
ರೋಹ್ಟಕ್(ಆ. 25): ಡೇರಾ ಸಚ್ಚಾ ಸೌಧಾ ಸಂಘಟನೆ ಮುಖ್ಯಸ್ಥ ಹಾಗೂ ಸ್ವಘೋಷಿತ ದೇವಮಾನವ ಬಾಬಾ ರಾಮ್ ರಹೀಮ್ ಸಿಂಗ್ ವಿರುದ್ಧ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಬಾಬಾ ಬೆಂಬಲಿಗರಿಂದ ಹಿಂಸಾಚಾರಗಳು ನಡೆಯುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ಈ ಹಿಂಸಾಚಾರದಿಂದ ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಷ್ಟಕ್ಕೆ ಪರಿಹಾರವಾಗಿ ಡೇರಾ ಸಚ್ಚಾ ಸೌಧಾ ಸಂಘಟನೆಯ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಬೇಕೆಂದು ಪಂಜಾಬ್-ಹರಿಯಾಣ ಹೈಕೋರ್ಟ್ ಆದೇಶ ನೀಡಿದೆ.
ಗುರ್ಮೀತ್ ಬಾಬಾನ ಬೆಂಬಲಿಗರು 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಲಭೆಗಳಲ್ಲಿ ತೊಡಗಿದ್ದು, ನೂರಾರು ವಾಹನಗಳನ್ನು ಸುಟ್ಟುಹಾಕಿದ್ದಾರೆ. 25ಕ್ಕೂ ಹೆಚ್ಚು ಜನರು ಹಿಂಸಾಚಾರಗಳಿಗೆ ಬಲಿಯಾಗಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವು ನೋವುಗಳ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಅಪಾಯವಿದೆ. ಪಂಜಾಬ್ ಮತ್ತು ಹರಿಯಾಣದ ಅನೇಕ ಕಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಎರಡು ರಾಜ್ಯಗಳಲ್ಲಿ ವಿಪರೀತ ಹಿಂಸಾಚಾರಗಳು ನಡೆಯುತ್ತಿವೆ. ರಾಜಸ್ಥಾನದಲ್ಲೂ ಗಲಭೆ ವ್ಯಾಪಿಸುತ್ತಿದೆ. ದೆಹಲಿಯಲ್ಲಿ ಡೇರಾ ಬೆಂಬಲಿಗರು ಎರಡು ಬಸ್ಸುಗಳನ್ನು ಸುಟ್ಟುಹಾಕಿದ್ದಾರೆ.
15 ವರ್ಷದ ಹಿಂದಿನ ರೇಪ್ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಪಂಚಕುಲಾದ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಮೂಲಗಳ ಪ್ರಕಾರ ಗುರ್ಮೀತ್ ಬಾಬಾಗೆ ಕನಿಷ್ಠ 10 ವರ್ಷವಾದರೂ ಸೆರೆಮನೆವಾಸದ ಶಿಕ್ಷೆ ಸಿಗಲಿದೆ. ಜೀವಾವಧಿ ಶಿಕ್ಷೆಯಾದರೂ ಅಚ್ಚರಿ ಇಲ್ಲವೆನ್ನಲಾಗಿದೆ. ಇದೇ ವೇಳೆ, ತೀರ್ಪು ಹೊರಬಂದು ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪಂಚಕುಲಾದ ಸಿಬಿಐ ಕೋರ್ಟ್ ಆವರಣದಿಂದ ಹೆಲಿಕಾಪ್ಟರ್ ಮೂಲಕ ಗುರ್ಮೀತ್ ಬಾಬಾ ಅವರನ್ನು ರೋಹ್ಟಕ್'ನ ಜೈಲಿಗೆ ಸಾಗಿಸಲಾಗಿದೆ. ರೋಹ್ಟಕ್ ಜೈಲಿಗೆ ಸೇರಿದ ಗೆಸ್ಟ್ ಹೌಸ್'ನಲ್ಲಿ ಗುರ್ಮೀತ್ ರಾಮ್ ರಹೀಮ್'ರನ್ನು ತಾತ್ಕಾಲಿಕವಾಗಿ ಇರಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.