ಜೆಡಿಎಸ್ ನಲ್ಲಿ ಮಂತ್ರಿಗಿರಿಗಾಗಿ ಮೂಡಿದೆಯಾ ಅಸಮಾಧಾನ..?

First Published Jun 5, 2018, 7:37 AM IST
Highlights

ಮಿತ್ರ ಪಕ್ಷ ಕಾಂಗ್ರೆಸ್ಸಿಗೆ ಹೋಲಿಸಿದರೆ ಜೆಡಿಎಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಷ್ಟಾಗಿ ತಿಕ್ಕಾಟ, ಗೊಂದಲ ಇಲ್ಲದಿದ್ದರೂ ಸಂಭವನೀಯ ಅಸಮಾಧಾನವನ್ನು ಹೋಗಲಾಡಿಸಲು ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇ ಗೌಡರು ಪ್ರಯತ್ನ ಮಾಡುತ್ತಿದ್ದಾರೆ.

ಬೆಂಗಳೂರು :  ಮಿತ್ರ ಪಕ್ಷ ಕಾಂಗ್ರೆಸ್ಸಿಗೆ ಹೋಲಿಸಿದರೆ ಜೆಡಿಎಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಷ್ಟಾಗಿ ತಿಕ್ಕಾಟ, ಗೊಂದಲ ಇಲ್ಲದಿದ್ದರೂ ಸಂಭವನೀಯ ಅಸಮಾಧಾನವನ್ನು ಹೋಗ ಲಾಡಿಸಲು ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇ ಗೌಡರು ಪ್ರಯತ್ನ ಮಾಡುತ್ತಿದ್ದಾರೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದ ಗೌಡರು, ವಿಚಿತ್ರ ಸನ್ನಿವೇಶದಲ್ಲಿ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಸಚಿವ ಸ್ಥಾನದ ಗೊಂದಲದಿಂದಾಗಿ ಇದನ್ನು ಕಳೆದುಕೊಳ್ಳುವಂತಾಗಬಾರದು ಎಂಬ ಕಿವಿಮಾತನ್ನು ಶಾಸಕರಿಗೆ ಹೇಳಿದ್ದಾರೆ.

ನಮ್ಮ ಬಲ 37 ಆಗಿದ್ದರೂ ಸಚಿವ ಸ್ಥಾನ ಸಿಕ್ಕಿರುವುದು ಕೇವಲ 11. ಹೀಗಾಗಿ, ಹಿರಿತನದ ಜೊತೆಗೆ ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಯಾರಿಗೆ ಸಿಕ್ಕರೂ ಇನ್ನುಳಿದವರು ಬೇಸರ ಪಟ್ಟುಕೊಳ್ಳುವುದು ಬೇಡ. ಇನ್ನುಳಿದ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಹಾಗೂ ಸಂಸದೀಯ ಕಾರ್ಯದರ್ಶಿ ಸ್ಥಾನಗಳನ್ನು ನೀಡುವ ಮೂಲಕ ಪ್ರಾತಿನಿಧ್ಯ ಕಲ್ಪಿಸ ಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟು ಹನ್ನೊಂದು ಸಚಿವ ಸ್ಥಾನಗಳ ಪೈಕಿ ಕನಿಷ್ಠ ಒಂದು ಸ್ಥಾನವನ್ನಾದರೂ ಖಾಲಿ ಉಳಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿರುವ ಗೌಡರು ಈ ಅಂಶವನ್ನು ಸಭೆಯಲ್ಲಿ ಪ್ರಸ್ತಾಪಿಸಿದರಾದರೂ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಶಾಸಕರು ದೇವೇಗೌಡರಿಗೆ ನೀಡಿದರು. ಹೀಗಾಗಿ ಮಂಗಳವಾರ ಈ ಸಂಬಂಧ ಮತ್ತೊಮ್ಮೆ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಒಕ್ಕಲಿಗ, ವೀರಶೈವ ಲಿಂಗಾಯತ, ಇತರ ಹಿಂದುಳಿದ ವರ್ಗ, ಪರಿಶಿಷ್ಟಜಾತಿ ಮತ್ತು ಮುಸ್ಲಿಂ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಲವು ಹೊಂದಿದ್ದಾರೆ.

ಒಕ್ಕಲಿಗ ಸಮುದಾಯದಿಂದ ಎಚ್‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಸಿ.ಎಸ್‌.ಪುಟ್ಟರಾಜು ಹಾಗೂ ಸತ್ಯನಾರಾಯಣ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿ ವೀರಶೈವ ಲಿಂಗಾಯತ ಸಮುದಾಯದಿಂದ ಬಸವರಾಜ ಹೊರಟ್ಟಿಅವರಿಗೆ ಖಚಿತವಾಗಿದೆ. ಇನ್ನುಳಿದ ಒಂದು ಸ್ಥಾನಕ್ಕೆ ವೆಂಕಟರಾವ್‌ ನಾಡಗೌಡ ಹಾಗೂ ಎಂ.ಸಿ.ಮನುಗೂಳಿ ಅವರ ಪೈಕಿ ಒಬ್ಬರನ್ನು ಪರಿಗಣಿಸಲಾಗುತ್ತದೆ. ಇತರ ಹಿಂದುಳಿದ ವರ್ಗದ ಪರವಾಗಿ ಕುರುಬ ಸಮುದಾಯಕ್ಕೆ ಸೇರಿದ ಎಚ್‌.ವಿಶ್ವನಾಥ್‌ ಮತ್ತು ಬಂಡೆಪ್ಪ ಕಾಶೆಂಪೂರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಪಕ್ಕಾ ಆಗಿದೆ ಎಂದು ತಿಳಿದು ಬಂದಿದೆ.

ಪರಿಶಿಷ್ಟಜಾತಿ ಪ್ರಾತಿನಿಧ್ಯವಾಗಿ ಮಿತ್ರಪಕ್ಷ ಬಿಎಸ್‌ಪಿಯ ಎನ್‌.ಮಹೇಶ್‌ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಪಕ್ಷದಿಂದ ಡಾ.ಅನ್ನದಾನಿ ಅಥವಾ ಎಚ್‌.ಕೆ.ಕುಮಾರಸ್ವಾಮಿ ಅವರ ಪೈಕಿ ಒಬ್ಬರಿಗೂ ಅವಕಾಶ ಸಿಗುವ ನಿರೀಕ್ಷೆಯಿದೆ. ಮುಸ್ಲಿಂ ಸಮುದಾಯದಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿರುವ ಬಿ.ಎಂ.ಫಾರೂಕ್‌ ಅವರಿಗೆ ಅವಕಾಶ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

click me!