ಅಮೆರಿಕದಲ್ಲಿ ಸಂಭ್ರಮದ ಹವ್ಯಕ ಸಮ್ಮೇಳನ

By Suvarna Web DeskFirst Published Jul 8, 2017, 3:15 PM IST
Highlights

ಅಮೆರಿಕದ ಇಲಿನಾಯ್ಸ್'ನ ಗ್ರೇಸ್'ಲೇಕ್'(Grayslake)ನಲ್ಲಿ ನಡೆದ 2 ದಿನಗಳ ಸಮಾವೇಶ | ಹವ್ಯ ಕನ್ನಡಿಗರ ಸಾಂಸ್ಕೃತಿಕ ಸಡಗರ | ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕಾಸ್ ದ್ವೈವಾರ್ಷಿಕ ಸಮ್ಮೇಳನ | ಕೆನಡಾದ ಟೊರಾಂಟೋದಲ್ಲಿ ಮುಂದಿನ ಸಮ್ಮೇಳನ.

ಶಿಕಾಗೋ: ಅಮೆರಿಕ ಖಂಡದಲ್ಲಿ ನೆಲೆಸಿರುವ ಹವ್ಯಕ ಸಮುದಾಯವನ್ನು ಪ್ರತಿನಿಸುವ ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕಾಸ್‌ನ (HAA) ದ್ವೈವಾರ್ಷಿಕ ಸಮ್ಮೇಳನ ಇತ್ತೀಚೆಗೆ ಇಲಿನಾಯ್ಸ್ ರಾಜ್ಯದ ಶಿಕಾಗೋ ಮಹಾನಗರದ ಗ್ರೇಸ್‌'ಲೇಕ್'ನಲ್ಲಿ ಜರುಗಿತು. ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನ ಹವ್ಯಕ ಸಂಸ್ಕೃತಿ ವಿನಿಮಯ, ಕನ್ನಡ ನಾಡು-ನುಡಿ, ಕಲೆ ಮತ್ತಿತರ ಕಾರ್ಯಕ್ರಮಗಳಿಗೆ ಮುಡಿಪಾಗಿತ್ತು.

(ಹವ್ಯಕ ಸಮ್ಮೇಳನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.)

ಅಮೆರಿಕ, ಕೆನಡಾ ದೇಶಗಳಿಂದ ಬಂದು ಸೇರಿದ್ದ ಕುಟುಂಬಗಳು ಸಮ್ಮೇಳನದ ಪ್ರಥಮ ದಿನವಾದ ಜು.1ರಂದು ಮೊದಲಿಗೆ ಹವ್ಯಕ ಸಮಾಜದ ವಿಚಾರ ವಿನಿಮಯ ಮಾಡಿಕೊಂಡರು. ಸಂಜೆ ಗಣಪತಿ ಮೆರವಣಿಗೆ ಬಳಿಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಿಕಾಗೋ ಹವ್ಯಕ ಅಧ್ಯಾಯದ ಅಧ್ಯಕ್ಷರೂ ಆದ ‘ಹಾ’ ನೇತೃತ್ವ ವಹಿಸಿದ್ದ ಅನಿಲ್ ಅಡ್ಕೊಳಿ ಹಾಗೂ ಸುಜಾತಾ ದಂಪತಿ ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು. ಇದೇ ವೇಳೆ, ಸಮ್ಮೇಳನದ ನೆನಪಿಗಾಗಿ ‘ಹವ್ಯಕೋತ್ಸವ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸದಸ್ಯರಾದ ಶಂಕರ್ ಹೆಗಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳೀಧರ ಕಜೆ, ಬಾಲ ಪಲಮಡೈ, ಸಚಿನ್, ಕೃಷ್ಣಮೂರ್ತಿ ಗುಡೆಹಿತ್ಲು, ರಾಮಮೂರ್ತಿ ಬೆಳಗಜೆ, ಶಿಶಿರ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಅನಿಲ್ ಅಡ್ಕೊಳಿ, ಅಮೆರಿಕ ಖಂಡದಾದ್ಯಂತ ನೂರಾರು ಹವ್ಯಕ ಕುಟುಂಬಗಳಿವೆ. ಆರಂಭದಲ್ಲಿ 2-3 ಹವ್ಯಕ ಸಂಘಗಳಿದ್ದವು. ಈಗ ಅದರ ಸಂಖ್ಯೆ 17ಕ್ಕೇರಿದೆ. ಹೀಗೆ, ಹವ್ಯಕ ಸಮಾಜ ಸಂಘಟನೆಯ ಸ್ವರೂಪ ಪಡೆದಿರುವುದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

(ಹವ್ಯಕ ಸಮ್ಮೇಳನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.)

ಸಾಂಸ್ಕೃತಿಕ ಕಾರ್ಯಕ್ರಮ: ಇದಾದ ನಂತರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಸುಗಮ ಸಂಗೀತ, ಹಿನ್ನೆಲೆ ಗಾಯಕಿ ನಾಗಚಂದ್ರಿಕಾ ಭಟ್ ತಮ್ಮ ಗೀತವೈವಿಧ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ‘ಚಿತ್ರಮಂಜರಿ’ ಕಾರ್ಯಕ್ರಮದಲ್ಲಿ ಸುಶ್ರಾವ್ಯ ಕನ್ನಡ ಹಾಗೂ ಹಿಂದಿ ಗೀತೆಗಳನ್ನು ಹಾಡುವ ಮೂಲ ಶ್ರೋತೃಗಳನ್ನು ಭಾರತದ ದಕ್ಷಿಣಾದಿಯಾಗಿ ಉತ್ತರದವರೆಗಿನ ಸಂಗೀತದ ರದಸೌತಣ ನೀಡಿದರು. ಬಳಿಕ ಡಾ. ಪರಮೇಶ್ವರ ಭಟ್ ಮಾರ್ಗದರ್ಶನದಲ್ಲಿ ಟೊರಾಂಟೋದ ‘ಯಕ್ಷಮಿತ್ರ ಮಂಡಳಿ’ಯಿಂದ ‘ಸುಭದ್ರ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

(ಹವ್ಯಕ ಸಮ್ಮೇಳನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.)

ಅಂತಿಮ ದಿನ ಯುವ ಪ್ರತಿಭೆಗಳಿಂದ ಕಲಾ-ವಿಜ್ಞಾನ ಪ್ರದರ್ಶನ, ಕರ್ನಾಟಕ ಶಾಸೀಯ ಸಂಗೀತ, ಭರತನಾಟ್ಯ, ಭಗವದ್ಗೀತೆ, ಕೊಡವ ನೃತ್ಯ, ಭಾವಗೀತೆ, ಚಿತ್ರಗೀತೆ, ನಾಟಕ, ನೃತ್ಯ ರೂಪಕ, ಸಮೂಹ ನೃತ್ಯ, ಮಿಮಿಕ್ರಿ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆಯಾಗಿತ್ತು. ಟೊರಾಂಟೋದ ವಿನಾಯಕ ಹೆಗಡೆ ಮಾರ್ಗದರ್ಶನದಲ್ಲಿ ‘ಯುವ ಸ್ವರಸಮ್ಮೇಳನ’ (ಯೂಥ್ ಸಿಂಫನಿ) ಕಾರ್ಯಕ್ರಮ ನಡೆಯಿತು. ಅಮೆರಿಕದ ವಿವಿಧೆಡೆ ನೆಲೆಸಿರುವ ಹವ್ಯಕ ಮಕ್ಕಳನ್ನು ಗೂಗಲ್ ಹ್ಯಾಂಗೌಟ್ ಮೂಲಕ ವಾರಕ್ಕೆ ಎರಡು ದಿನದಂತೆ ಅವಿರತ ಶ್ರಮಪಟ್ಟು ತರಬೇತುಗೊಳಿಸಿ ಪ್ರಸ್ತುತಪಡಿಸಿದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

(ಹವ್ಯಕ ಸಮ್ಮೇಳನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.)

ಸಂಜೆ ಪ್ರಸಿದ್ಧ ಗಾಯಕಿ ಎಂ.ಡಿ. ಪಲ್ಲವಿ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಯಾವ ಮೋಹನ, ನಾಕು ತಂತಿ, ದೀಪವು ನಿನ್ನದೆ, ಎದೆ ತುಂಬಿ... ಗೀತೆಗಳ ಮೂಲಕ ಸಭಿಕರನ್ನು ಭಾವಲೋಕಕ್ಕೆ ಕರೆದೊಯ್ದರು. ಖ್ಯಾತ ಡ್ರಮ್ಸ್ ವಾದಕ ಅರುಣ್ ಕುಮಾರ್ ತಮ್ಮ ವಾದನದ ಮೂಲಕ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು.

ದೇಶೀ ಖಾದ್ಯ, ಆಟ: ಸಮ್ಮೇಳನದ ಸಂದರ್ಭದಲ್ಲಿ ಕ್ರಿಕೆಟ್ ವಾಲಿಬಾಲ್, ಕ್ರಿಕೆಟ್ ಮತ್ತಿತರ ಆಟೋಟಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ವದೇಶಿ ಖಾದ್ಯಗಳನ್ನು ಅತಿಥಿಗಳಿಗಾಗಿ ಆಯೋಜಕರು ವ್ಯವಸ್ಥೆ ಮಾಡಿದ್ದರು.

ಕೆನಡಾದಲ್ಲಿ ಮುಂದಿನ ಸಮ್ಮೇಳನ:
ಇದೇ ವೇಳೆ, ಮುಂದಿನ ‘ಹಾ’ ಸಮ್ಮೇಳನವನ್ನು 2019ರಲ್ಲಿ ನಡೆಸಲು ನಿರ್ಧರಿಸಲಾಯಿತು. ಟೊರಾಂಟೋ ಹವ್ಯಕ ಬಳಗದ ಡಾ. ಪರಮೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮಾಹಿತಿ: ಅಂಜಲಿ ಶರ್ಮ
epaper.kannadaprabha.in

(ಹವ್ಯಕ ಸಮ್ಮೇಳನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.)

click me!