ಹಾಸನದ ಅಜ್ಜ ಅಸ್ಸಾಂನಲ್ಲಿ ಪತ್ತೆ! ಆತಂಕ ಸೃಷ್ಟಿಸುತ್ತಿರುವ ಪ್ರಕರಣ

By Web DeskFirst Published Oct 28, 2018, 9:23 AM IST
Highlights

ಹಾಸನ ತಾಲೂಕು ಕಟ್ಟಾಯ ಹೋಬಳಿ ಕಾರ್ಲೆ ಗ್ರಾಮದ ವೃದ್ಧರೊಬ್ಬರು ಅಸ್ಸಾಂನ ಗುವಾಹಟಿಯಲ್ಲಿ ಪತ್ತೆಯಾಗಿದ್ದಾರೆ! ಅಜ್ಜನ ಬಳಿಯಿದ್ದ ಆಧಾರ್‌ ಕಾರ್ಡ್‌ನಿಂದಾಗಿ ಗುರುತು, ವಿಳಾಸ ಪತ್ತೆಯಾಗಿದೆ

ಹಾಸನ :  ಹಾಸನ ತಾಲೂಕಿನ ಚಿಕ್ಕ ಮಂಡಿಗನಹಳ್ಳಿಯಿಂದ ಸುಮಾರು 18 ತಿಂಗಳ ಹಿಂದೆ ಕಾಣೆಯಾಗಿ, ಕೆಲ ದಿನಗಳ ಹಿಂದಷ್ಟೇ ದೂರದ ಅಸ್ಸಾಂನ ಗಡಿಯಲ್ಲಿ ಪತ್ತೆಯಾಗಿದ್ದ ಹಿರಿಯಜ್ಜಿ ಪ್ರಕರಣದ ಬೆನ್ನಲ್ಲೇ ಈಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ತಾಲೂಕು ಕಟ್ಟಾಯ ಹೋಬಳಿ ಕಾರ್ಲೆ ಗ್ರಾಮದ ವೃದ್ಧರೊಬ್ಬರು ಅಸ್ಸಾಂನ ಗುವಾಹಟಿಯಲ್ಲಿ ಪತ್ತೆಯಾಗಿದ್ದಾರೆ! ಅಜ್ಜನ ಬಳಿಯಿದ್ದ ಆಧಾರ್‌ ಕಾರ್ಡ್‌ನಿಂದಾಗಿ ಗುರುತು, ವಿಳಾಸ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಅಂತರದಲ್ಲಿ ಹಾಸನದ ಇಬ್ಬರು ವಯೋವೃದ್ಧರು ದೂರದ ಅಸ್ಸಾಂನಲ್ಲಿ ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕ, ಅಚ್ಚರಿಗೆ ಕಾರಣವಾಗಿದೆ.

ಹಾಸನ ತಾಲೂಕಿನ ಚಿಕ್ಕ ಮಂಡಿಗನಹಳ್ಳಿಯಿಂದ 18 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಜಯಮ್ಮ(70) ಅಸ್ಸಾಂ ರಾಜ್ಯದ ಬಾಂಗ್ಲಾದೇಶದ ಗಡಿಗೆ ಹೊಂದಿರುವ ಕರೀಂಗಂಜ್‌ ಜಿಲ್ಲೆಯಲ್ಲಿ ಪತ್ತೆಯಾಗಿದ್ದರು. ಭಾಷೆ ಗೊತ್ತಿಲ್ಲದೆ ಪರದಾಟ ಅನುಭವಿಸುತ್ತಿದ್ದ ಜಯಮ್ಮರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ರಕ್ಷಿಸಿ ನಂತರ ವಾಪಸ್‌ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಈಗ ಅಸ್ಸಾಂ ಪೊಲೀಸರು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಜಿಲ್ಲೆಯ ಮತ್ತೊಂದು ಹಿರಿ ಜೀವ ಪುಟ್ಟಸ್ವಾಮಯ್ಯ ಅವರನ್ನು ಪತ್ತೆ ಹಚ್ಚಿ ಆರೈಕೆ ಮಾಡುತ್ತಿದ್ದಾರೆ.

ಆರೆಸ್ಸೆಸ್‌ ನೆರವು:

ಸರಿಯಾಗಿ ಊಟ, ವಸತಿ ಹಾಗೂ ಆರೈಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಪುಟ್ಟಸ್ವಾಮಯ್ಯ ಶುಕ್ರವಾರ ಅಸ್ಸಾಂ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಪುಟ್ಟಸ್ವಾಮಯ್ಯರಿಂದ ವಿವರ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ, ಈ ಹಿರಿಯ ಜೀವಕ್ಕೆ ಕನ್ನಡ ಬಿಟ್ಟರೆ ಅನ್ಯ ಭಾಷೆ ಬಾರದ ಕಾರಣ ಕೊನೆಗೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಕೆಲ ವರ್ಷಗಳಿಂದ ಅಸ್ಸಾಂನಲ್ಲೇ ನೆಲೆಸಿರುವ ಪೂರ್ಣ ಪ್ರಮಾಣದ ಆರ್‌ಎಸ್‌ಎಸ್‌ ಕಾರ್ಯಕರ್ತ, ಬೆಂಗಳೂರು ಮೂಲದ ಮಂಜುನಾಥ್‌ರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಂಜುನಾಥ್‌ ಅವರು ಪುಟ್ಟಸ್ವಾಮಯ್ಯರನ್ನು ಭೇಟಿಯಾಗಿದ್ದು, ಅವರ ಬಳಿಯಿರುವ ಆಧಾರ್‌ ಕಾರ್ಡ್‌ ಗಮನಿಸಿದ್ದಾರೆ. ಆಗ ಪುಟ್ಟಸ್ವಾಮಯ್ಯ ಕರ್ನಾಟಕದ ಹಾಸನದವರು ಎಂಬುದು ತಿಳಿದು ಬಂದಿದೆ. ಕೂಡಲೇ ಮಂಜುನಾಥ್‌, ಹಾಸನ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರ್ಷಿತ್‌ಗೆ ಕರೆ ಮಾಡಿ ಪುಟ್ಟಸ್ವಾಮಯ್ಯ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕನ್ನಡಪ್ರಭ’ದ ಜತೆ ಈ ಕುರಿತು ಮಾತನಾಡಿದ ಹರ್ಷಿತ್‌, ಅನಾರೋಗ್ಯಕ್ಕೆ ತುತ್ತಾಗಿದ್ದ ಪುಟ್ಟಸ್ವಾಮಯ್ಯ ಅವರನ್ನು ಗುವಾಹಟಿಯ ಲತಾಸಿಲ್‌ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ರೂಪ್‌ನಗರದ ವೃದ್ಧಾಶ್ರಮದಲ್ಲಿ ಇರಿಸಿದ್ದಾರೆ ಎಂದರು.

ಅಸ್ಸಾಂ ತಲುಪಿದ್ದು ಹೇಗೆ?:

ಪುಟ್ಟಸ್ವಾಮಯ್ಯ ಸಂಬಂಧಿಕರು ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ಕೋರಿ ಹರ್ಷಿತ್‌ ತಮ್ಮ ಮೊಬೈಲ್‌ ನಂಬರ್‌ (96110 78300) ನೀಡಿದ್ದಾರೆ. ಪುಟ್ಟಸ್ವಾಮಯ್ಯ ಯಾವ ಕಾರಣಕ್ಕೆ ? ಹೇಗೆ? ಹಾಸನದಿಂದ ದೂರದ ಗುವಾಹಟಿಗೆ ಹೋದರು ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಆದರೆ, ಒಂದೇ ವಾರದಲ್ಲಿ ಹಾಸನದ ಇಬ್ಬರು ದೂರದ ಅಸ್ಸಾಂನಲ್ಲಿ ಪತ್ತೆಯಾಗಿರುವುದು ನಿಜಕ್ಕೂ ಆತಂಕ ಮೂಡಿಸಿದೆ.

ವಿಶೇಷವೆಂದರೆ ಕಾರ್ಲೆ ಗ್ರಾಮದ ಪುಟ್ಟಸ್ವಾಮಯ್ಯ ಕಾಣೆಯಾದ ಬಗ್ಗೆ ತಮ್ಮ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಗೊರೂರು ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಜಗದೀಶ್‌ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಜಯಮ್ಮಗೆ ಚಿಕಿತ್ಸೆ:

ಹಾಸನ ತಾಲೂಕು ಚಿಕ್ಕಮಂಡಿಗನಹಳ್ಳಿಯಿಂದ 2016ರ ಡಿಸೆಂಬರ್‌ನಲ್ಲಿ ಆಕಸ್ಮಿಕವಾಗಿ ಕಾಣೆಯಾಗಿದ್ದ ಜಯಮ್ಮ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಯೋಧನೊಬ್ಬನ ನೆರವಿನಿಂದ ರಾಜ್ಯಕ್ಕೆ ಆಗಮಿಸಿದ್ದು ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ವರದಿ : ದಯಾಶಂಕರ ಮೈಲಿ

click me!