
ಬೆಂಗಳೂರು(ಆ.15): ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ತಡರಾತ್ರಿಯಿಂದ ಮಳೆಯಾಗುತ್ತಿದ್ದು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಬೆಂಗಳೂರಿನ ವಿವಿಧೆಡೆ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಶಿವಾಜಿನಗರ, ಜಯನಗರ, ಕೋರಮಂಗಲ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಜೆ.ಪಿ.ನಗರದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನ ತೊಂದರೆಗೊಳಗಾಗಿದ್ದಾರೆ.
ಮನೆಗಳಿಗೆ ನೀರುನುಗ್ಗಿ ಅಪಾರ ಹಾನಿ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳ ಭೇಟಿ ನೀಡಿ ಪರಿಶೀಲನೆಗೆ ನಡೆಸಿದ್ದಾರೆ. ಜೆಸಿ ರೋಡ್ ಸೇರಿದಂತೆ ಹಲವು ಏರಿಯಾಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಸಿರುವ ಸಿಎಂ ಸಿದ್ದರಾಮಯ್ಯ, 'ಹಾನಿ ಉಂಟಾದ ಸ್ಥಳಗಳಲ್ಲಿ ಪರಿಶೀಲನೆ ನಡೆಸುವಂತೆ ಮೇಯರ್, ಬಿಬಿಎಂಪಿ ಆಯುಕ್ತರು ಹಾಗೂ ಸಚಿವ ಜಾರ್ಜ್ಗೆ ಸೂಚನೆ ನೀಡಿದ್ದು, ಈಗಾಗಲೇ ಅವರು ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.'
ಇನ್ನು ಭಾರೀ ಮಳೆಗೆ ಯಡಿಯೂರು ಕೆರೆ ಮುಂಭಾಗದ ರೆಸ್ತೆ ಬಳಿ 15 ಅಡಿ ಎತ್ತರದ ತಡೆ ಗೋಡೆ ಕುಸಿದು ಬಿದ್ದಿದೆ. ಪರಿಣಾಮ 3 ಕಾರುಗಳು, ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ದಕ್ಷಿಣ ವಲಯದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸದಾಗಿ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಇನ್ನು ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಳ್ಳಂಡೂರಿನ ದುಗ್ಗಲಮ್ಮ ದೇವಾಲಯ ಜಲಾವೃತಗೊಂಡಿದೆ. ಹೀಗಾಗಿ ಕೆರೆಯಲ್ಲಿ ನೊರೆ ಪ್ರಮಾಣವೂ ಅಧಿಕವಾಗಿದೆ. ಯಮಲೂರು ಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿ ನೊರೆ ಅಧಿಕವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.