ರಾಜ್ಯ ಬಿಜೆಪಿ ಕಲಹ ಶಮನಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್

Published : Jan 26, 2017, 12:20 AM ISTUpdated : Apr 11, 2018, 01:10 PM IST
ರಾಜ್ಯ ಬಿಜೆಪಿ ಕಲಹ ಶಮನಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್

ಸಾರಾಂಶ

ಕೊನೆಗೂ ಬಿಜೆಪಿಯ ಇಬ್ಬರು ಮದಗಜಗಳ ಬ್ರಿಗೇಡ್‌ ಸಮರ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ದಿಢೀರನೆ ರಂಗ​ಪ್ರವೇಶ ಮಾಡಿ​ದ್ದಾರೆ. ಬ್ರಿಗೇಡ್‌ ಬಿಕ್ಕಟ್ಟಿನ ತ್ರಿಮೂರ್ತಿಗಳಾದ ಈಶ್ವರಪ್ಪ, ಸಂತೋಷ್‌ ಹಾಗೂ ಯಡಿಯೂರಪ್ಪನವರಿಗೆ ದೆಹಲಿಗೆ ಹಠಾತ್‌ ಬುಲಾವ್‌ ಬಂದಿದೆ.

ಬೆಂಗಳೂರು(ಜ.26): ಕೊನೆಗೂ ಬಿಜೆಪಿಯ ಇಬ್ಬರು ಮದಗಜಗಳ ಬ್ರಿಗೇಡ್‌ ಸಮರ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಪರಿಹರಿಸಲು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ದಿಢೀರನೆ ರಂಗ​ಪ್ರವೇಶ ಮಾಡಿ​ದ್ದಾರೆ. ಬ್ರಿಗೇಡ್‌ ಬಿಕ್ಕಟ್ಟಿನ ತ್ರಿಮೂರ್ತಿಗಳಾದ ಈಶ್ವರಪ್ಪ, ಸಂತೋಷ್‌ ಹಾಗೂ ಯಡಿಯೂರಪ್ಪನವರಿಗೆ ದೆಹಲಿಗೆ ಹಠಾತ್‌ ಬುಲಾವ್‌ ಬಂದಿದೆ.

ಶುಕ್ರವಾರ ಸಂಜೆ ದೆಹಲಿಯ ಅಕ್ಬರ್‌ ರಸ್ತೆಯಲ್ಲಿರುವ ಅಮಿತ್‌ ಶಾ ಅವರ ನಿವಾಸದಲ್ಲೇ ಈ ಸಭೆ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಕುಳ್ಳಿರಿಸಿಕೊಂಡು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಹಾಗೂ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಮುಗಿಯು​ವವರೆಗೂ ಬ್ರಿಗೇಡ್‌ ಬಿಕ್ಕಟ್ಟಿನ ಬಗ್ಗೆ ಬಿಜೆಪಿ ಹೈಕಮಾಂಡ್‌ ಮಧ್ಯಪ್ರವೇಶ ಮಾಡುವುದಿಲ್ಲ ಎನ್ನ​​​​​ಲಾಗಿತ್ತು. ಆದರೆ, ಬಿಕ್ಕಟ್ಟು ತೀವ್ರವಾದ ಹಿನ್ನೆಲೆ​ಯಲ್ಲಿ ತಕ್ಷಣವೇ ಈ ಸಂಧಾನ ಸಭೆ ನಡೆಸ​ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಭೆಯ ನಂತರ ಬ್ರಿಗೇಡ್‌ ಮತ್ತು ಅದರ ನೇತೃತ್ವ ವಹಿಸಿಕೊಂಡಿರುವ ಪಕ್ಷದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ರಾಜಕೀಯ ಭವಿಷ್ಯ ತೀರ್ಮಾನವಾಗಲಿದೆ.

ಹೀಗಾಗಿ ಶುಕ್ರವಾರದ ಈ ಸಂಧಾನ ಸಭೆ ರಾಜ್ಯ ಬಿಜೆಪಿಯ ಮಟ್ಟಿಗೆ ಸಾಕಷ್ಟುಮಹತ್ವ ಪಡೆದುಕೊಂಡಿದೆ. ಕಳೆದ ಹಲವು ತಿಂಗಳು ಗಳಿಂದ ನಡೆಯುತ್ತಿರುವ ಯಡಿಯೂರಪ್ಪ ವರ್ಸಸ್‌ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬೀಳಲಿದೆಯೇ? ಉಭಯ ನಾಯಕರ ಪೈಕಿ ಯಾರಿಗೆ ಗೆಲುವು ಸಿಗಲಿದೆ? ಈ ಜನ್ಮದಲ್ಲಿ ಬ್ರಿಗೇಡ್‌ ಸಂಘಟನೆ ಒಪ್ಪುವುದಿಲ್ಲ ಎಂದಿರುವ ಯಡಿಯೂರಪ್ಪ ಮೆತ್ತಗಾಗು​ವರೇ? ಬ್ರಿಗೇಡ್‌ ಬಿಡುವ ಮಾತೇ ಇಲ್ಲ ಎನ್ನುತ್ತಿರುವ ಈಶ್ವರಪ್ಪ ಮಣಿಯುತ್ತಾರಾ ಅಥವಾ ಶಿಸ್ತು ಕ್ರಮ ಎದುರಿಸಲು ಸಜ್ಜಾಗು​ತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಲಭಿಸುವ ನಿರೀಕ್ಷೆಯಿದೆ.

ಅಮಿತ್‌ ಶಾ ಅವರ ಮಧ್ಯಸ್ಥಿಕೆಗಾಗಿ ಈಶ್ವರಪ್ಪನ ವರೂ ಒತ್ತಾಯಿಸುತ್ತಿದ್ದರು. ಈಶ್ವರ​ಪ್ಪನವರ ಚಟುವ​ಟಿ​ಕೆಗಳನ್ನು ಅಮಿತ್‌ ಶಾ ಅವರೇ ಗಮನಿಸುತ್ತಿದ್ದಾರೆ, ಅವರೇ ಮಾಡಬೇಕಾದ್ದನ್ನು ಮಾಡುತ್ತಾರೆ ಎಂದು ಯಡಿಯೂರಪ್ಪನವರೂ ಹೇಳುತ್ತಿದ್ದರು. ಆದರೆ, ಉತ್ತರ ಪ್ರದೇಶ ಚುನಾವಣೆಯ ನಡು​ವೆ ಅಮಿತ್‌ ಶಾ ಅವರಿಗೆ ಈ ಸಭೆಗೆ ಪುರುಸೋತ್ತಿಲ್ಲ ಎಂದೇ ಎಲ್ಲರೂ ನಂಬಿದ್ದರು. ಆದರೆ, ಎಲ್ಲರ ನಂಬಿಕೆಯನ್ನೂ ಮೀರಿ ಅಮೀತ್‌ ಶಾ ದಿಢೀರನೆ ಈ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಬೇಡಿಕೆಗಳು ಪರಿಹಾರವಾ​ಗುತ್ತ​ವೋ ಅಥವಾ ಸದ್ಯಕ್ಕೆ ತೇಪೆ ಹಚ್ಚಿ ಮಧ್ಯಂತರ ಪರಿಹಾರ ಕಾಣುತ್ತವೋ ಎಂದು ಕಾದು ನೋಡಬೇಕು. ಈ ಬಿಕ್ಕಟ್ಟು ಪರಿಹಾರ​ಗೊಂಡಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸಂಘಟನೆ ಮತ್ತಷ್ಟುಬಲಗೊಳ್ಳುವ ಸಾಧ್ಯತೆ​ಯಿದೆ. ಒಂದು ವೇಳೆ ಉಭಯ ನಾಯಕರು ತಮ್ಮ ತಮ್ಮ ನಿಲುವುಗಳಿಗೇ ಗಟ್ಟಿಯಾಗಿ ಅಂಟಿಕೊಂಡಲ್ಲಿ ಬಿಜೆಪಿಗೆ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ.

ಇದುವರೆಗಿನ ಬೆಳವಣಿಗೆಗಳನ್ನು ಗಮನಿಸಿ​ದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಬ್ಬರ ಪೈಕಿ ಯಾರೊಬ್ಬರೂ ಹಿಂದೆ ಸರಿಯುವ ಮುನ್ಸೂಚನೆ ನೀಡಿಲ್ಲ. ಬದಲಾಗಿ, ಇಬ್ಬರೂ ತಮ್ಮ ನಿಲುವುಗಳನ್ನು ಬಹಿರಂಗವಾ​ಗಿಯೇ ಪ್ರತಿಪಾದಿಸಿದ್ದಾರೆ. ಈಗ ಅಮಿತ್‌ ಶಾ ಅವರ ಮುಂದೆ ಯಾರು ತಮ್ಮ ನಿಲುವಿ​ನಿಂದ ಹಿಂದೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಲಬುರಗಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಬ್ರಿಗೇಡ್‌ ಸಂಘಟನೆಗೆ ಸಂಬಂಧಿಸಿದಂತೆ ಗದ್ದಲ ಉಂಟಾಗಿತ್ತು. ಈಶ್ವರಪ್ಪ ನಡೆಯನ್ನು ಹಲವು ಶಾಸಕರು ಹಾಗೂ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ಶಿಸ್ತು ಕ್ರಮ ಕೈಗೊಳ್ಳು ವಂತೆಯೂ ಒತ್ತಾಯಿಸಿದ್ದರು. ಈ ವೇಳೆ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು ಯಡಿಯೂ ರಪ್ಪ ಪರ ಮುಖಂಡರ ಅಭಿಪ್ರಾಯ ಪಡೆದದ್ದಲ್ಲದೆ, ಈಶ್ವರಪ್ಪ ಅವರೊಂದಿಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು.

ಇದರ ಬೆನ್ನಲ್ಲೇ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಹಿ ಸಂಗ್ರಹವೂ ನಡೆದಿತ್ತು. ಈ ಸಂಬಂಧ ಸುಮಾರು 11 ಮಂದಿ ಸಂಸದರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪತ್ರ ಕಳುಹಿಸಿದ್ದರು.ಅಷ್ಟರಲ್ಲಿ ಸಂಧಾನ ಸಭೆ ನಿಗದಿಯಾಗಿದೆ.

ಸಭೆಯಲ್ಲಿ ಯಾರ್ಯಾರು ಭಾಗಿ?:

ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬ್ರಿಗೇಡ್‌ ನೇತೃತ್ವ ವಹಿಸಿಕೊಂಡಿರುವ ಕೆ.ಎಸ್‌.ಈಶ್ವರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಹಾಗೂ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ
ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?