ಸುಧಾಕರ್‌ ನೇಮಕಕ್ಕೆ ಬೇಕಂತಲೇ ಮಾಜಿ ಸಿಎಂ ಕುಮಾರಸ್ವಾಮಿ ಅಡ್ಡಿ!

By Web Desk  |  First Published Sep 7, 2019, 12:15 PM IST

ಸುಧಾಕರ್‌ ನೇಮಕಕ್ಕೆ ಬೇಕಂತಲೇ ಮಾಜಿ ಸಿಎಂ ಕುಮಾರಸ್ವಾಮಿ ಅಡ್ಡಿ!| ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಿಸಿದ್ದ ಪತ್ರಕ್ಕೆ ಸಹಿಯನ್ನೇ ಹಾಕಿರಲಿಲ್ಲ| ಮುಂದೆ ತೊಂದರೆಯಾಗಲಿ ಎಂದು ಹೀಗೆ ಮಾಡಿದ್ದರೇ?, ಹೊಸ ಜಿಜ್ಞಾಸೆ


ಬೆಂಗಳೂರು[ಸೆ.07]: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಗ ಕಾಂಗ್ರೆಸ್‌ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ಅವರನ್ನು ನೇಮಕ ಮಾಡುವಲ್ಲಿ ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿಯೇ ತಾಂತ್ರಿಕ ಅಡಚಣೆ ಎದುರಾಗುವಂತೆ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಸುಧಾಕರ್‌ ಅವರ ನೇಮಕ ಪತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹಿಯನ್ನೇ ಮಾಡಿರಲಿಲ್ಲ. ಆದರೂ ಸರ್ಕಾರದಿಂದ ಆದೇಶ ಹೊರಬಿದ್ದಿತ್ತು. ಯಾಕೆ ಸುಧಾಕರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ ಎಂಬುದನ್ನು ಟಿಪ್ಪಣಿ ಸಹಿತ ಬರೆಯಬೇಕಿತ್ತು. ಅದ್ಯಾವುದನ್ನೂ ಮಾಡದೆ ಇರುವುದು ಮುಂದೆ ಸುಧಾಕರ್‌ ಅವರಿಗೆ ತೊಂದರೆಯಾಗಲಿ ಎಂಬ ಉದ್ದೇಶದಿಂದ ಎಂದು ಈಗ ತಿಳಿದು ಬಂದಿದೆ.

Tap to resize

Latest Videos

ದಿಲ್ಲಿ ರೀತಿ ಬೆಂಗಳೂರು ಆಗಲು ಬಿಡಲ್ಲ : ಡಾ.ಸುಧಾಕರ್

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅಧಿಕಾರ ಹಂಚಿಕೆಯಾದ ಪ್ರಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಸುಧಾಕರ್‌ ಅವರನ್ನು ನೇಮಿಸುವಂತೆ ಕಾಂಗ್ರೆಸ್‌ ನಾಯಕರು ಕುಮಾರಸ್ವಾಮಿ ಅವರಿಗೆ ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು. ಆದರೆ, ಆ ಶಿಫಾರಸಿಗೆ ಕ್ಯಾರೆ ಎನ್ನದ ಕುಮಾರಸ್ವಾಮಿ ಅವರು ಅನೇಕ ದಿನಗಳ ಕಾಲ ಸುಧಾಕರ್‌ ಅವರನ್ನು ನೇಮಿಸಲು ಮುಂದಾಗಲಿಲ್ಲ. ಅಂತಿಮವಾಗಿ ಸುಧಾಕರ್‌ ಅವರು ಬಂಡಾಯದ ಬಾವುಟ ಹಾರಿಸುವುದು ನಿಶ್ಚಿತವಾಗುತ್ತಿದ್ದಂತೆಯೇ ಕುಮಾರಸ್ವಾಮಿ ಅವರು ನೇಮಕಕ್ಕೆ ಹಸಿರು ನಿಶಾನೆ ತೋರಿದರು.

ಅದರಂತೆ ಆದೇಶ ಹೊರಬಿದ್ದುದರಿಂದ ಸುಧಾಕರ್‌ ಅವರು ಅಧಿಕಾರ ಸ್ವೀಕರಿಸಿದರು. ಆ ವೇಳೆ ಯಾವುದೇ ತೊಂದರೆ ಉಂಟಾಗಲಿಲ್ಲ. ಮುಂದೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಘಟನೋತ್ತರ ಅನುಮೋದನೆ ಪಡೆಯಲಾಯಿತು. ಆದರೆ, ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ಅಧ್ಯಕ್ಷರನ್ನೇ ನೇಮಿಸಬಹುದು: ಹೈಕೋರ್ಟ್‌

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಗೆ ನಿಯಮಬದ್ಧ ಹಾಗೂ ಪಾರದರ್ಶಕವಾಗಿ ಹಾಲಿ ಅಧ್ಯಕ್ಷರನ್ನೇ ನೇಮಕ ಮಾಡಬಹುದು ಎಂದು ಹೈಕೋರ್ಟ್‌ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾ.ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ಪೀಠ, ಅಗತ್ಯವಿದ್ದಲ್ಲಿ ಹಾಲಿ ಅಧ್ಯಕ್ಷರನ್ನೇ ನೇಮಕ ಮಾಡಬಹುದು. ಆದರೆ ಅದು ಪಾರದರ್ಶಕ ಮತ್ತು ನಿಯಮ ಬದ್ಧವಾಗಿರಬೇಕು ಎಂದು ಹೇಳಿತು.

ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಸುಧಾಕರ್‌ ಆವರ ನೇಮಕ ಆದೇಶಕ್ಕೆ ಅನುಮೋದನೆ ನೀಡುವ ಪ್ರಕ್ರಿಯೆ ನಡೆಸಲಾಗಿದೆ. ಈ ಪ್ರಕ್ರಿಯೆ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಸುಧಾಕರ್‌ ನೇಮಕಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿದಾಗ ಜೂ.20ರಂದು ಅವರ ನೇಮಕ ನಡೆದಿದೆ. ಆನಂತರ ಸೆ.3ರಂದು ಅದಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ನ್ಯಾಯಪೀಠ ಹೇಳಿತು.

ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದಾಗ ಕೆ.ಸುಧಾಕರ್‌ ನೇಮಕಕ್ಕೆ ಘಟನೋತ್ತರ ಅನುಮೋದನೆ ಪಡೆದಿರುವುದು ಸರಿಯಾದ ಕ್ರಮವಲ್ಲ. ಆ ಕುರಿತು ವಿವರಣೆ ನೀಡಬೇಕು ಮತ್ತು ಸೆ.20ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

click me!