ಸ್ಟೀಲ್‌ ಸೇತುವೆ: ತರಾತುರಿ ಏಕೆ? ಕುಮಾರಸ್ವಾಮಿ ಪ್ರಶ್ನೆ

By Suvarna Web DeskFirst Published Oct 20, 2016, 6:48 AM IST
Highlights

ಉಕ್ಕಿನ ಸೇತುವೆ ಹಿಂದೆ ಏನಿದೆ ಎಂಬ ವಿಚಾರಗಳನ್ನು ಮುಂದೆ ದಾಖಲೆ ಸಮೇತ ಬಹಿರಂಗಪಡಿಸುವುದಾಗಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ

ಬೆಂಗಳೂರು (ಅ.20): ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತರಾತುರಿ ಮಾಡುತ್ತಿದೆ. ಬಿಜೆಪಿ ಕೂಡ ಈ ಯೋಜನೆ ವಿರೋಧಿಸುತ್ತಿರುವುದರ ಹಿಂದೆ ಏನಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2007ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ನಾಲ್ಕು ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನ ಕೈಗೊಳ್ಳಲಾಗಿತ್ತು. ಆಗ ಉಕ್ಕಿನ ಸೇತುವೆ ಪ್ರಸ್ತಾವನೆಯೇ ಇರಲಿಲ್ಲ. ಕೊಳಚೆ ನೀರು ಹರಿಯುವ ಮೋರಿಗಳ ಮೇಲೆ ರಸ್ತೆ ನಿರ್ಮಾಣ, ಮಿನ್ಸ್ಕ್ ವೃತ್ತದಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈ ಸ್ಪೀಡ್‌ ರೈಲು ಈ ಯೋಜನೆಗಳಲ್ಲಿ ಸೇರಿದ್ದವು. ಚೀನಾ ಸರ್ಕಾರದ ಏಜೆನ್ಸಿ ರೂ.800 ಕೋಟಿಗಳಲ್ಲಿ ಮಿನ್ಸ್ಕ್ ವೃತ್ತದಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ ನಿರ್ಮಾಣ ಮಾಡಿ ನಿರ್ವಹಿಸಲು ಮುಂದೆ ಬಂದಿತ್ತು. ಈಗ ರೂ.1800 ಕೋಟಿ ಸರ್ಕಾರ ಖರ್ಚು ಮಾಡಲು ಹೊರಟಿದೆ. ಇದಕ್ಕಾಗಿ ಬಿಡಿಎ ಬಳಿ ಇರುವ ಖಾಲಿ ಜಾಗಗಳ ಹರಾಜಿಗೆ ಹೊರಟಿದೆ. ಎಲ್ಲ ಉಕ್ಕಿನ ಸೇತುವೆ ಹಿಂದೆ ಏನಿದೆ ಎಂಬ ವಿಚಾರಗಳನ್ನು ಮುಂದೆ ದಾಖಲೆ ಸಮೇತ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು.

click me!