
ಬೆಂಗಳೂರು (ಏ. 24): ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2018-19ನೇ ಶೈಕ್ಷಣಿಕ ಸಾಲಿಗೆ ಆದಷ್ಟುಬೇಗ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸೋಮವಾರ ಹೈಕೋರ್ಟ್ ಮೌಖಿಕವಾಗಿ ನಿರ್ದೇಶಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಲು ನಿರ್ದೇಶಿಸಿದ ಏಕದಸ್ಯ ಪೀಠದ ತೀರ್ಪು ಪ್ರಶ್ನಿಸಿ ಯುಜಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಸೋಮವಾರ ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ವಿಶ್ವವಿದ್ಯಾಲಯವು 2018-19ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಯುಜಿಸಿಯು ಆದಷ್ಟುಬೇಗ ಕಾನೂನು ಪ್ರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದಾಗಿ ನ್ಯಾಯಾಲಯವು ನಿರೀಕ್ಷೆ ಹೊಂದಿದೆ ಎಂದು ಲಿಖಿತವಾಗಿ ತಿಳಿಸಿತು. ನಂತರ ಅರ್ಜಿ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಯುಜಿಸಿ ಪರ ವಕೀಲರಾದ ಕ್ಯಾಪ್ಟನ್ ಅರವಿಂದ ಶರ್ಮಾ ವಾದ ಮಂಡಿಸಿ, ಕೆಎಸ್‌ಒಯು 2018-19ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದೆ. ಅದನ್ನು ಮೆರಿಟ್ ಮೇಲೆ ಪರಿಶೀಲಿಸಲಾಗುವುದು. ಆ ವೇಳೆ ವಿಶ್ವವಿದ್ಯಾಲಯಕ್ಕೆ ಈ ಹಿಂದೆ ಮಾನ್ಯತೆ ಇರಲಿಲ್ಲ ಎಂಬ ಅಂಶಗಳನ್ನು ಪರಿಗಣಿಸಲಾಗದು. ಈ ಕುರಿತು ವಿಶ್ವವಿದ್ಯಾಲಯ ಭಯ ಪಡುವುದು ಬೇಡ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠವು ಯುಜಿಸಿಗೆ ಮೇಲಿನಂತೆ ನಿರ್ದೇಶಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.