ದಿಲ್ಲಿ ರೀತಿ ಬೆಂಗಳೂರು ಆಗಲು ಬಿಡಲ್ಲ : ಡಾ.ಸುಧಾಕರ್

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಡಾ.ಕೆ. ಸುಧಾಕರ್‌ ಕೊನೆಗೂ ಅಧಿಕಾರ ವಹಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಮುಂದಿನ ಕಾರ್ಯಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. 

Pollution Control Board President Sudhakar Interview

ಬೆಂಗಳೂರು [ಜೂ.21] :  ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಹೊರತಾಗಿಯೂ ಕಳೆದ ಐದೂವರೆ ತಿಂಗಳಿಂದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಡಾ.ಕೆ. ಸುಧಾಕರ್‌ ಕೊನೆಗೂ ಅಧಿಕಾರ ವಹಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಬಳಿಕ ರಾಜಕೀಯ ಪ್ರವೇಶಿಸಿದ ಸುಧಾಕರ್‌ ಅವರಿಗೆ ತಾಂತ್ರಿಕ ವಿದ್ಯಾರ್ಹತೆ ಇಲ್ಲ ಎಂಬ ಕಾರಣ ನೀಡಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ದೂರವಿಡಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ಅರುಣಾಚಲ ಪ್ರದೇಶ ಸರ್ಕಾರ ರೂಪಿಸಿದ್ದ ನಿಯಮಾವಳಿ ಮುಂದು ಮಾಡಿ ತಾನು ಎಲ್ಲಾ ರೀತಿಯಲ್ಲೂ ಹುದ್ದೆಗೆ ಅರ್ಹ ಎಂದು ವಾದಿಸಿದ್ದರು. ಇದೀಗ ಅಧಿಕಾರ ಸ್ವೀಕರಿಸಿರುವ ಅವರು ರಾಜ್ಯದ ಪರಿಸರ ಸಂರಕ್ಷಣೆಗೆ ತಮ್ಮ ಮುಂದಿನ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬೆಂಗಳೂರು ದೆಹಲಿಯಂತೆ ಮಾಲಿನ್ಯ ನಗರಿ ಆಗಬಾರದು. ಅದನ್ನು ತಡೆಯುವುದೇ ಮುಖ್ಯ ಗುರಿ. ಅಲ್ಲದೆ, ಇದೊಂದು ಸುವರ್ಣಾವಕಾಶ ಎಂದು ತಿಳಿದು ಕರ್ನಾಟಕದ ಇತಿಹಾಸದ ಪುಟದಲ್ಲಿ ಬಿಟ್ಟು ಹೋಗುವ ಕೆಲಸ ಮಾಡಬೇಕು ಎಂಬ ಅಚಲ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

* ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿರುವ ಬಗ್ಗೆ ಏನು ಅನಿಸುತ್ತಿದೆ?

ಇದು ಅಧಿಕಾರ ಎನ್ನುವುದಕ್ಕಿಂತ ದೊಡ್ಡ ಜವಾಬ್ದಾರಿ. ಸಾರ್ವಜನಿಕ ಬದುಕಿಗೆ ಬಂದು 11 ವರ್ಷ. ಮೊದಲ ಬಾರಿಗೆ ಪತ್ನಿ ನನ್ನ ಜತೆಗೆ ಸಾರ್ವಜನಿಕವಾಗಿ ಕುಳಿತಿದ್ದಾರೆ. ನಾನು ಮಂಡಳಿ ಅಧ್ಯಕ್ಷನಾಗುತ್ತೇನೆ ಎಂದಿಗೂ ಎಂದುಕೊಂಡಿರಲಿಲ್ಲ. ಅಪೇಕ್ಷೆಯೂ ಪಟ್ಟಿರಲಿಲ್ಲ. ವೃತ್ತಿಯಲ್ಲಿ ವೈದ್ಯನಾಗಿದ್ದೆ, 15 ಸಾವಿರ ಉದ್ಯೋಗಿಗಳ ಕಂಪನಿಯಲ್ಲಿ ಉಪಾಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಇಂದು ಆ ಕಂಪನಿ ಏಷ್ಯಾ ಖಂಡದಲ್ಲೇ ಅತ್ಯಂತ ಶ್ರೀಮಂತ ಕಂಪನಿ. ಎರಡು ಸಲ ಭಾರಿ ಅಂತರದಿಂದ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನಾನು ಈ ಹುದ್ದೆ ಬಯಸಿರಲಿಲ್ಲ. ಅಪೇಕ್ಷೆಯೂ ಇರಲಿಲ್ಲ. ಇದೀಗ ಇದೊಂದು ಸುವರ್ಣಾವಕಾಶ ದೊರೆತಿದೆ. ಇಂತಹ ಅವಕಾಶ ಬಳಸಿಕೊಂಡು ಇತಿಹಾಸ ಪುಟದಲ್ಲಿ ನಿಲ್ಲುವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ.

* ಮಂಡಳಿ ಅಧ್ಯಕ್ಷರಾಗಿ ನಿಮ್ಮ ತಕ್ಷಣದ ಗುರಿ ಏನು?

ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮುಖ ಕೆಲಸ ಬೆಂಗಳೂರನ್ನು ದೆಹಲಿ ಆಗದಂತೆ ತಡೆಯುವುದು. ಉದ್ಯಾನ ನಗರಿಯಲ್ಲಿ ಉದ್ಯಾನ ಕಳಚಿ ಹೋಗಿದೆ. ದೆಹಲಿಯಾಗುವತ್ತ ಬೆಂಗಳೂರು ಸಾಗುತ್ತಿದೆ. ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಉಸಿರಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಶ್ವಾಸಕೋಶದ ಅನೇಕ ರೋಗಗಳಿಗೆ ಅಲ್ಲಿನ ಜನ ತುತ್ತಾಗುತ್ತಿದ್ದಾರೆ. ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಇಂತಹ ಸಮಸ್ಯೆಯಾಗದಂತೆ ತಡೆಯಬೇಕಿದೆ.

* ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನಿಮ್ಮ ಭವಿಷ್ಯದ ಯೋಜನೆಗಳು ಏನು?

21ನೇ ಶತಮಾನದಲ್ಲಿ ದೊಡ್ಡ ಜವಾಬ್ದಾರಿ ಯಾವುದಾದರೂ ಇದ್ದರೆ ಅದು ಪರಿಸರ ಸಂರಕ್ಷಣೆ. ಪರಿಸರ ಸಂರಕ್ಷಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರವನ್ನು ಸಮರ್ಥವಾಗಿ ಪೋಷಿಸಬೇಕಿದೆ. ಪ್ರಕೃತಿಯನ್ನು ಹಸಿರಾಗಿಡುವುದು. ಪರಿಸರ ಕಾಪಾಡುವುದು. ನೀರನ್ನು ಶುದ್ಧವಾಗಿಡುವುದು ನಮ್ಮ ಹೊಣೆಗಾರಿಕೆ. ರಾಜ್ಯದಲ್ಲಿ ಉತ್ತಮ ಪರಿಸರ ಸೃಷ್ಟಿಸಲು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ಮಾತ್ರವೇ ಸಾಧ್ಯವಾಗುವುದಿಲ್ಲ. ಅದಕ್ಕೆ ಇಡೀ ರಾಜ್ಯದ ಜನತೆ ಒಂದು ತಂಡವಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಒಗ್ಗೂಡಿಸಿ ಕೆಲಸ ಮಾಡುವುದು ನಮ್ಮ ಮುಂದಿರುವ ಭವಿಷ್ಯದ ಯೋಜನೆ.

* ನಿಮ್ಮ ಪ್ರಕಾರ ಪರಿಸರ ಹಾಳಾಗಲು ಪ್ರಮುಖ ಕಾರಣವೇನು?

ಪರಿಸರ ಮತ್ತು ಮನುಷ್ಯ ಒಂದು ನಿಕಟ ಸಂಬಂಧ. ಇದೀಗ ಮನುಷ್ಯನಿಗಾಗಿ ಪರಿಸರ ಹಾಳಾಗುತ್ತದೆ. ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯನ ಬೇಡಿಕೆಗಳು ಹೆಚ್ಚಾಗುತ್ತಿವೆ. ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯ ನಿರ್ಮಾಣದ ಹೆಸರಿನಲ್ಲಿ ಪರಿಸರ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಗಾಳಿ ಕಲುಷಿತ ಆಗಿದೆ. ಕುಡಿಯಲು ನೀರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ತಿಂಗಳಿಂದ ಜಯರಾಂ ಅವರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

* ಈ ಹಿಂದೆ ಸಮ್ಮಿಶ್ರ ಸರ್ಕಾರದ ಬಗ್ಗೆ ನೀವೇ ಅಸಮಾಧಾನ ವ್ಯಕ್ತಪಡಿಸಿದ್ದಿರಿ?

ಅಸಮಾಧಾನ ಏನೂ ಇಲ್ಲ. ರಾಜಕಾರಣಿಯಾದವರು ಅಧಿಕಾರ ಬಯಸುವುದು ತಪ್ಪಲ್ಲ. ಮೈತ್ರಿ ಸರ್ಕಾರ ಇದ್ದಾಗ ಅವಕಾಶಗಳು ವಿಂಗಡನೆಯಾಗುತ್ತವೆ. ನಾವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಅತೃಪ್ತಿ ಇರುತ್ತದೆ. ಸಾಕಷ್ಟುಜನ ಸಮರ್ಥರು ಇರುತ್ತಾರೆ. ಹೀಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸ್ಥಾನಕ್ಕೆ ಮೊದಲೇ ನನ್ನನ್ನು ಆಯ್ಕೆ ಮಾಡಲಾಗಿತ್ತು. ಈಗ ಅವಕಾಶ ಸಿಕ್ಕಿದೆ.

Latest Videos
Follow Us:
Download App:
  • android
  • ios