HN ಕೃಷ್ಣ ಭೇಟಿ ಮಾಡಿದ HDK: ಇದೆಯಾ ರಾಜಕೀಯ ಲೆಕ್ಕಾಚಾರ?

By Web DeskFirst Published Jul 27, 2019, 3:35 PM IST
Highlights

ಇತ್ತ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತಿದ್ದಂತೆ, ಎಲ್ಲಿ ಹಳೆ ಪ್ರಕರಣಗಳು ಓಪನ್ ಆಗುತ್ತೋ ಎಂಬ ಭಯ ಆರೋಪಿಗಳಿಗೆ ಕಾಡಲು ಆರಂಭವಾಗಿದೆ ಎಂದೆನಿಸುತ್ತೆ. ಕೆಪಿಎಸ್‌ಸಿ ನೇಮಕಾತಿ ಹಗರಣ ಆರೋಪದಡಿ ಬಂಧಿತರಾಗಿ, ಜಾಮೀನು ಮೇಲೆ ಬಿಡುಗಡೆಯಾಗಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ಹಲವು ಕುತೂಹಲಗಳಿಗೆ ಎಡೆ ಮಾಡಿ ಕೊಟ್ಟಿದೆ.

ಬೆಂಗಳೂರು [ಜು.28]: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಕೆಪಿಎಸ್‌ಸಿ ನೇಮಕಾತಿ ಹಗರಣ ಆರೋಪದಡಿಯಲ್ಲಿ ಬಂಧಿತರಾಗಿದ್ದ KPSC ಮಾಜಿ ಅಧ್ಯಕ್ಷ HN ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಒಂದು ಗಂಟೆಗೂ ಹೆಚ್ಚು ಕಾಲ ಕೃಷ್ಣ ಅವರ ಮನೆಯಲ್ಲಿ ಕುಮಾರಸ್ವಾಮಿ ಕಾಲ ಕಳೆದಿದ್ದು, ಮಧ್ಯಾಹ್ನದ ಭೋಜನ ಸೇವಿಸಿ ಮರಳಿದ್ದಾರೆನ್ನಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ಕೃಷ್ಣ ಅವರು ತಮ್ಮ ನಿವಾಸದಲ್ಲಿ ಇರಲಿಲ್ಲವೆಂದೂ ಹೇಳಲಾಗುತ್ತಿದೆ. 

ಆದರೆ, ಇದೀಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಹಿನ್ನೆಲೆಯಲ್ಲಿ ಈ ಇಬ್ಬರ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಮಾತನಾಡಿಸಲು ಯತ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೆ, ಅವರ ಚಾಲಕ ಹೊಡೆಯಲು ಯತ್ನಿಸಿದ್ದು, ಮತ್ತಷ್ಟು ಅನುಮಾನಗಳನ್ನು ಹುಟ್ಟಿಸಿದೆ.

ಏನಿದು ಹಗರಣ? 

1998ರ ಫೆಬ್ರವರಿಯಲ್ಲಿ 383 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ  ಅರ್ಜಿ ಆಹ್ವಾನಿಸಿತ್ತು. ಆಗಸ್ಟ್‌ನಲ್ಲಿ ಪ್ರಾಥಮಿಕ ಪರೀಕ್ಷೆ, 1999ರ ಏಪ್ರಿಲ್‌ನಲ್ಲಿ ಮುಖ್ಯ ಪರೀಕ್ಷೆಯನ್ನೂ ನಡೆಸಿತ್ತು. ಆಯ್ದ ಕೆಲವು ಅಭ್ಯರ್ಥಿಗಳ ಸಂದರ್ಶನವನ್ನೂ ನಡೆಸಿ, 2001ರಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಪರೀಕ್ಷೆ ಮೌಲ್ಯಮಾಪನದಲ್ಲಿಯೇ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (KAT) ಮೊರೆ ಹೋಗಿದ್ದರು. 

SDA ಪರೀಕ್ಷೆ: ಫೋನ್ ಮಾಡಿ ಕಾಪಿ ಹೊಡೆದಿದ್ದ ವಿದ್ಯಾರ್ಥಿ ಅರೆಸ್ಟ್

ಪ್ರಕರಣ ವಿಚಾರಣೆ ನಡೆದ ನಂತರ ಈ ವಿಷಯ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಲು ರಚನೆಯಾದ ಸತ್ಯಶೋಧನಾ ಸಮಿತಿ ನೀಡಿದ ವರದಿ ಅನ್ವಯ ಪ್ರಕಟಿಸಿದ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯೂ ಹಲವು ಗೊಂದಲಕ್ಕೆ ಎಡೆಮಾಡಿಕೊಟ್ಟಿತು. ಈ ಎಲ್ಲ ಬೆಳವಣಿಗೆಯಲ್ಲಿ ಕೆಪಿಎಸ್‌ಸಿ ಆಗಿನ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರನ್ನು ಹಗರಣದ ಆರೋಪದಡಿ ಬಂಧಿಸಲಾಗಿತ್ತು. ಕೆಲವು ದಿನಗಳ ಕಾಲ ಕಂಬಿ ಎಣಿಸಿದ್ದ ಅವರು ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. 

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಎಲ್ಲ ಹಗರಣಗಳು ಬೆಳಕಿಗೆ ಬಂದು, ಕೃಷ್ಣ ಅವರು ಜೈಲಿಗೆ ಹೋಗುವಂತಾಗಿತ್ತು. ಈ ಹಗರಣದೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬದವರ ಹೆಸರೂ ಥಳಕು ಹಾಕಿಕೊಂಡಿತ್ತು. ಇದೀಗ ಕೃಷ್ಣ ಅವರನ್ನು ಭೇಟಿಯಾಗಲು ತೆರಳಿದ ಕುಮಾರಸ್ವಾಮಿ ನಡೆ ಹಲವು ಅಚ್ಚರಿ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.

ಇದೀಗ ಮತ್ತೆ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಈ ಪ್ರಕರಣ ಮರುಜೀವ ಪಡೆದರೆ ಎಂಬ ಆತಂಕ ಆರೋಪಿಗಳಿಗೆ ಇರುವಂತೆ ಭಾಸವಾಗುತ್ತಿದೆ.

click me!