ಭಾರತೀಯ ಯೋಧರಿಗೆ ಹೊಸ ಶತ್ರುಗಳು : ಭಾರತಕ್ಕೆ ಡೇಂಜರಸ್ ಪಡೆ!

By Web DeskFirst Published Oct 29, 2018, 7:17 AM IST
Highlights

ಭಾರತೀಯ ಯೋಧರಿಗೆ ಇದೀಗ ಹೊಸ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಯೋಧರ ಹತ್ಯೆಗೆ ಇದೀಗ ಪಾಕಿಸ್ತಾನ ಅತ್ಯಂತ ಹೆಚ್ಚು ತರಬೇತಿ ಹೊಂದಿದ ಉಗ್ರ ಪಡೆಯನ್ನು ಕಾಶ್ಮೀರಕ್ಕೆ ರವಾನಿಸಿದೆ. 

ಶ್ರೀನಗರ: ಬಾಂಬ್, ಗುಂಡು, ಗ್ರೆನೇಡ್ ದಾಳಿ ನಡೆಸಿ ಭದ್ರತಾ ಪಡೆಗಳಲ್ಲಿ ಭೀತಿ ಹುಟ್ಟಿಸಲು ಯತ್ನಿ ಸುತ್ತಿದ್ದ ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಇದೀಗ ಕಾಶ್ಮೀರಕ್ಕೆ ‘ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಭದ್ರತಾ ಪಡೆಗಳು ಬಿಗಿಬಂದೋಬಸ್ತ್ ಮಾಡಿರುವ ಕಾರಣ, ನೇರಾನೇರ ದಾಳಿಯ ಬದಲು ಕದ್ದುಕುಳಿತು ಯೋಧರ ಮೇಲೆ ದಾಳಿ ನಡೆಸುವ ಹೇಡಿತನದ ಕೃತ್ಯಕ್ಕೆ ಪಾಕಿಸ್ತಾನ ಇಳಿದಿರುವುದು ಬಯಲಾಗಿದೆ.

ಭಾನುವಾರ ಪುಲ್ವಾಮಾದಲ್ಲಿ ಸ್ನೈಪರ್ ಗಳ ಗುಂಡಿನ ದಾಳಿಗೆ ಸಬ್‌ಇನ್ಸ್‌ಪೆಕ್ಟರ್ ಇಮ್ತಿಯಾಜ್ ಮೀರ್ ಬಲಿಯಾಗಿದ್ದಾರೆ. ಜೊತೆಗೆ ಸೆಪ್ಟೆಂಬರ್ ಮಧ್ಯಭಾಗದಿಂದ ಇದುವರೆಗೆ ಸೇನೆ, ಸಶಸ್ತ್ರ ಸೀಮಾ ಬಲ ಮತ್ತು ಸಿಐಎಸ್‌ಎಫ್ ಸೇರಿದ ತಲಾ ಒಬ್ಬರು ಯೋಧರು ಮೃತಪಟ್ಟಿದ್ದರೆ,  ಸಿಆರ್‌ಪಿಎಫ್‌ನ ಸಿಪಾ ಯಿಯೊಬ್ಬರು ಗಾಯಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಾರ್ಪ್ ಶೂಟರ್ ಉಗ್ರರಿಂದ ಇನ್ನಷ್ಟು ದಾಳಿ ನಡೆಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ತಮ್ಮ ತಂತ್ರಗಾರಿಕೆ ಬದಲಾಯಿಸಿಕೊಳ್ಳಲು ಭದ್ರತಾ ಪಡೆಗಳು ಮುಂದಾಗಿವೆ. ಸ್ನೈಪರ್ ದಾಳಿ ನಡೆಸುವ ಉಗ್ರರ ತಂತ್ರಗಾರಿಕೆ ಕಾಶ್ಮೀರದ ರಾಜಕಾರಣಿಗಳ ನಡುಕಕ್ಕೂ ಕಾರಣವಾಗಿದೆ. 

ಭದ್ರತಾ ಅಧಿಕಾರಿಗಳ ಪ್ರಕಾರ, ತಲಾ ಇಬ್ಬರು ಸದಸ್ಯರು ಇರುವ ಎರಡು ತಂಡಗಳು ಅಂದರೆ ನಾಲ್ಕು ಉಗ್ರರ ಶಾರ್ಪ್‌ಶೂಟರ್ ಪಡೆ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಭಯೋತ್ಪಾದಕರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ತರಬೇತಿ ಕೊಟ್ಟಿದೆ. ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಬಳಸುವ ಎಂ- 4 ಕಾರ್ಬೈನ್ಸ್ ಎಂಬ ವಿಶೇಷ ಸೌಲಭ್ಯ ಹೊಂದಿದ ಬಂದೂಕು ಬಳಸಿ ಉಗ್ರರು ದಾಳಿ ಮಾಡುತ್ತಿದ್ದಾರೆ. 

ಈ ಬಂದೂಕುಗಳಲ್ಲಿ ಟೆಲಿಸ್ಕೋಪ್ ಇರುತ್ತದೆ. ರಾತ್ರಿ ಹೊತ್ತು ಗುರಿ ವೀಕ್ಷಿಸಬಹುದಾದ ಅವಕಾಶವಿರುತ್ತದೆ. 500ರಿಂದ 600 ಮೀಟರ್ ದೂರದಿಂದಲೇ ಅತ್ಯಂತ ನಿಖರವಾಗಿ ದಾಳಿ ಮಾಡಬಹುದಾಗಿರುತ್ತದೆ. ಸೇನಾ ಶಿಬಿರಗಳಿಂದ ಎತ್ತರದ ಸ್ಥಳಗಳಲ್ಲಿ ಹೊಂಚು ಹಾಕಿ ಕಾಯುವ ಈ ಉಗ್ರರು, ಶಿಬಿರದೊಳಕ್ಕೆ ಪ್ರವೇಶ ಮಾಡುವುದಿಲ್ಲ. ತಮ್ಮ ಬಂಧು-ಬಾಂಧವರಿಗೆ ಮೊಬೈಲ್‌ನಲ್ಲಿ ಮಾತನಾಡಲು ಯೋಧರು ಸುರಕ್ಷಿತ ಸ್ಥಳ ದಿಂದ ಹೊರಗೆ ಬರುತ್ತಿದ್ದಂತೆ ಇವರು ಜಾಗೃತರಾಗುತ್ತಾರೆ. ಮೊಬೈಲ್‌ನ ಸಣ್ಣ ಬೆಳಕನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 

click me!