
ಎಸ್ಸೆಂ ಕೃಷ್ಣ ತಮ್ಮನ ಮಗ ಮತ್ತೆ ಕಾಂಗ್ರೆಸ್ ಕಟ್ಟಾಳು!
ಎಸ್.ಗಿರೀಶ್ಬಾಬು
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ತಮ್ಮನ ಮಗ ಗುರುಚರಣ್ ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಹೀಗೆ, ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಳ್ಳುವ ಹಾಗೂ ಪಕ್ಷದ ಪರ ಕೆಲಸ ಮಾಡುವ ಮಾಹಿತಿಯನ್ನು ತಮ್ಮ ದೊಡ್ಡಪ್ಪ ಎಸ್.ಎಂ. ಕೃಷ್ಣ ಅವರಿಗೂ ನೀಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಗುರುಚರಣ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ತನ್ಮೂಲಕ ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ ಹಾಗೂ ಈ ಸೇವೆಗಾಗಿ ಗುರುಚರಣ್ಗೆ ಭವಿಷ್ಯ ಕಟ್ಟಿಕೊಡುವ ಹೊಣೆಯನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ. ಹೀಗಂತ ಹೇಳುತ್ತವೆ ಕಾಂಗ್ರೆಸ್ ಮೂಲಗಳು.
ಇಷ್ಟಕ್ಕೂ ಕಾಂಗ್ರೆಸ್ ಪರ ಕೆಲಸ ಮಾಡಲು ಕೃಷ್ಣ ಅವರ ಅನುಮತಿಯನ್ನು ಗುರುಚರಣ್ ಪಡೆಯಲು ಏನು ಕಾರಣ ಎಂದು ಕೆಣಕಿದರೆ ಕುತೂಹಲಕಾರಿ ಸಂಗತಿ ಹೊರಬೀಳುತ್ತದೆ. ಕೃಷ್ಣ ಅವರು ಪಕ್ಷ ತ್ಯಜಿಸಿ ಬಿಜೆಪಿಗೆ ತೆರಳಿದ ಮೇಲೆ ಗುರುಚರಣ್ ಅವರೊಂದಿಗೆ ಬಿಜೆಪಿಗೆ ತೆರಳಲಿಲ್ಲ. ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದು ತಟಸ್ಥರಾಗಿದ್ದರು.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮದ್ದೂರು ಕಾಂಗ್ರೆಸ್ಸಿಗರ ಮೂಲಕ ಗುರುಚರಣ್ ಅವರನ್ನು ಕರೆಸಿ ಮಾತನಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ನಡೆಯೇನು ಎಂದು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದಲ್ಲೇ ಉಳಿದು ಕೆಲಸ ಮಾಡುವ ಉತ್ಸಾಹವನ್ನು ಗುರುಚರಣ್ ತೋರಿದ್ದಾರೆ. ಇದೇ ವೇಳೆ ಮದ್ದೂರಿನಿಂದ ಕೃಷ್ಣ ಅವರ ಪುತ್ರಿ ಶಾಂಭವಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ತೀವ್ರಗೊಂಡಿತ್ತು.
ಆಗ ಮತ್ತೆ ಗುರುಚರಣ್ ಕರೆಸಿದ ಸಿಎಂ, ಮದ್ದೂರಿನಲ್ಲಿ ಕೆಲಸ ಮಾಡುವ ಬಗ್ಗೆ ನಿಮ್ಮ ದೊಡ್ಡಪ್ಪನ ಸಹಮತ ಪಡೆದುಕೊಂಡು ಬಿಡಿ. ಕುಟುಂಬದಲ್ಲಿ ಸಮಸ್ಯೆಯಾಗುವುದು ಬೇಡ ಎಂದು ಸೂಚಿಸಿದ್ದರು ಎನ್ನಲಾಗಿದೆ. ಇದಕ್ಕೆ ಗುರುಚರಣ್ ಕೂಡ ನಮ್ಮ ಕುಟುಂಬದಿಂದಲೇ ಯಾರಾದರೂ ಚುನಾವಣೆಗೆ ನಿಲ್ಲುವುದಾದರೆ ನಾವು ಅವರ ಪರವಾಗಿಯೇ ಕೆಲಸ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.
ಅನಂತರ ಶಾಂಭವಿ ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂಬುದು ಇದೀಗ ಸ್ಪಷ್ಟಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗುರುಚರಣ್, ಮದ್ದೂರಿನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲು ಕೃಷ್ಣ ಅವರ ಅಭ್ಯಂತರವೇನೂ ಇಲ್ಲ. ನಿನ್ನ ಭವಿಷ್ಯ ನೀನು ನೋಡಿಕೋ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗುರುಚರಣ್ರ ರಾಜಕೀಯ ಭವಿಷ್ಯ ರೂಪಿಸುವ ಹೊಣೆ ಸಿದ್ದರಾಮಯ್ಯ ಹೆಗಲೇರಿದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ವಾಸ್ತವವಾಗಿ ಗುರುಚರಣ್ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅದು ಸಾಧ್ಯವಿಲ್ಲ ಎಂಬ ಸ್ಪಷ್ಟಸಂದೇಶ ದೊರಕಿದ ನಂತರ ಅವರು ಪಕ್ಷದ ಪರವಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಮದ್ದೂರಿನಲ್ಲಿ ಮಧು ಮಾದೇಗೌಡ ಹಾಗೂ ಕಲ್ಪನಾ ಸಿದ್ದರಾಜು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಗುರುಚರಣ್ ಈ ಇಬ್ಬರ ಪೈಕಿ ಯಾರಿಗೆ ಟಿಕೆಟ್ ದೊರಕಿದರೂ ಅವರ ಪರವಾಗಿ ಕೆಲಸ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಸಹ ಕಾಂಗ್ರೆಸ್ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ದೊಡ್ಡವರು (ಎಸ್.ಎಂ.ಕೃಷ್ಣ) ಕಾಂಗ್ರೆಸ್ ಪಕ್ಷ ತೊರೆದ ನಂತರ ನಾನೂ ಪಕ್ಷ ತೊರೆದಿದ್ದೆ. ಆದರೆ, ಬಿಜೆಪಿ ಸೇರಿರಲಿಲ್ಲ. ಆಗ ಸಿದ್ದರಾಮಯ್ಯ ಅವರು ನನ್ನನ್ನು ಕರೆಸಿ ಕಾಂಗ್ರೆಸ್ ಪರ ನಿಲ್ಲುವಂತೆ ಸೂಚಿಸಿದ್ದರು. ನಮ್ಮ ಕುಟುಂಬದವರಲ್ಲಿ ಯಾರೇ ಒಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಇಂತಹ ನಿರ್ಧಾರ ಕೈಗೊಳ್ಳಲು ಆಗುತ್ತಿರಲಿಲ್ಲ. ಈಗ ನಮ್ಮ ಕುಟುಂಬದಿಂದ ಯಾರೂ ಚುನಾವಣೆಗೆ ನಿಲ್ಲುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ತಟಸ್ಥವಾಗಿ ಉಳಿದರೆ ಕ್ಷೇತ್ರದಲ್ಲಿರುವ ನಮ್ಮ ರಾಜಕೀಯ ಶಕ್ತಿ ಕುಂದುತ್ತದೆ. ಹೀಗಾಗಿ ಕಾಂಗ್ರೆಸ್ ಪರ ನಿಲ್ಲುವ ಮಾಹಿತಿಯನ್ನು ದೊಡ್ಡವರಿಗೂ ನೀಡಿದ್ದೇನೆ. ಸೋಮವಾರ ಮತ್ತೆ ಸಿಎಂ ಕರೆಸಿ ಪಕ್ಷದ ಪರ ಕೆಲಸ ಮಾಡುವಂತೆ ಹೇಳಿದರು. ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಒಂದು ವಾರದಲ್ಲಿ ತೀರ್ಮಾನ ತಿಳಿಸುವುದಾಗಿ ಸಿಎಂ ಅವರಿಗೆ ತಿಳಿಸಿದ್ದೇನೆ.
- ಗುರುಚರಣ್, ಮದ್ದೂರು ಕ್ಷೇತ್ರದ ಮುಖಂಡ ಹಾಗೂ ಎಸ್.ಎಂ.ಕೃಷ್ಣ ಸಂಬಂಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.