
ರಾಯ್‌ಪುರ್(ಜು.27): ಸಂಸಾರವೆಂಬುದು ಒಂದು ರಥವಿದ್ದಂತೆ, ಗಂಡ-ಹೆಂಡತಿ ಅದರ ಎರಡು ಚಕ್ರಗಳು. ಒಂದು ಚಕ್ರ ನಿಂತರೆ ಮತ್ತೊಂದು ಮುಂದೆ ಸಾಗಲಾರದು. ಇದು ಮದುವೆಯಾದ ನವಜೋಡಿಗೆ ನಮ್ಮ ಗುರು ಹಿರಿಯರು ಹೇಳುವ ಕಿವಿಮಾತು.
ಆದರೆ ಛತ್ತೀಸ್'ಗಡ್'ನ ಈ ದಂಪತಿ ಈ ಮಾತನ್ನು ಕೇವಲ ಸಂಸಾರಕ್ಕಷ್ಟೇ ಸೀಮಿತಗೊಳಿಸದೇ, ಆಡಳಿತ ಕ್ಷೇತ್ರಕ್ಕೂ ವಿಸ್ತರಿಸಿ ಹೊಸದೊಂದು ಮುನ್ನುಡಿ ಬರೆದಿದ್ದಾರೆ.
ಹೌದು, ಇತ್ತಿಚಿಗೆ ನಡೆದ ಛತ್ತೀಸ್'ಗಡ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜೋಡಿಯೊಂದು ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದು, ಇಡೀ ದೇಶ ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಛತ್ತೀಸ್'ಗಡ್' ಲೋಕಸೇವಾ ಆಯೋಗ ಮುಖ್ಯ ಪುರಸಭೆ ಆಡಳಿತಾಧಿಕಾರಿ ಹುದ್ದೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅನುಭವ್ ಸಿಂಗ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಅವರ ಪತ್ನಿ ವಿಭಾ ಸಿಂಗ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅನುಭವ್ ಒಟ್ಟು 298.3744 ಅಂಕ ಗಳಿಸಿದ್ದರೆ, ವಿಭಾ ಒಟ್ಟು 283.9151 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದಂಪತಿ, ಪರೀಕ್ಷೆಗಾಗಿ ಇಬ್ಬರೂ ಒಟ್ಟಿಗೆ ತಯಾರಿ ನಡೆಸಿದ್ದು, ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಅಧ್ಯಯನ ಮಾಡುತ್ತಿದ್ದೇವು ಎಂದು ಸಂತಸ ಹಂಚಿಕೊಂಡಿದ್ದಾರೆ. ಪರೀಕ್ಷೆ ಫಲಿತಾಂಶದಿಂದ ತಾವು ತುಂಬ ಸಂತುಷ್ಟರಾಗಿದ್ದು, ತಮಗೆ ದೊರೆಯಲಿರುವ ಹುದ್ದೆಯ ಮೂಲಕ ಜನರ ಸೇವೆ ಮಾಡುವುದಾಗಿ ದಂಪತಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.