಖೆಯ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು. ರಾಜ್ಯದ ಪೊಲೀಸ್ ಸಿಬ್ಬಂದಿಗೆ ಉತ್ತಮ ಸಂಬಳ, ಭತ್ಯೆ ಒದಗಿಸಲು ಸರ್ಕಾರ ಮುಂದಾಗಿದೆ. ಕ್ಯಾಂಟೀನ್ ಸೌಲಭ್ಯವನ್ನು ರಾಜ್ಯದ ಎಲ್ಲ ಕಡೆಗಳಲ್ಲಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ರಾಜ್ಯಾದ್ಯಂತ ಸಬ್‌ಬೀಟ್ ಪದ್ಧತಿ:
ಬೆಳಗಾವಿ ಜಿಲ್ಲಾ ಪೊಲೀಸ್ ಜಾರಿಗೆ ತಂದಿರುವ ವಿನೂತನ ಸಬ್‌ಬೀಟ್ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ರಾಜ್ಯಾದ್ಯಂತ ಈ ಪದ್ಧತಿಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದರು.
ಠಾಣೆ ವ್ಯಾಪ್ತಿಯ ಪ್ರತಿ ಹಳ್ಳಿಗೂ ಪೊಲೀಸರನ್ನು ಸಬ್‌ಬೀಟ್‌ಗೆ ನಿಯೋಜಿಸುವುದರಿಂದ ಪ್ರತಿ ಗ್ರಾಮದ ಮಾಹಿತಿಯೂ ಠಾಣೆಯಲ್ಲಿ ಲಭ್ಯವಿರುತ್ತದೆ. ಸ್ಥಳೀಯ ಜನರನ್ನು ಬೀಟ್ ಸಮಿತಿಗೆ ನೇಮಿಸುವುದರಿಂದ ಏನೇ ಅಪರಾಧ ಘಟಿಸಿದರೂ ತಕ್ಷಣವೇ ಮಾಹಿತಿ ಲಭಿಸುತ್ತದೆ. ಈ ಪದ್ಧತಿಯನ್ನು ಬೆಳಗಾವಿಯಲ್ಲಿ ಜಾರಿಗೆ ತಂದಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅವರ ಕಾರ್ಯಕ್ಕೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ಕ್ಯಾಂಟೀನ್ ಸೌಲಭ್ಯ ವಿಸ್ತರಣೆ:
ಸಿಬ್ಬಂದಿಗೆ ಉತ್ತಮ ವೇತನ ಹಾಗೂ ಕಾಲಕಾಲಕ್ಕೆ ಬಡ್ತಿ ನೀಡುವ ನಿಟ್ಟಿನಲ್ಲಿ ಔರಾದಕರ್ ಸಮಿತಿಯನ್ನು ರಚಿಸಲಾಗಿತ್ತು. ಇಂತಹ ಸಮಿತಿಯನ್ನು ರಚಿಸಿ ಸಮಗ್ರವಾಗಿ ಅಧ್ಯಯನ ನಡೆಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಸಮಿತಿಯ ವರದಿ ಬಳಿಕ ವೇತನದಲ್ಲಿ ಹೆಚ್ಚಳ ಹಾಗೂ ಬಡ್ತಿ ನೀತಿಯನ್ನು ಸರ್ಕಾರ ಪರಿಷ್ಕರಿಸಿದೆ ಎಂದರು.
₹225 ಕೋಟಿ ಅನುದಾನ:
ಅಪರಾಧ ತಡೆ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಗೃಹಸಚಿವರ ಸಲಹೆಗಾರ ಕೆಂಪಯ್ಯ, ಸುಮಾರು12 ಸಾವಿರ ಪೊಲೀಸರಿಗೆ ಏಕಕಾಲಕ್ಕೆ ಪದೋನ್ನತಿ ನೀಡುವ ಮೂಲಕ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಪದೋನ್ನತಿ ಹಾಗೂ ಭತ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ₹ 225 ಕೋಟಿ ಅನುದಾನವನ್ನು ನೀಡುವ ಮೂಲಕ ತನ್ನ ಕಾಳಜಿಯನ್ನು ತೋರಿಸಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.