ಸರ್ಕಾರಿ ಅಧಿಕಾರಿಗಳ ಭಾರೀ ವರ್ಗಾವರ್ಗಿ

First Published Jun 23, 2018, 9:40 AM IST
Highlights

ಜುಲೈ ಅಂತ್ಯದೊಳಗಾಗಿ ಶೇ.4 ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಲು ಹಾಗೂ ಸರ್ಕಾರಿ  ಶಾಲಾ ಮಕ್ಕಳಿಗೆ 2 ನೇ ಸುತ್ತಿನ ಸಮವಸ್ತ್ರ ವಿತರಣೆಗೆ ಹಣ ಬಿಡುಗಡೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
 

ಬೆಂಗಳೂರು : ಜುಲೈ ಅಂತ್ಯದೊಳಗಾಗಿ ಶೇ.4 ರಷ್ಟು ಮಂದಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಲು ಹಾಗೂ ಸರ್ಕಾರಿ  ಶಾಲಾ ಮಕ್ಕಳಿಗೆ 2 ನೇ ಸುತ್ತಿನ ಸಮವಸ್ತ್ರ ವಿತರಣೆಗೆ ಹಣ ಬಿಡುಗಡೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಪ್ರತಿ ವರ್ಷದ ವಾಡಿಕೆಯಂತೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಬೇಕಾಗಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಬಾರಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರಲಿಲ್ಲ. ಇದೀಗ ಸರ್ಕಾರಿ ಅಧಿಕಾರಿಗಳಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ವರ್ಗಾವಣೆಗೆ ಅನುಮತಿ ನೀಡಿ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ,
2013 ರ ವರ್ಗಾವಣೆ ಮಾರ್ಗಸೂಚಿಯಂತೆ ಶೇ.6 ರಷ್ಟು ಅಧಿಕಾರಿಗಳ ವರ್ಗಾವಣೆ ಮಾಡದೆ ವರ್ಗಾವಣೆಯನ್ನು ಶೇ.4 ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಸಮವಸ್ತ್ರ ವಿತರಣೆ: ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲ ಸುತ್ತಿನ ಸಮವಸ್ತ್ರ ವಿತರಣೆ ಈಗಾಗಲೇ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಎರಡನೇ ಸೆಟ್ ಸಮವಸ್ತ್ರ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿ ಮಗುವಿಗೆ 300 ರು.ಗಳಂತೆ 115 ಕೋಟಿ ರು. ಅನುದಾನ ಬಿಡುಗಡೆ ಮಾಡಿ, ಸಮವಸ್ತ್ರ ವಿತರಣೆ ಜವಬ್ದಾರಿಯನ್ನು ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗೆ (ಎಸ್‌ಡಿಎಂಸಿ) ವಹಿಸಲು ನಿರ್ಧರಿಸಲಾಯಿತು. 

ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಸಮವಸ್ತ್ರ ವಿತರಿಸುವ ಪ್ರಯತ್ನ ಮಾಡಲಾಗಿತ್ತು. ಈ ವರ್ಷ ಸಮವಸ್ತ್ರ ವಿತರಣೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಎಸ್ ಡಿಎಂಸಿಗಳ ಹಂತದಲ್ಲೇ ಟೆಂಡರ್ ಮಾಡಲು ಪ್ರಸ್ತುತ ಶಾಲಾ ತರಗತಿಗಳು ಪ್ರಾರಂಭವಾಗಿರುವುದರಿಂದ ಸಮವಸ್ತ್ರ ವಿತರಣೆ ವಿಳಂಬವಾಗಬಾರದು ಎಂಬ ಹಿನ್ನೆಲೆಯಲ್ಲಿ ಎಸ್‌ಡಿಎಂಸಿಗಳಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

ಇದೇ ವೇಳೆ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ 2 ನೇ ಹಂತದ ಅನುಷ್ಠಾನಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಅಭಿಯಾನದ ಅಡಿ ಉನ್ನತ ಶಿಕ್ಷಣ ಇಲಾಖೆಯಡಿಗೆ ಬರುವ ಕಾಲೇಜುಗಳ ಅಭಿವೃದ್ಧಿ ಮತ್ತಿತರ ಕಾರ್ಯ ಮಾಡಲಾಗುವುದು. ಇದಕ್ಕೆ ಶೇ. 60  ರಷ್ಟು ಅನುದಾನವನ್ನು ಕೇಂದ್ರ  ಸರ್ಕಾರ ನೀಡಲಿದ್ದು, ರಾಜ್ಯ ಸರ್ಕಾರದ ಶೇ.40  ರ ಪಾಲು 460 ಕೋಟಿ ರು. ಬಿಡುಗಡೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು. 

ಇದೇ ವೇಳೆ ರಾಮನಗರದಲ್ಲಿ ವಸತಿ ವ್ಯವಸ್ಥೆ ಒಳಗೊಂಡ ಕಾಲೇಜು ನಿರ್ಮಾಣ ಮಾಡಲು 14.85 ಕೋಟಿ ರು. ಬಿಡುಗಡೆ ಮಾಡಲು ಕೂಡ ಸಭೆಯಲ್ಲಿ ನಿರ್ಧರಿಸಲಾಯಿತು.

click me!