
ಅಹಮದಾಬಾದ್: 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ನರೋಡಾ ಗಾಮ್ ಹತ್ಯಾಕಾಂಡದಲ್ಲಿ ತಮ್ಮ ಪರ ಸಾಕ್ಷ್ಯ ನುಡಿಯಲು ಅಮಿತ್ ಶಾ’ರನ್ನು ಕರೆತರಲು ಆರೋಪಿ ಮಾಯಾ ಕೊಡ್ನಾನಿಗೆ ನ್ಯಾಯಾಲಯವು ಕೊನೆಯ ಅವಕಾಶವನ್ನು ನೀಡಿದೆ.
ಈ ಅವಕಾಶ ತಪ್ಪಿದರೆ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲವೆಂದು ನರೋಡಾ ಗಾಮ್ ಹತ್ಯಾಕಾಂಡದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿಗೆ ವಿಶೇಷ ವಿಚಾರಣಾ ನ್ಯಾಯಾಲಯವು ಎಚ್ಚರಿಸಿದೆ.
ನ್ಯಾಯಾಲಯದಲ್ಲಿ ಹಾಜರಾಗುವಂತೆ ಅಮಿತ್ ಶಾ ಅವರಿಗೆ ಸಮನ್ಸ್ ಕಳುಹಿಸಬೇಕು, ಅದಕ್ಕೆ ಅವರ ವಿಳಾಸ ಪತ್ತೆಹಚ್ಚಲು ಸಮಾಯಾವಕಾಶ ಬೇಕೆಂದು ಕೋರಿ ಕಳೆದ ಸೋಮವಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು.
ಅಮಿತ್ ಶಾ ಬಹಳ ಬಿಝಿಯಾಗಿರುತ್ತಾರೆ. ಅವರ ಯಾವ ವಿಳಾಸಕ್ಕೆ ಸಮನ್ಸ್ ಕಳುಹಿಸಬೇಕು ಎಂದು ನಿರ್ಧರಿಸಲು ಕಷ್ಟವಾಗುತ್ತಿದೆ, ಆದುದರಿಂದ ಸೆ.12ರವರೆಗೆ ಸಮಯವನ್ನು ಕೋರಲಾಗಿತ್ತು. ಆದರೆ, ನ್ಯಾಯಾಲಯವು ಸೆ.8ರ ಗಡುವನ್ನು ನೀಡಿತ್ತು. ಅಮಿತ್ ಶಾ ಶುಕ್ರವಾರ ಕೂಡಾ ಹಾಜರಾಗದ ಕಾರಣ ಕೊಡ್ನಾನಿಗೆ ಇನ್ನೊಮ್ಮೆ ಕೊನೆಯ ಬಾರಿಗೆ ಅವಕಾಶ ನೀಡಲಾಗಿದೆ.
ನರೋಡಾ ಗಾಮ್ ಹತ್ಯಾಕಾಂಡ ಸಂದರ್ಭದಲ್ಲಿ ತಾನು ಆ ಘಟನಾ ಸ್ಥಳದಲ್ಲಿರಲಿಲ್ಲ ಎಂಬುವುದನ್ನು ಸಾಬೀತು ಪಡಿಸಲು, ಅಮಿತ್ ಶಾ ಸೇರಿದಂತೆ 14 ಮಂದಿಯ ಹೆಸರುಗಳನ್ನು ಸಾಕ್ಷಿದಾರರಾಗಿ ಉಲ್ಲೇಖಿಸಲಾಗಿತ್ತು. ಅವರ ಪೈಕಿ ಆಕೆಯ ಪತಿ ಸುರೇಂದ್ರ ಕೊಡ್ನಾನಿ, ಬಿಜೆಪಿ ಕಾರ್ಪೊರೇಟರ್ ದಿನೇಶ್ ಮಾಕ್ವಾನ ಹಾಗೂ ಮಾಜಿ ಬಿಜೆಪಿ ಶಾಸಕ ಅಮರೇಶ್ ಗೋವಿಂದಭಾಯಿ ಪಟೇಲ್ ಸೇರಿದಂತೆ 12 ಮಂದಿ ಈಗಾಗಲೇ ಕೊಡ್ನಾನಿ ಪರ ಸಾಕ್ಷಿ ನುಡಿದಿದ್ದಾರೆ.
ಮಾಯಾ ಕೊಡ್ನಾನಿ ಮೇಲೆ ನರೋಡಾ ಗಾಮ್’ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪವಿದೆ. ಘಟನೆಯಲ್ಲಿ 11 ಮುಸ್ಲಿಮರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ 82 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ.
ಅದೇ ಸಂದರ್ಭದಲ್ಲಿ ನರೋಡಾ ಗಾಮ್ ಬಳಿಯಿರುವ ನರೋಡಾ ಪಾಟಿಯಾ ಎಂಬಲ್ಲಿ ನಡೆದ ಇನ್ನೊಂದು ಹತ್ಯಾಕಾಂಡದಲ್ಲಿ ಕೊಡ್ನಾನಿ ಹಾಗು ಇತರ 31 ಆರೋಪಿಗಳನ್ನು ನ್ಯಾಯಾಲಯವು 2012ರಲ್ಲೇ ದೋಷಿಯೆಂದು ತೀರ್ಪಿತ್ತು, ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಆಕೆ ಗುಜರಾತ್ ಹೈಕೋರ್ಟ್’ನಲ್ಲಿ ಪ್ರಶ್ನಿಸಿದ್ದು, ಕಳೆದ ಆ.30ರಂದು ವಿಚಾರಣೆ ಮುಗಿದಿದೆ. ತೀರ್ಪುನ್ನು ಕಾಯ್ದಿರಿಸಲಾಗಿದೆ.
ನರೋಡಾ ಗಾಮ್ ಪ್ರಕರಣದ ವಿಚಾರಣೆಯನ್ನು 4 ತಿಂಗಳಿನೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.