ಕುಮಾರಸ್ವಾಮಿಯನ್ನು ಬಿಟ್ಟು ಹಾರಿದ ಹೆಲಿಕಾಪ್ಟರ್‌..!

By Web DeskFirst Published Oct 28, 2018, 9:06 AM IST
Highlights

ಶ್ರವಣಬೆಳಗೊಳದಲ್ಲೇ ಸಿಎಂ ಕುಮಾರಸ್ವಾಮಿ ಅವರನ್ನು ಬಿಟ್ಟು ಹೆಲಿಕಾಪ್ಟರ್ ಬೆಂಗಳೂರಿಗೆ ಹಾರಿದೆ. ಏನಾಯ್ತು? ಇಲ್ಲಿದೆ ವಿವರ.

ಹಾಸನ, [ಅ.28]: ಸಕಾಲಕ್ಕೆ ಬಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಟ್ಟು ಹೆಲಿಕಾಪ್ಟರ್‌ ಖಾಲಿ ಹಿಂತಿರುಗಿದ ಘಟನೆ ಶನಿವಾರ ಸಂಜೆ ಶ್ರವಣಬೆಳಗೊಳದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ಮತ್ತಿತರ ಕಡೆ ಲೋಕಸಭೆ ಉಪ ಚುನಾವಣೆ ಪ್ರಚಾರ ಮುಗಿಸಿಕೊಂಡು ಮುಖ್ಯಮಂತ್ರಿಗಳು ಸಂಜೆ 4.30ಕ್ಕೆ ಶ್ರವಣಬೆಳಗೊಳದ ಸಮೀಪ ಇರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. 

ಆದರೆ ಮುಖ್ಯಮಂತ್ರಿಗಳು ಸಂಜೆ 5.35 ಆದರೂ ಬರಲಿಲ್ಲ. ಆಗ ಪೈಲಟ್‌ ಬೆಳಕಿನ ಸಮಸ್ಯೆ ಆಗುತ್ತದೆ ಎಂದು ಹೇಳಿ ಹೊರಟೇ ಬಿಟ್ಟರು. ಬಿಇಎಲ್‌ ಎಲ್‌ 429 ಎಂಬ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್‌ ಮುಖ್ಯಮಂತ್ರಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು 2.55ಕ್ಕೇ ಬಂದಿಳಿದಿತ್ತು. 

ಆದರೆ ಮುಖ್ಯಮಂತ್ರಿ ಐದೂವರೆ ಗಂಟೆಯಾದರೂ ಬರಲಿಲ್ಲ. ಪೈಲಟ್‌ ಸಂಜೆ 4.30ರ ನಂತರ ಹೊರಡಲು ಮುಂದಾಗಿದ್ದರು. ಆದರೆ ಎಸ್ಪಿ ಪ್ರಕಾಶ್‌ ಗೌಡ, ಹೆಚ್ಚುವರಿ ಎಸ್ಪಿ ನಂದಿನಿ ಅವರ ಮನವಿಯಂತೆ ಸಂಜೆ 5.35ರವರೆಗೆ ಪೈಲಟ್‌ ಕಾದರು. 

ಆದರೂ ಮುಖ್ಯಮಂತ್ರಿಗಳು ಬಾರದಿದ್ದಾಗ ಬೆಳಕಿನ ಸಮಸ್ಯೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೈಲಟ್‌ ಖಾಲಿಯಾಗಿ ಬೆಂಗಳೂರಿನತ್ತ ಹೊರಟರು. ಕಾಪ್ಟರ್‌ ಹೋದ ವಿಷಯ ತಿಳಿದ ಕುಮಾರಸ್ವಾಮಿ ನಂತರ ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ತೆರಳಿದರು. ಗಂಟೆಗಟ್ಟಲೆ ಕಾದ ಅಧಿಕಾರಿಗಳು, ಕಾರ್ಯಕರ್ತರು ನಂತರ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹಿಂತಿರುಗಿದರು.

click me!