ರೈತರಿಗೆ 6000 ನೀಡಲು ನರೇಗಾ ದುರ್ಬಳಕೆ: ಸಿಎಂ ಆರೋಪ

By Web DeskFirst Published Mar 7, 2019, 2:00 PM IST
Highlights

ರೈತರಿಗೆ .6000 ನೀಡಲು ನರೇಗಾ ದುರ್ಬಳಕೆ: ಸಿಎಂ| ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿಗೆ ಚುನಾವಣೆ ಬಂದಾಕ್ಷಣ ರೈತರ ನೆನಪು| ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಕುಮಾರಸ್ವಾಮಿ ಆರೋಪ

ಬೆಂಗಳೂರು[ಮಾ.07]: ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಕಾರಣಕ್ಕಾಗಿ ಹಠಾತ್ತನೆ ರೈತರನ್ನು ನೆನೆದು ‘ಕಿಸಾನ್‌ ಸಮ್ಮಾನ್‌ ನಿಧಿ’ ಅಡಿ 6 ಸಾವಿರ ರು. ಹಣ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ 24,000 ಕೋಟಿ ರು. ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ನರೇಗಾ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೃಷಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕೃಷಿ ಪಂಡಿತ’ ಹಾಗೂ ‘ಕೃಷಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಚುನಾವಣೆ ಹೊಸ್ತಿಲಲ್ಲಿ ರೈತನಿಗೆ ಪ್ರತಿ ವರ್ಷ 6 ಸಾವಿರ ನೀಡುವುದಾಗಿ ಹೇಳಿದ್ದಾರೆ. ಪ್ರಸ್ತುತ 1 ಕೋಟಿ ರೈತರಿಗೆ ಮಾತ್ರ ತಲಾ 2 ಸಾವಿರ ರು. ನೀಡಿದ್ದಾರೆ. ನರೇಗಾ ಯೋಜನೆಯಡಿ ನೀಡಬೇಕಾಗಿದ್ದ 24 ಸಾವಿರ ಕೋಟಿ ರು.ಗಳನ್ನು ನೀಡದೆ ಈ ಹಣವನ್ನು ಕಿಸಾನ್‌ ಸಮ್ಮಾನ್‌ ನಿಧಿಗೆ ಬಳಸಿಕೊಂಡಿದ್ದಾರೆ.

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರಾಜ್ಯದ 47 ಲಕ್ಷ ರೈತರಿಗೆ 2098 ಕೋಟಿ ರು. ಹಣ ಬರಲಿದೆ. ಆದರೆ, ನಾವು ರಾಜ್ಯದ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹದ ರೂಪದಲ್ಲೇ 2,500 ಕೋಟಿ ರು. ನೀಡುತ್ತಿದ್ದೇವೆ. ಜತೆಗೆ ಉಚಿತ ವಿದ್ಯುತ್‌ಗೆ 11,500 ಕೋಟಿ ರು. ಸಬ್ಸಿಡಿ ನೀಡುತ್ತೇವೆ. ನರೇಂದ್ರ ಮೋದಿ 2 ಸಾವಿರ ಕೋಟಿ ರು. ನೀಡಿದರೆ ನಾವು 16 ಸಾವಿರ ಕೋಟಿ ರು. ನೀಡುತ್ತಿದ್ದೇವೆ. ಜತೆಗೆ 40 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದೇವೆ. ಆದರೆ, ನರೇಂದ್ರ ಮೋದಿ 70 ವರ್ಷದಲ್ಲಿ ಆಗದಿರುವುದನ್ನು 60 ತಿಂಗಳಲ್ಲಿ ಎಲ್ಲಾ ಮಾಡಿ ಮುಗಿಸಿದ್ದೇನೆ ಎಂದು ಭಾಷಣ ಮಾತ್ರ ಚೆನ್ನಾಗಿ ಮಾಡುತ್ತಾರೆ. 60 ತಿಂಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಹೇಳಿದರು.

ಕಾರ್ಯಕ್ರದಮದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಚಿವರಾದ ಸಾ.ರಾ. ಮಹೇಶ್‌, ರಹೀಮ್‌ ಖಾನ್‌, ಪಿ.ಟಿ. ಪರಮೇಶ್ವರ ನಾಯಕ್‌, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿವಿ ಕುಲಪತಿಗಳು ಹಾಜರಿದ್ದರು.

click me!