ಕೊಡಗು : ಕಣ್ಣೆದುರೇ ಮಣ್ಣಲ್ಲಿ ಹೂತುಹೋದ ಕರುಳ ಕುಡಿ

By Web DeskFirst Published Aug 25, 2018, 10:01 AM IST
Highlights

ಪ್ರಕೃತಿ ವಿಕೋಪಕ್ಕೆ ಸಿಲುಕಿ ಮಣ್ಣಿನಡಿ ಆಳಕ್ಕೆ ಹೂತು ಹೋದ ಮಗನ ನೆನಪಲ್ಲೇ ಹೆತ್ತ ಕರುಳು ನೋವನುಭವಿಸುತ್ತಿದೆ. ಘಟನೆ ನಡೆದು ಒಂದು ವಾರ ಕಳೆದರೂ ಮಗನ ಸುಳಿವೇ ಪತ್ತೆಯಾಗಿಲ್ಲ. ​ಇದು ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ ನೋವಿನ ನುಡಿಯಾಗಿದೆ. 

ಮಡಿಕೇರಿ  :  ಪ್ರಕೃತಿ ವಿಕೋಪಕ್ಕೆ ಸಿಲುಕಿ ಮಣ್ಣಿನಡಿ ಆಳಕ್ಕೆ ಹೂತು ಹೋದ ಮಗನ ನೆನಪಲ್ಲೇ ಹೆತ್ತ ಕರುಳು ನೋವನುಭವಿಸುತ್ತಿದೆ. ಘಟನೆ ನಡೆದು ಒಂದು ವಾರ ಕಳೆದರೂ ಮಗನ ಸುಳಿವೇ ಪತ್ತೆಯಾಗಿಲ್ಲ. ​ಇದು ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಈಗ ನಿರಾಶ್ರಿತರ ಕೇಂದ್ರದಲ್ಲಿರುವ ಸೋಮಶೇಖರ್‌- ಸುಮಾ ಅವರ ನೋವಿನ ಕತೆ.

ನಾವು ಟಾರ್ಪಲ್‌ ಮನೆ ಕಟ್ಟಿಕೊಂಡು ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು. ದಿಢೀರ್‌ ಬಂದ ಜಲ ಪ್ರಳಯದಿಂದಾಗಿ ಮನೆ ಸಂಪೂರ್ಣ ಹಾನಿಯಾಯಿತು. ಮಗ ಗಗನ್‌ ಕಾವೇರಪ್ಪ ಮಣ್ಣಿನೊಳಗೆ ಹೂತುಕೊಂಡಿದ್ದ. ರಕ್ಷಣೆ ಮಾಡಲು ಎಷ್ಟೇ ಪ್ರಯತ್ನಿಸಿದ್ದರೂ ಅವನನ್ನು ಕಾಪಾಡಲು ಸಾಧ್ಯವಾಗಿಲ್ಲ. ಈಗ ಒಂದು ವಾರ ಕಳೆದರೂ ಮಗನ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ಕಣ್ಣೀರಾಗುವ ಈ ದಂಪತಿ ಮಗನ ನೆನಪಲ್ಲಿ ನೋವನುಭವಿಸುತ್ತಿದ್ದಾರೆ.

ಈ ದಂಪತಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳೊಂದಿಗೆ ಟಾರ್ಪಲ್‌ ಜೋಪಡಿಯಲ್ಲಿ ಜೀವನ ನಡೆಸುತ್ತಿದ್ದರು. ಆ.17ರಂದು ಭಾರಿ ಮಳೆ ಸುರಿದ ಪರಿಣಾಮ ಮನೆಯ ಪಕ್ಕದಲ್ಲಿ ಮಣ್ಣಿನ ಬರೆ ಜರಿಯುತ್ತಿತ್ತು. ನೀರು ಮನೆಯೊಳಗೆ ನುಗ್ಗಿತ್ತು. ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಮಕ್ಕಳೊಂದಿಗೆ ಮನೆಯಿಂದ ಹೊರಬಂದರು. ಆದರೆ ಅಷ್ಟರಲ್ಲಿ 7 ವರ್ಷದ ಮಗ ಗಗನ್‌ ಕಾವೇರಪ್ಪ ಮಣ್ಣಿನ ಆಳಕ್ಕೆ ಹೂತು ಹೋಗಿದ್ದ. ಈ ದಂಪತಿ ಮಗನನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದ್ದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೊಬ್ಬ ಪುತ್ರ ಮುತ್ತಪ್ಪನನ್ನಾದರೂ ರಕ್ಷಿಸಬೇಕೆಂದು ದಂಪತಿ ಆತನೊಂದಿಗೆ ಕಾಲು ದಾರಿಯಲ್ಲೇ ನಡೆದು ರಾತ್ರೋರಾತ್ರಿ ತಮ್ಮ ಸಂಬಂಧಿ​ಕರ ಮನೆ ಕಲ್ಲುಗುಂಡಿಗೆ ತಲುಪಿದ್ದರು.

ಮನೆ ಕಳೆದುಕೊಂಡಿರುವವರಿಗೆ ನಿರಾಶ್ರಿತರ ಕೇಂದ್ರಗಳು ಆರಂಭವಾಗಿರುವ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿ ಕಲ್ಲುಗುಂಡಿಯಿಂದ ಮಡಿಕೇರಿಯ ನಿರಾಶ್ರಿತರ ಕೇಂದ್ರಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಈಗಾಗಲೇ ಗಗನ್‌ ಶೋಧ ಕಾರ್ಯ ನಡೆಯುತ್ತಿದ್ದು, ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಡಿಕೇರಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲೇ ಮಗನ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸ್‌ ಅ​ಕಾರಿಗಳು ಭರವಸೆ ನೀಡಿದ್ದಾರೆ.

ನಾವು ಟಾರ್ಪಲ್‌ ಮನೆಯಲ್ಲಿ ವಾಸಿಸುತ್ತಿದ್ದೆವು. ಕಳೆದ ಶುಕ್ರವಾರ ಭಾರಿ ಮಳೆಯಿಂದ ಮನೆಯ ಪಕ್ಕದ ಬರೆ ಜರಿದು, ಮನೆಯೊಳಗೆ ನೀರು ನುಗ್ಗಿತ್ತು. ಮಗ ಗಗನ್‌ ಕಾವೇರಪ್ಪ ಮಣ್ಣಿನೊಳಗೆ ಸಿಲುಕಿದ್ದ, ಇದೀಗ ಆತನನ್ನು ಕಳೆದುಕೊಂಡು ಒಂದು ವಾರ ಕಳೆದಿದೆ. ಇನ್ನೂ ಆತನ ಸುಳಿವು ಸಿಕ್ಕಿಲ್ಲ.

-ಸುಮಾ, ಕಾಲೂರು ನಿವಾಸಿ

ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ

click me!