ಹಿಲರಿ-ಟ್ರಂಪ್ ಪ್ರಥಮ ಅಧ್ಯಕ್ಷೀಯ ಚುನಾವಣಾ ಚರ್ಚೆ

By Internet DeskFirst Published Sep 27, 2016, 5:17 PM IST
Highlights

ವಾಷಿಂಗ್ಟನ್‌(ಸೆ.27): ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆ ನಿರ್ಣಾಯತ್ಮಕ ಹಂತಕ್ಕೆ ತಲುಪಿದ್ದು, ಅಲ್ಲಿನ ಎರಡೂ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ವಾಕ್ಸಮರ ಬಿರುಸುಗೊಂಡಿದೆ. ಅಧ್ಯಕ್ಷೀಯ ಚುನಾವಣೆಗೂ ಮುನ್ನಾ ನಡೆಯುವ ಪ್ರಥಮ ಚುನಾವಣಾ ಚರ್ಚೆಯಲ್ಲಿ, ಡೆಮಾಕ್ರಟಿಕ್‌ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಮತ್ತು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭಾಗವಹಿಸಿದ್ದಾರೆ. ಹೆಂಪ್‌ಸ್ಟೆಡ್‌ನ ಹೊಫ್‌ಸ್ಟ್ರಾ ವಿವಿಯಲ್ಲಿ ಮಂಗಳವಾರ ನಡೆದ 90 ನಿಮಿಷಗಳ ಚರ್ಚೆಯಲ್ಲಿ ಟ್ರಂಪ್‌ರನ್ನು ಹಿಲರಿ ಪರಸ್ಪರ ಮುಖಾಮುಖಿಯಾಗಿ ಎದುರಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದ ಇಬ್ಬರು ಅಭ್ಯರ್ಥಿಗಳೂ, ನ.8ರಂದು ನಡೆಯಲಿರುವ ಚುನಾವಣೆಯಲ್ಲಿ ಯಾರಿಗೆ ಮತದಾನ ಮಾಡಬಹುದು ಎಂದು ಇನ್ನೂ ನಿರ್ಧರಿಸದ ಅನಿರ್ಧರಿತ ಮತದಾರರನ್ನು ತಮ್ಮತ್ತ ಸೆಳೆಯುವ ಎಲ್ಲ ಪ್ರಯತ್ನಗಳನ್ನು ನಡೆಸಿದ್ದಾರೆ.

ಇಬ್ಬರೂ ನಾಯಕರೂ ಪರಸ್ಪರ ತೀವ್ರ ಪೈಪೋಟಿಯ ಹಾಗೂ ಕಟುವಾದ ವಾಗ್ವಾದ ನಡೆಸಿದರು. ಟ್ರಂಪ್‌ರ ನಿಂದನಾತ್ಮಕ ಮಾತುಗಳಿಗೆ ಹಿಲರಿ ನಸುನಗುತ್ತಲೇ ಪ್ರತಿ ದಾಳಿ ನಡೆಸಿದರು. ಅಧ್ಯಕ್ಷ ಬರಾಕ್‌ ಒಬಾಮರ ಪ್ರಥಮ ಆಡಳಿತದ ಅವಧಿಯಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಅವಧಿಯಲ್ಲಿ ಅಳಿಸಿ ಹಾಕಲಾದ ತನ್ನ 33,000 ಇ-ಮೇಲ್‌ಗಳ ಕುರಿತು ಮಾಹಿತಿ ಪಡಿಸಿದರೆ, ತಾನು ತನ್ನ ಆದಾಯ ತೆರಿಗೆಯ ಮಾಹಿತಿ ಬಹಿರಂಗ ಪಡಿಸುವುದಾಗಿ ಟ್ರಂಪ್‌ ಹೇಳಿದರು. ಟ್ರಂಪ್‌ ಮಹಿಳಾ ವಿರೋಧಿ ಎಂದು ಹಿಲರಿ ಜರೆದರು. ಕಮಾಂಡರ್‌-ಇನ್‌-ಚೀಫ್‌ ಆಗಲು ತನ್ನ ಸಾಮರ್ಥ್ಯವನ್ನು ಟ್ರಂಪ್‌ ಪ್ರಶ್ನಿಸಿದ್ದಾರೆ ಎಂದು ಹಿಲರಿ ಆಪಾದಿಸಿದರು.

ಮೊದಲ ಚರ್ಚೆ ಹಿಲರಿ ಪರ: ಟ್ರಂಪ್‌ ವಿರುದ್ಧದ ಪ್ರಥಮ ಚರ್ಚೆಯಲ್ಲಿ ಹಿಲರಿ ವಿಜೇತರಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ‘‘ಒಬ್ಬ ಅಭ್ಯರ್ಥಿ ಮಾತ್ರ ಅಧ್ಯಕ್ಷರಾಗಲು ಅರ್ಹರಾಗಿದ್ದಾರೆ ಎಂಬುದು ಪ್ರಥಮ ಚರ್ಚೆಯಲ್ಲಿ ಸಾಬೀತಾಗಿದೆ’’ ಎಂದು ಹಿಲರಿಯವರನ್ನುಲ್ಲೇಖಿಸಿ ವಾಷಿಂಗ್ಟನ್‌ ಪೋಸ್ಟ್‌ ಸಂಪಾದಕೀಯ ತಿಳಿಸಿದೆ. ಮೂರು ಸರಣಿ ಚರ್ಚೆಗಳಲ್ಲಿನ ಪ್ರಥಮ ಚರ್ಚೆಯಯ ಬಳಿಕ ನಡೆದ ಚರ್ಚಾ ನಂತರದ ಮತದಾನದಲ್ಲಿ, ಹಿಲರಿ ಕ್ಲಿಂಟನ್‌ರಿಗೆ ಶೇ. 62ಷ್ಟುಮತದಾನವಾಗಿದೆ ಮತ್ತು ಟ್ರಂಪ್‌ಗೆ ಶೇ. 27ರಷ್ಟುಮತಗಳು ಮಾತ್ರ ಬಿದ್ದಿವೆ ಎಂದು ಸಿಎನ್‌ಎನ್‌/ಓಆರ್‌ಸಿ ಘೋಷಿಸಿದೆ. ಟ್ರಂಪ್‌ ತಾಳ್ಮೆಯಿಲ್ಲದವರು, ರಾಜಕೀಯ ಅನನುಭವಿ ಎಂಬುದನ್ನು ಸತತ ಪ್ರದರ್ಶಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್‌ ಪರ ಹೆಚ್ಚಿನ ಚರ್ಚೆಯಾಗಿದ್ದು, ಹಿಲರಿ ಪರ ಕಡಿಮೆ ಚರ್ಚೆಯಾಗಿದೆ.

click me!