
ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ನಡೆದಿದ್ದ ದುರಂತದಲ್ಲಿ ತಮ್ಮ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಸಂಬಂಧ ದಾಖಲಿಸಿರುವ ದೋಷಾರೋಪ ಪಟ್ಟಿ ಮತ್ತು ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ಆರ್.ನಾಗಶೇಖರ್, ಸಹಾಯಕ ನಿರ್ದೇಶಕರಾದ ಎಸ್.ಭರತ್ ರಾವ್, ಮಾರದಪ್ಪ ಮತ್ತು ಸಾಹಸ ನಿರ್ದೇಶಕ ಕೆ. ರವಿಕುಮಾರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಚಿತ್ರೀಕರಣದ ವೇಳೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿದ್ದರೂ ಖಳನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದಾರೆ. ಆದರೆ, ಉದ್ದೇಶ ಪೂರ್ವಕವಲ್ಲದ ಕೊಲೆ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳ ಕ್ರಮ ಸರಿಯಲ್ಲ. ಇನ್ನು ಅಧೀನ ನ್ಯಾಯಾಲಯ ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಾಗ್ನಿಜೆನ್ಸ್ ದಾಖಲಿಸಿಕೊಂಡ ಪ್ರಕ್ರಿಯೆ ಕಾನೂನು ಪ್ರಕಾರವಾಗಿಲ್ಲ. ಆದ್ದರಿಂದ ಪ್ರಕರಣ ಕುರಿತ ದೋಷಾರೋಪ ಪಟ್ಟಿ ಮತ್ತು ಮಾಗಡಿ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಈ ವಾದವನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಚಿತ್ರೀಕರಣದ ವೇಳೆ ಅರ್ಜಿದಾರರು ವಹಿಸಿದ ನಿರ್ಲಕ್ಷ್ಯದಿಂದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದಾರೆ. ಕಾಗ್ನಿಜೆನ್ಸ್ ದಾಖಲಿಸಿಕೊಂಡ ಪ್ರಕ್ರಿಯೆ ಸರಿಯಿಲ್ಲ ಎನ್ನುವುದಾರೆ, ಪ್ರಕರಣವನ್ನು ಮತ್ತೆ ಅಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿ, ಹೊಸದಾಗಿ ಕಾಗ್ನಿಜೆನ್ಸ್ ದಾಖಲಿಸಿಕೊಳ್ಳಲು ಸೂಚಿಸುವುದು ಸೂಕ್ತ. ಅರ್ಜಿದಾರರು ಮಾಡಿದ ತಪ್ಪಿಗೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ಹಾಗೂ ದೋಷಾರೋಪ ಪಟ್ಟಿ ರದ್ದುಪಡಿಸಬಾರದು ಎಂದು ಕೋರಿದ್ದರು.
ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.