ಹಂಪಿ ಉತ್ಸವಕ್ಕೆ ಪದೇ ಪದೇ ಎದುರಾಗುತ್ತಿದೆ ವಿಘ್ನ

By Web DeskFirst Published Jan 3, 2019, 8:41 AM IST
Highlights

ರಾಜ್ಯ ಸರ್ಕಾರ ಹಂಪಿ ಉತ್ಸವಕ್ಕೆಂದು ಈವರೆಗೂ ಬಿಡಿಗಾಸೂ ಬಿಡುಗಡೆ ಮಾಡದಿರುವುದರಿಂದ ಜ. 12ರಿಂದ ನಡೆಯಬೇಕಿರುವ ಉತ್ಸವ ಮುಂದೂಡುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿ ಪರಿಣಮಿಸಿದೆ. 

ಬೆಂಗಳೂರು :  ಹಂಪಿ ಉತ್ಸವಕ್ಕೆ ಅದ್ಯಾಕೋ ಕಾಲ ಕೂಡಿ ಬರುವ ಹಾಗೆ ಕಾಣುತ್ತಿಲ್ಲ. ದಿನಾಂಕ ನಿಗದಿಪಡಿಸಿದಾಗಲೆಲ್ಲಾ ವಿಘ್ನಗಳು ಎದುರಾಗುತ್ತಿದ್ದು ಪದೇ ಪದೇ ಮುಂದೂಡಲ್ಪಡುತ್ತಿದೆ.

ಇದೀಗ ರಾಜ್ಯ ಸರ್ಕಾರ ಉತ್ಸವಕ್ಕೆಂದು ಈವರೆಗೂ ಬಿಡಿಗಾಸೂ ಬಿಡುಗಡೆ ಮಾಡದಿರುವುದರಿಂದ ಜ. 12ರಿಂದ ನಡೆಯಬೇಕಿರುವ ಉತ್ಸವ ಮುಂದೂಡುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿ ಪರಿಣಮಿಸಿದೆ. 

ಸಾಂಸ್ಕೃತಿಕ ಚಿಂತಕ ಹಾಗೂ ಮುತ್ಸದ್ಧಿ ರಾಜಕಾರಣಿ ದಿ. ಎಂ.ಪಿ.ಪ್ರಕಾಶ್ ಆರಂಭಿಸಿದ ಹಂಪಿ ಉತ್ಸವವನ್ನು ಪ್ರತಿ ವರ್ಷ ನ.3, 4, 5 ರಂದು ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿತ್ತು. ಈ ಬಾರಿ ಬರದ ನೆಪದಲ್ಲಿ ಉತ್ಸವ ನಡೆಸದಿರಲು ಸರ್ಕಾರ ನಿರ್ಧರಿಸಿತ್ತು. ಸಾಹಿತಿಗಳು ಹಾಗೂ ಕಲಾವಿದರ ಹೋರಾಟಕ್ಕೆ ಮಣಿದು ಮೂರು ದಿನಗಳ ಬದಲಿಗೆ ಎರಡು ದಿನ ಉತ್ಸವ ನಡೆಸುವ ನಿರ್ಧಾರ ಕೈಗೊಂಡಿತು. ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿದ ಸದಸ್ಯ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಉತ್ತರಿಸಿದ್ದ ನಿಕಟಪೂರ್ವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಜ. 12,  13ರಂದು ಉತ್ಸವ ನಡೆಸಲು ಸರ್ಕಾರ ಸಿದ್ಧವಿದೆ. 

ಈಗಾಗಲೇ ಬಳ್ಳಾರಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಹ ಕಳಿಸಿದೆ.  ಉತ್ಸವಕ್ಕೆ 8 ಕೋಟಿ ಅನುದಾನ ಬೇಡಿಕೆ ಇಟ್ಟಿದ್ದು, ಇಲಾಖೆಯ ಕ್ರಿಯಾ ಯೋಜನೆಯಲ್ಲಿ ಹಂಪಿ ಉತ್ಸವ ಕ್ಕಾಗಿಯೇ 60 ಲಕ್ಷ ಅನುದಾನದ ಅವಕಾಶ ಮಾಡಿಕೊಳ್ಳ ಲಾಗಿದೆ ಎಂದು ತಿಳಿಸಿದ್ದರು. ಸಚಿವೆ ಜಯಮಾಲಾ ಅವರ ಹೇಳಿಕೆಯಿಂದ ಜ. 12 ಮತ್ತು 13 ರಂದು ಉತ್ಸವ ನಡೆಯುವುದು ಖಚಿತ ಎಂದು ಜಿಲ್ಲೆಯ ಕಲಾವಿದರು ಪೂರ್ವ ತಾಲೀಮು ನಡೆಸಿ ಸಿದ್ಧತೆಯಲ್ಲಿದ್ದರು. ಆದರೆ ಉತ್ಸವ ದಿನಾಂಕ ಇನ್ನೂ ಸ್ಪಷ್ಟವಾಗಿ ಹೊರಬೀಳುತ್ತಿಲ್ಲ. ಹೀಗಾಗಿ ಉತ್ಸವ ನಡೆಯುವುದೋ? ಇಲ್ಲವೋ ಅನುಮಾನ ಕಲಾವಿದರಿಂದ ವ್ಯಕ್ತವಾಗಿದೆ. 

ಫೆಬ್ರವರಿಯಲ್ಲಿ ಉತ್ಸವ?: ಹಂಪಿ ಉತ್ಸವ ಸಿದ್ಧತೆಗೆ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಸರ್ಕಾರ ಈವರೆಗೆ ಯಾವುದೇ ಉತ್ಸವ ಸಂಬಂಧ ಸೂಚನೆಗಳನ್ನು ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿಲ್ಲ. ಹೀಗಾಗಿ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಉತ್ಸವ ನಡೆಯುವ ಸಾಧ್ಯತೆ ಹೆಚ್ಚು.

click me!